ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ, ಒಣಗುತ್ತಿದೆ ಬೆಳೆ

ಕಾಯಿ ಕಟ್ಟುವ ಹಂತದಲ್ಲೇ ಬಾಡಿ ನಿಂತ ಶೇಂಗಾ
Last Updated 21 ಸೆಪ್ಟೆಂಬರ್ 2021, 22:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭದಲ್ಲಿ ಚುರುಕಾಗಿ, ಹದವಾಗಿ ಮಳೆಯಾಗಿ ಕೃಷಿಗೆ ಅನುಕೂಲವಾಗಿತ್ತು. ಆದರೆ, ಬಿತ್ತನೆ ನಂತರ ಮಳೆ ಕೈಕೊಟ್ಟಿದ್ದು, ಮಳೆಯಾಶ್ರಿತ ಬೆಳೆಗಳು ಒಣಗುತ್ತಿವೆ. ಇನ್ನು ಮುಂದೆ ಮಳೆ ಬಂದರೂ ಕೆಲವು ಬೆಳೆಗಳು ಚಿಗುರುವುದಿಲ್ಲ ಎಂಬ ಹಂತ ತಲುಪಿವೆ.

ತುಮಕೂರು ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ ಬೆಳೆ ನೆಲ ಕಚ್ಚುವ ಹಂತಕ್ಕೆ ತಲುಪಿದೆ. ಪ್ರಮುಖವಾಗಿ ಕಡಲೆ ಕಾಯಿ ಬೆಳೆಯುವ ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ತಾಲ್ಲೂಕು ಬರದ ಛಾಯೆಗೆ ಸಿಲುಕಿದೆ. ಈ ನಾಲ್ಕು ತಾಲ್ಲೂಕುಗಳಲ್ಲಿ ಆಗಸ್ಟ್ ಕೊನೆ ವಾರದಿಂದಲೂ ಮಳೆಯಾಗಿಲ್ಲ.

ಬಿತ್ತನೆಯಾಗಿದ್ದ ಶೇಂಗಾ ಕಾಯಿ ಕಟ್ಟುವ ಹಂತದಲ್ಲೇ ಬಾಡಿ ನಿಂತಿದೆ. ಭೂಮಿಯಲ್ಲಿ ತೇವಾಂಶ ಇಲ್ಲದೆ ಕಾಯಿ ಕಟ್ಟಿಲ್ಲ. ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ‍ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದ್ದು, ಈ ಬಾರಿ ಬೆಳೆ ರೈತರ ಕೈಸೇರುವುದು ಅನುಮಾನ. ಈಗ ಗಿಡ ಬಾಡಿದ್ದು, ಈ ಹಂತದಲ್ಲಿ ಮಳೆಯಾದರೂ ಕಾಯಿ ಕಟ್ಟುವುದಿಲ್ಲ. ಬಹುತೇಕ ಬೆಳೆಗೆ ಹಾನಿಯಾಗಿದ್ದು, ರೈತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಜಿಲ್ಲೆಯ ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ಭಾಗದಲ್ಲಿ ರಾಗಿ ಬೆಳೆ ಒಣಗುತ್ತಿದೆ. ತಕ್ಷಣಕ್ಕೆ ಮಳೆಯಾದರೆ ಅಲ್ಪ ಸ್ವಲ್ಪವಾದರೂ ರಾಗಿ ಕಾಳು ನೋಡಬಹುದು. ಇಲ್ಲವಾದರೆ ಅದೂ ಇಲ್ಲ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. 15 ದಿನಗಳಿಂದಲೂ ಬಿಸಿಲು ಹೆಚ್ಚಿದ್ದು, ಬೆಳೆ ಒಣಗುತ್ತಿದೆ. ಈಗಾಗಲೇ ಶೇ 15–20ರಷ್ಟು ಬೆಳೆಗೆ ಭಾಗಶಃ ಹಾನಿಯಾಗಿರುವುದಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ರಾಮನಗರ ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ ಈವರೆಗೆ 356 ಮಿ.ಮೀ.ಗೆ ಪ್ರತಿಯಾಗಿ 376 ಮಿ.ಮೀ. ಮಳೆ ಸುರಿದಿದೆ. ಇದು ವಾಡಿಕೆಗಿಂತ ಹೆಚ್ಚು ಮಳೆ. ಆದರೆ, ಸೆಪ್ಟೆಂಬರ್‌ನಲ್ಲಿ ಮಳೆಯಾಗಿಲ್ಲ.

ಹತ್ತಿ ಇಳುವರಿಗೆ ಹಾನಿ: ಧಾರವಾಡ, ಗದಗ, ವಿಜಯನಗರ ಹಾಗೂ ಬೆಳಗಾವಿಯ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದೆ ಮೆಕ್ಕೆಜೋಳ, ಜೋಳದ ತೆನೆಗಳು ಬಾಡುತ್ತಿವೆ. ಹತ್ತಿಯ ಬೆಳವಣಿಗೆ ಮಂದವಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ 23 ಸಾವಿರ ಹೆಕ್ಟೆರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಈಗ ಮಳೆಯ ಪ್ರಮಾಣ ಕ್ಷೀಣಿಸಿದ್ದರಿಂದ ಹತ್ತಿಯ ಇಳುವರಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.

ಬೆಳಗಾವಿ ಜಿಲ್ಲೆಯ ತೆಲಸಂಗ ಹೋಬಳಿಯಲ್ಲಿ 5 ಸಾವಿರ ಎಕರೆಯಲ್ಲಿ ಬೆಳೆದಿರುವ ಗೋವಿನ ಜೋಳ ಮಳೆ‌ ಕೊರತೆಯಿಂದ ಒಣಗುತ್ತಿದೆ. ವಿಜಯನಗರ ಜಿಲ್ಲೆಯ ವಿವಿಧ ಗ್ರಾಮಗಳಲ್ಲೂ ಮೆಕ್ಕೆಜೋಳ ಬೆಳೆಯು ಬಾಡುತ್ತಿವೆ. ಗದಗ ಜಿಲ್ಲೆಯಲ್ಲಿ ರೋಗದ ಹಾವಳಿಯಿಂದ ಚೇತರಿಸಿಕೊಂಡ ಶೇಂಗಾ, ಹತ್ತಿಗೆ ಮಳೆ ಕೊರತೆ ಕಾಡಲಾರಂಭಿಸಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್‌.ಪೇಟೆ ತಾಲ್ಲೂಕುಗಳಲ್ಲಿ ಮಳೆ ಕೊರತೆ ಕಾಡುತ್ತಿದ್ದು ಅಪಾರ ಪ್ರಮಾಣದ ರಾಗಿ ಬೆಳೆ ನಾಶವಾಗಿದೆ. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ ಶೇ 53.3ರಷ್ಟು, ನಾಗಮಂಗಲ ತಾಲ್ಲೂಕಿನಲ್ಲಿ ಶೇ 55ರಷ್ಟು ಮಳೆ ಕೊರತೆಯಾಗಿದೆ. ಕೆಲವೆಡೆ ಕಾಯಿ ಕಟ್ಟುವ ಹಂತದಲ್ಲಿ ಮಳೆ ಕೊರತೆಯಾಗಿ ಬೆಳೆ ನಾಶವಾಗಿದೆ. ಇನ್ನೂ ಕೆಲವೆಡೆ ನಾಟಿ ಮಾಡಿದ ಆರಂಭದಿಂದಲೇ ಮಳೆ ಬೀಳದ ಕಾರಣ ಸಸಿ ನೆಲದಲ್ಲೇ ಒಣಗಿ ಹೋಗಿದೆ.

ಬಾಡುತ್ತಿರುವ ಜೋಳ: ಹಾಸನ ಜಿಲ್ಲೆಯಲ್ಲಿ ವಾಡಿಕೆ ಮಳೆ ಕಡಿಮೆಯಾದ ಪರಿಣಾಮ ತೇವಾಂಶ ಕೊರತೆಯಿಂದ ಚನ್ನರಾಯಪಟ್ಟಣ, ಅರಸೀಕೆರೆ, ಜಾವಗಲ್‌ ಭಾಗದಲ್ಲಿ ಮೆಕ್ಕೆಜೋಳ, ರಾಗಿ ಬಾಡಲು ಆರಂಭಿಸಿದೆ.

***

ಮಳೆ ಇಲ್ಲದೆ ರಾಗಿ ಬೆಳೆಯೆಲ್ಲ ಒಣಗಿಹೋಗಿದೆ. ಜೀವನ ಮಾಡುವುದೇ ಕಷ್ಟ ಆಗಿದೆ. ದನ ಕರುಗಳಿಗೆ ಮೇವಿಲ್ಲ ಎಂಬಂತಾಗಿದೆ.
-ಸಾಮ್ಯನಾಯ್ಕ, ಸೋಮನಹಳ್ಳಿ, ತುಮಕೂರು

*

ಒಂದು ವಾರದಲ್ಲಿ ಮಳೆಯಾದ್ರೆ ಪರವಾಗಿಲ್ಲ. ರಾಗಿ, ಜೋಳ ಹಾಕಿದವರು ಬಚಾವ್‌ ಆಗ್ತೇವೆ. ಇಲ್ಲ ಅಂದ್ರೆ, ಎಲ್ಲ ಸಂಪೂರ್ಣ ಒಣಗಿಹೋಗುತ್ತೆ.
-ರಾಜಣ್ಣ, ಹಿರೀಸಾವೆ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT