ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ: ಹಲವೆಡೆ ಗುಡ್ಡ ಕುಸಿತ, ಜಲಾವೃತ ಭೀತಿ

Published 7 ಜುಲೈ 2024, 23:51 IST
Last Updated 7 ಜುಲೈ 2024, 23:51 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಗಾಳಿ ಸಹಿತ ಬಿರುಸಿನ ಮಳೆ ಸುರಿಯಿತು. ಇದರಿಂದ ಕೆಲವೆಡೆ ಗುಡ್ಡ ಕುಸಿತ, ಜಲಾವೃತ ಸಮಸ್ಯೆ ಎದುರಾಯಿತು.

ರಾಷ್ಟ್ರೀಯ ಹೆದ್ದಾರಿ–66ರ ಹೊನ್ನಾವರ ಪಟ್ಟಣದ ಕರ್ನಲ್ ಹಿಲ್ ಬಳಿ ಗುಡ್ಡ ಕುಸಿತ ಸಂಭವಿಸಿ ಹೆದ್ದಾರಿ ಮೇಲೆ ಬಂಡೆಗಳು ಉರುಳಿ ಬಿದ್ದಿದ್ದವು. ಇದರಿಂದ ಕೆಲ ತಾಸು ಸಂಚಾರ ವ್ಯತ್ಯಯ ಉಂಟಾಗಿತ್ತು. ಯಲ್ಲಾಪುರ ತಾಲ್ಲೂಕಿನ ಅರೆಬೈಲ್ ಘಟ್ಟದಲ್ಲಿ ಬೃಹದಾಕಾರದ ಮರ ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಕಾರವಾರ ಭಾಗದಲ್ಲಿ ನಿರಂತರ ಮಳೆ ಸುರಿದಿದ್ದರಿಂದ ಇಡೂರು, ಚೆಂಡಿಯಾ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತ ಸಮಸ್ಯೆ ಎದುರಿಸಿದವು. ಅಘನಾಶಿನಿ, ಗುಂಡಬಾಳ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಪ್ರವಾಹ ಭೀತಿ ಎದುರಾಗಿದ್ದು, ಆ ಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ.

ತುಂಗಭದ್ರಾ ಜಲಾಶಯ–50 ಸಾವಿರ ಕ್ಯುಸೆಕ್‌ ಒಳಹರಿವು

ಹೊಸಪೇಟೆ (ವಿಜಯನಗರ) ವರದಿ: ಮಲೆನಾಡು ಭಾಗದಲ್ಲಿ ಭರ್ಜರಿ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 50 ಸಾವಿರ ಕ್ಯುಸೆಕ್‌ ಮೀರಿದ್ದು, ಒಂದೇ ದಿನದಲ್ಲಿ 5 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ.

ಗರಿಷ್ಠ 1,633 ಅಡಿ ಎತ್ತರದ ಅಣೆಕಟ್ಟೆಯಲ್ಲಿ ಶನಿವಾರ 1,593.19 ಅಡಿಯಷ್ಟಿದ್ದ ನೀರಿನ ಮಟ್ಟ (13.90 ಟಿಎಂಸಿ ಅಡಿ)ಭಾನುವಾರ 1,597.31 ಅಡಿಗೆ (18.24 ಟಿಎಂಸಿ ಅಡಿ) ಏರಿಕೆಯಾಗಿದೆ.  

ಕಳೆದ ವರ್ಷ ಮುಂಗಾರು ವಿಳಂಬ ವಾಗಿದ್ದರಿಂದ ಜಲಾಶಯದಲ್ಲಿ ಈ ಅವಧಿಯಲ್ಲಿ 3.08 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿತ್ತು.

ಮಲೆನಾಡಿನಲ್ಲಿ ಮುಂದುವರಿದ ಮಳೆ

(ಶಿವಮೊಗ್ಗ ವರದಿ): ಜಿಲ್ಲೆಯಲ್ಲಿ ಭಾನುವಾರವೂ ಮಳೆ ಮುಂದು ವರೆದಿದ್ದು, ಹೊಸನಗರ ತಾಲ್ಲೂಕಿನ ಚಕ್ರಾ ವ್ಯಾಪ್ತಿಯಲ್ಲಿ 13.05 ಸೆಂ.ಮೀ. ಮಳೆಯಾಗಿದೆ.

ಸಾವೇಹಕ್ಲು ಪ್ರದೇಶದಲ್ಲಿ 11.8 ಸೆಂ.ಮೀ, ಹುಲಿಕಲ್‌ನಲ್ಲಿ 7.03 ಸೆಂ.ಮೀ,
ಮಾಸ್ತಿಕಟ್ಟೆಯಲ್ಲಿ 8.0 ಸೆಂ.ಮೀ ಮಳೆಯಾಗಿದೆ.

ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ಶಿವಮೊಗ್ಗ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಸಾಧಾರಣವಾಗಿ ಮಳೆ ಸುರಿಯಿತು.

(ದಾವಣಗೆರೆ ವರದಿ): ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ತಾಲ್ಲೂಕಿನಲ್ಲಿ ಮಧ್ಯಾಹ್ನದಿಂದಲೇ ಮಳೆ ಸುರಿಯಿತು.

ದಾವಣಗೆರೆ ನಗರದಲ್ಲಿ ದಿನವಿಡೀ ಮೋಡ ಕವಿದ ವಾತಾವರಣದ ನಡುವೆ ಆಗಾಗ ಮಳೆಯ ಸಿಂಚನವಾಯಿತು. ಮಧ್ಯಾಹ್ನ ಮತ್ತು ಸಂಜೆ ಅರ್ಧ ಗಂಟೆ ಉತ್ತಮ ಮಳೆ ಸುರಿಯಿತು. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ.

(ಮಂಗಳೂರು ವರದಿ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆ ಎರಡು ಮೂರು ಸಲ ಬಿಟ್ಟು ಬಿಟ್ಟು ಮಳೆ ಸುರಿಯಿತು. ಬಳಿಕ ಕೆಲ ಹೊತ್ತು ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಮಧ್ಯಾಹ್ನ ಮತ್ತೆ ತುಂತುರು ಮಳೆ ಸುರಿಯಿತು.

ಭಾನುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಸುಳ್ಯ ತಾಲ್ಲೂಕಿನ ಕಲ್ಮಡ್ಕದಲ್ಲಿ 15.05 ಸೆಂ.ಮೀ. ಮಳೆಯಾಗಿದೆ. ಇದು ರಾಜ್ಯದಲ್ಲೇ ಗರಿಷ್ಠ. ಮಂಗಳೂರು ತಾಲ್ಲೂಕಿನಲ್ಲಿ ಒಂದು ಮನೆ ಸಂಪೂರ್ಣ ಹಾನಿಗೊಳಗಾಗಿದ್ದು, ಇನ್ನೊಂದು ಮನೆ ಭಾಗಶಃ ಹಾನಿಗೊಂಡಿದೆ.

ಇದೇ 8, 9, 11 ಮತ್ತು 12ರಂದು ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಾಳಿಯಿಂದ ಬಿರುಸಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ದಿನಗಳಲ್ಲಿ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ.

(ಉಡುಪಿ ವರದಿ): ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಿಗ್ಗೆ ಧಾರಾಕಾರ ಮಳೆ ಸುರಿದಿದೆ. ಮಧ್ಯಾಹ್ನದವರೆಗೆ ಬಿಡುವು ನೀಡಿದ್ದ ಮಳೆ ಮಧ್ಯಾಹ್ನದ ನಂತರ ಮತ್ತೆ ಬಿರುಸುಗೊಂಡಿದೆ. ಕುಂದಾಪುರದಲ್ಲಿ 5 ಸೆಂ.ಮೀ., ಉಡುಪಿಯಲ್ಲಿ 6 ಸೆಂ,ಮೀ., ಬ್ರಹ್ಮಾವರದಲ್ಲಿ 5 ಸೆಂ.ಮೀ. ಮಳೆಯಾಗಿದೆ. ಬ್ರಹ್ಮಾವರ ಕೋಟ ಪರಿಸರದಲ್ಲಿ ಭಾರಿ ಮಳೆಯಾಗುತ್ತಿದ್ದು ನೆರೆ ಭೀತಿ ಕಾಣಿಸಿಕೊಂಡಿದೆ. ಕೋಟ ಪರಿಸರದಲ್ಲಿ ಮಳೆಯೊಂದಿಗೆ ಗಾಳಿಯೂ ರಭಸವಾಗಿ ಬೀಸುತ್ತಿದ್ದು, ಅನೇಕ ಕಡೆ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು.

ನಿರಂತರ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ–66 ರಂಗಿನಕಟ್ಟಾ ಬಳಿ ಜಲಾವೃತಗೊಂಡ ಪರಿಣಾಮ ವಾಹನ ಸವಾರರು ಭಾನುವಾರ ಸಂಚರಿಸಲು ಪರದಾಡಬೇಕಾಯಿತು
ನಿರಂತರ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ–66 ರಂಗಿನಕಟ್ಟಾ ಬಳಿ ಜಲಾವೃತಗೊಂಡ ಪರಿಣಾಮ ವಾಹನ ಸವಾರರು ಭಾನುವಾರ ಸಂಚರಿಸಲು ಪರದಾಡಬೇಕಾಯಿತು
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಭಾನುವಾರ ಒಂದೇ ದಿನದಲ್ಲಿ 5 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ –ಪ್ರಜಾವಾಣಿ ಚಿತ್ರ
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಲ್ಲಿ ಭಾನುವಾರ ಒಂದೇ ದಿನದಲ್ಲಿ 5 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT