ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ ಅಭಿವೃದ್ಧಿ ಕಾಮಗಾರಿ | ಭೂಸ್ವಾಧೀನ ಕಾರ್ಯಕ್ಕೆ ಚುರುಕು: ಸೋಮಣ್ಣ ಸೂಚನೆ

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬಾಕಿ ಉಳಿದಿರುವ ರೈಲ್ವೆ ಅಭಿವೃದ್ಧಿ ಯೋಜನೆಗಳ ಕಾಮಗಾರಿ ತ್ವರಿತಗೊಳಿಸಲು ಭೂಸ್ವಾಧೀನ ಕಾರ್ಯಕ್ಕೆ ಚುರುಕು ನೀಡಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಸೂಚಿಸಿದರು.

ಇದಕ್ಕಾಗಿ ರೈಲ್ವೆ ಅಧಿಕಾರಿಗಳು, ಜಿಲ್ಲಾಡಳಿತ ಮತ್ತು ಕೆ–ರೈಡ್‌ ಸೇರಿ ವಿವಿಧ ಮಧ್ಯಸ್ಥಗಾರರ ನಡುವಿನ ಸಮನ್ವಯ ಅತ್ಯಗತ್ಯ ಎಂದು ಅವರು ಸೋಮವಾರ ರೈಲ್ವೆ ಅಧಿಕಾರಿಗಳ ಸಭೆಯ ಬಳಿಕ  ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಮುಂಬರುವ ವರ್ಷಗಳಲ್ಲಿ ಎಲ್ಲಾ ಬಾಕಿ ಯೋಜನೆಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಲಾಗುವುದು. ರೈಲ್ವೆ ಸುರಕ್ಷತೆ ಮತ್ತು ರೈಲುಗಳ ವೇಗವನ್ನು ಹೆಚ್ಚಿಸಲು ಎಲ್ಲಾ ಲೆವೆಲ್‌ ಕ್ರಾಸಿಂಗ್‌ಗಳನ್ನು ತೆಗೆದು ಹಾಕಬೇಕೆನ್ನುವ ಸರ್ಕಾರದ ಆಲೋಚನೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಬೇಕು. ಅದರಲ್ಲೂ ಬೆಂಗಳೂರು ಸುತ್ತಮುತ್ತಲಿನ ಲೆವೆಲ್‌ ಕ್ರಾಸಿಂಗ್‌ಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದೂ ಸೋಮಣ್ಣ ನಿರ್ದೇಶನ ನೀಡಿದರು.

‘ಅಧಿಕಾರಿಗಳ ಸಭೆಯಲ್ಲಿ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಸಂಪೂರ್ಣ ಪರಿಶೀಲನೆ ನಡೆಸಲಾಯಿತು. ಹೊಸ ಸಾಲಿನ ಒಂಬತ್ತು ಯೋಜನೆಗಳು ಮತ್ತು ಐದು ದ್ವಿಪಥೀಕರಣಗೊಳಿಸುವ ಯೋಜನೆಗಳೂ ಸೇರಿ 14 ಮಹತ್ವದ ಯೋಜನೆಗಳ ಕುರಿತು ಮಾಹಿತಿ ಪಡೆದೆ. ಒಟ್ಟು 1,264 ಕಿ.ಮೀ ಹೊಸ ಮಾರ್ಗ ಮತ್ತು 707 ಕಿ.ಮೀ ದ್ವಿಪಥೀಕರಣ ಯೋಜನೆ ಒಳಗೊಂಡಿದೆ. 289 ಕಿ.ಮೀ ಹೊಸ ಮಾರ್ಗ ಮತ್ತು 502 ಕಿ.ಮೀ ಡಬ್ಲಿಂಗ್‌ ಲೈನ್‌ ಈಗಾಗಲೇ ಕಾರ್ಯಾರಂಭಗೊಂಡಿದೆ’ ಎಂದು ಸೋಮಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್‌ ಮೋಹನ್‌, ಮುಖ್ಯ ಆಡಳಿತಾಧಿಕಾರಿ ರಾಮಗೋಪಾಲ್‌ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

* 5 ದ್ವಿಪಥೀಕರಣ ಯೋಜನೆಗಳು: ಹೊಟ್ಗಿ–ಕುಡ್ಗಿ–ಗದಗ ಯಶವಂತಪುರ–ಚನ್ನಸಂದ್ರ ಬೈಯ್ಯಪ್ಪನಹಳ್ಳಿ–ಹೊಸೂರು ಬೆಂಗಳೂರು–ವೈಟ್‌ಫೀಲ್ಡ್‌ ಹೊಸಪೇಟೆ–ಹುಬ್ಬಳ್ಳಿ–ಲೋಂಡಾ–ತಿನೈಘಾಟ್‌–ವಾಸ್ಕೋ ಡ ಗಾಮಾ

* 9 ಹೊಸ ಯೋಜನೆಗಳು: ತುಮಕೂರು–ಕಲ್ಯಾಣದುರ್ಗ ಮೂಲಕ ರಾಯದುರ್ಗ ತುಮಕೂರು–ಚಿತ್ರದುರ್ಗ–ದಾವಣಗೆರೆ ಗಿಣಿಗೇರಾ–ರಾಯಚೂರು ಬಾಗಲಕೋಟೆ–ಕುಡಚಿ ಗದಗ–ವಾಡಿ ಕಡೂರು–ಚಿಕ್ಕಮಗಳೂರು ಶಿವಮೊಗ್ಗ–ಶಿಕಾರಿಪುರ– ರಾಣೆಬೆನ್ನೂರು ಬೆಳಗಾವಿ–ಕಿತ್ತೂರು ಮಾರ್ಗವಾಗಿ ಧಾರವಾಡ ಹಾಸನ–ಬೇಲೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT