ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್‌ ವಿತರಣೆ: ಸಚಿವ ಮಧು ಬಂಗಾರಪ್ಪ

Published 16 ನವೆಂಬರ್ 2023, 15:39 IST
Last Updated 16 ನವೆಂಬರ್ 2023, 15:39 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ತಿಂಗಳಿನಿಂದ ಶಾಲೆಗಳಲ್ಲಿ ಹಾಲಿನ ಜೊತೆ ರಾಗಿ ಮಾಲ್ಟ್‌ ವಿತರಿಸಲಾಗುವುದು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಜೊತೆ ಗುರುವಾರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರೇತರ ಸಂಸ್ಥೆಯೊಂದು ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಿತ್ತು. ಅದು ಯಶಸ್ವಿಯಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದರು.

‘13 ಸಾವಿರ ಶಿಕ್ಷಕರ ನೇಮಕಾತಿಯಿಂದ ಶಿಕ್ಷಕರ ಕೊರತೆ ನೀಗಿದೆ. ಇನ್ನೂ 400ರಿಂದ 500 ಶಿಕ್ಷಕರನ್ನು ನೇಮಿಸಿಕೊಳ್ಳುವ ವಿಚಾರ ಕೋರ್ಟ್‌ನಲ್ಲಿದೆ. ಕೋರ್ಟ್‌ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ’ ಎಂದರು.

3 ಸಾವಿರ ಕೆಪಿಎಸ್‌: ‘ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು (ಕೆಪಿಎಸ್‌) ತೆರೆಯಲು ಉದ್ದೇಶಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ತಲಾ ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ ಮೂರು ಸಾವಿರ ಕೆಪಿಎಸ್‌ ಶಾಲೆಗಳನ್ನು ಸಿಎಸ್‌ಆರ್‌ ನಿಧಿಯ ನೆರವಿನಿಂದ ತೆರೆಯಲು ಚಿಂತನೆ ನಡೆದಿದೆ. ಇದಕ್ಕೆ ₹ 2,500 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಈಗಾಗಲೇ ₹ 600 ಕೋಟಿಯಷ್ಟು ಸಿಎಸ್‌ಆರ್‌ ನಿಧಿ ಲಭ್ಯವಿದೆ’ ಎಂದರು.

‘ಮಳೆಯಿಂದ ಶಿಥಿಲಗೊಂಡ ಶಾಲಾ ಕಟ್ಟಡಗಳಿಗೆ ಮೂಲಸೌಲಭ್ಯ ಒದಗಿಸುವ ಕೆಲಸವೂ ನಡೆಯುತ್ತಿದೆ. 7,311 ಹೊಸ ಕೊಠಡಿಗಳ ನಿರ್ಮಾಣ, 3,593 ಶಾಲೆಗಳಲ್ಲಿ ದುರಸ್ತಿ, 7,100 ಶೌಚಾಲಯಗಳನ್ನು ಸುಮಾರು ₹ 1 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನರೇಗಾ ಯೋಜನೆಯಲ್ಲಿ ಶಾಲೆಗಳ ಆವರಣ ಗೋಡೆ, ಅಡುಗೆ ಕೋಣೆ, ಶೌಚಾಲಯಗಳ ನಿರ್ಮಾಣ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದೂ ತಿಳಿಸಿದರು.

ಎಸ್​​ಇಪಿ (ರಾಜ್ಯ ಶಿಕ್ಷಣ ನೀತಿ) ಜಾರಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ರಾಜ್ಯ ಶಿಕ್ಷಣ ನೀತಿ ರಚನೆಗೆ ಸಂಬಂಧಿಸಿದಂತೆ ಮೊದಲ ಸಭೆ ಆಗಿದೆ. ಎಸ್​​ಇಪಿ ಜಾರಿ ಮೂಲಕ ಉತ್ತಮ ಶಿಕ್ಷಣ ವ್ಯವಸ್ಥೆ ನಿರ್ಮಾಣ ಆಗಲಿದೆ. ಈ ನೀತಿ ರಾಜ್ಯ ಪಠ್ಯಕ್ರಮಕ್ಕೋ, ಸಿಬಿಎಸ್‌ಇ ಪಠ್ಯಕ್ಕೋ ಎನ್ನುವುದು ತಜ್ಞರ ವರದಿ ಬಂದ ಬಳಿಕ ಗೊತ್ತಾಗಲಿದೆ. ಆದರೆ, ರಾಜ್ಯದ ಪಠ್ಯಕ್ರಮ ಸಿಬಿಎಸ್‌ಇಗಿಂತ ಉತ್ತಮವಾಗಿ ಇರಲಿದೆ. ವರದಿ ಬಂದ ಬಳಿಕ ಮುಖ್ಯಮಂತ್ರಿ ಜೊತೆ ಚರ್ಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT