ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್‌ಗೆ ಒಳಗಾಗಲು ನನಗೆ ಕ್ಯಾನ್ಸರ್‌ ಇಲ್ಲ: ರಾಜೂಗೌಡ

Published 3 ಸೆಪ್ಟೆಂಬರ್ 2023, 14:24 IST
Last Updated 3 ಸೆಪ್ಟೆಂಬರ್ 2023, 14:24 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಆಪರೇಷನ್‌ಗೆ ಒಳಗಾಗಲು ನನಗೆ ಕ್ಯಾನ್ಸರ್‌ ಇಲ್ಲ. ಯಾವುದೇ ಗಡ್ಡೆಯೂ ಇಲ್ಲ. ಹೀಗಾಗಿ ಕಾಂಗ್ರೆಸ್‌ನ ಆಪರೇಷನ್‌ಗೆ ಒಳಗಾಗುವುದಿಲ್ಲ. ಬಿಜೆಪಿ ಬಿಡುವ ಪ್ರಶ್ನೆಯೂ ಇಲ್ಲ’ ಎಂದು ಬಿಜೆಪಿಯ ಮಾಜಿ ಶಾಸಕ ರಾಜೂಗೌಡ ಹೇಳಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಚಿತ್ರನಟ ಸುದೀಪ್‌ ಅವರ ಜನ್ಮದಿನದ ಪಾರ್ಟಿಯಲ್ಲಿ ಡಿ.ಕೆ.ಶಿವಕುಮಾರ್‌ ಜತೆ ಸಹಜವಾಗಿ ಮಾತುಕತೆ ನಡೆದಿದೆ. ರಾಜಕಾರಣದ ಬಗ್ಗೆ ಚರ್ಚೆ ಆಗಿಲ್ಲ’ ಎಂದರು. 

‘ನನ್ನ ಜತೆ ಬಿ.ಸಿ.ಪಾಟೀಲ ಇದ್ದರು. ಕಾಂಗ್ರೆಸ್‌ ಸೇರುವಂತೆ ಆಹ್ವಾನ ಬಂದಿಲ್ಲ. ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾತ್ರವಲ್ಲ, ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲೂ ಪಕ್ಷದ ಜತೆ ಇರುವುದು ಮುಖ್ಯ’ ಎಂದು ಅವರು ಹೇಳಿದರು. 

‘ಡಿ.ಕೆ.ಶಿವಕುಮಾರ್ ಅವರು ನನ್ನ ಜತೆ ಮಾತನಾಡುವಾಗ, ಚೆನ್ನಾಗಿ ಕೆಲಸ ಮಾಡಿದ್ದರೂ ಚುನಾವಣೆಯಲ್ಲಿ ಹೇಗೆ ಸೋತಿರಿ ಎಂದು ಕೇಳಿದರು. ನಿಮ್ಮ ಮತ್ತು ಸಿದ್ದರಾಮಯ್ಯ ಅವರ ಪ್ರಭಾವ ಅಂತ ಹೇಳಿದೆ. ಸುದೀಪ್‌ ಹುಟ್ಟು ಹಬ್ಬಕ್ಕಿಂತ ನಮ್ಮ ವಿಚಾರವೇ ಸುದ್ದಿಯಾಗಿದೆ’ ಎಂದರು.

‘ನಮ್ಮ ಪಕ್ಷದ ಕೆಲವು ನಾಯಕರಲ್ಲಿ ಅಸಮಾಧಾನ ಇರುವುದು ನಿಜ. ಅದನ್ನು ಸರಿಪಡಿಸಬೇಕು. ನನಗೆ ಯಾವುದೇ ಸಮಸ್ಯೆ ಇಲ್ಲ. ಆದಷ್ಟು ಬೇಗ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ನಾಯಕನ ಸ್ಥಾನಗಳಿಗೆ ಆಯ್ಕೆ ಮಾಡಿ ಎಂದಿದ್ದೇವೆ. ನಾನು ಹೇಳಬೇಕಾಗಿರುವುದನ್ನು ಪಕ್ಷದ ವೇದಿಕೆಯಲ್ಲೇ ಹೇಳಿದ್ದೇನೆ. ಪಕ್ಷಕ್ಕೆ ಬಂದ 17 ಜನರನ್ನು ಬಾಂಬೆ ಬಾಯ್ಸ್‌ ಎಂದು ಕರೆಯುವುದು ಸರಿಯಲ್ಲ. ಅವರು ಬಂದಿದ್ದರಿಂದಲೇ ನಾವು ಸರ್ಕಾರ ರಚಿಸಲು ಸಾಧ್ಯವಾಯಿತು’ ಎಂದು ಹೇಳಿದರು.

‘ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದ ಸಂಸದ ರಾಜಾ ಅಮರೇಶ್ವರ ನಾಯಕ ಇದ್ದಾರೆ. ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಟಿಕೆಟ್‌ ನೀಡಬೇಕು ಎಂಬುದು ನಮ್ಮ ಒತ್ತಾಯ. ನನ್ನ ಹೆಸರೂ ಚರ್ಚೆಯಲ್ಲಿರುವುದು ನಿಜ. ಆದರೆ ಅವರಿಗೆ ಟಿಕೆಟ್‌ ಕೊಡುವುದು ಸೂಕ್ತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT