ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಸಂಬಂಧ ಮುಕ್ತ ಚರ್ಚೆಗೆ ಸಿದ್ಧ: ಮುಖ್ಯಮಂತ್ರಿ

ನೀತಿ ಅನುಷ್ಠಾನಕ್ಕೆ ಕಾಂಗ್ರೆಸ್‌ ವಿರೋಧ; ತರಾತುರಿ ಏಕೆ– ಜೆಡಿಎಸ್‌ ಪ್ರಶ್ನೆ
Last Updated 23 ಸೆಪ್ಟೆಂಬರ್ 2021, 22:30 IST
ಅಕ್ಷರ ಗಾತ್ರ

ಬೆಂಗಳೂರು: 'ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಸಂಬಂಧಿಸಿದಂತೆ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಎನ್ಇಪಿ ಕುರಿತು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ಬಿ.ಕೆ. ಹರಿಪ್ರಸಾದ್ ಪ್ರಸ್ತಾಪಿಸಿದ ವಿಷಯದಲ್ಲಿ ನಡೆದ ಚರ್ಚೆಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಉತ್ತರಿಸುವ ವೇಳೆ ಮಾತನಾಡಿದ ಮುಖ್ಯಮಂತ್ರಿ, 'ಹಳ್ಳಿಯ ವಿದ್ಯಾರ್ಥಿ ಜಾಗತಿಕವಾಗಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಒಪ್ಪಿಕೊಂಡಿದ್ದೇವೆ. ಆದರೆ, ತಯಾರಿ ಮಾಡಿಲ್ಲ. ಎನ್ಇಪಿಯಿಂದ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಇಂಥ ಬದಲಾವಣೆ ಸಂದರ್ಭದಲ್ಲಿ ಪರ ವಿರೋಧ ಅಭಿಪ್ರಾಯ ಸಾಮಾನ್ಯ’ ಎಂದರು.

‘ಅಡೆತಡೆಗಳನ್ನು ಮೀರಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ನೀತಿಯನ್ನು ರೂಪಿಸಲಾಗಿದೆ. ಇನ್ನಷ್ಟು ಚರ್ಚೆ, ವಿವಿಧ ಆಯಾಮದಲ್ಲಿ ಚರ್ಚೆ ನಡೆಯಬೇಕಿದೆ. ಸರ್ಕಾರ ಎಲ್ಲ ರೀತಿಯ ಚರ್ಚೆಗೆ ಸಿದ್ಧವಿದೆ. ಮಕ್ಕಳಿಗೆ ಹಲವು ಅವಕಾಶ, ಮುಕ್ತ ವಾತಾವರಣ, ಉತ್ಕೃಷ್ಟ ಕೌಶಲ ನೀಡಲು ಈ ನೀತಿ ಸಹಕಾರಿ ಆಗಲಿದೆ’ ಎಂದು ವಿವರಿಸಿದರು.

ಅದಕ್ಕೂ ಮೊದಲು ಮಾತನಾಡಿದ ಬಿ.ಕೆ. ಹರಿಪ್ರಸಾದ್‌ ನೀತಿಯನ್ನು ಬಲವಾಗಿ ವಿರೋಧಿಸಿದರು.‘ಈ ನೀತಿಯನ್ನು ಜಾರಿಗೊಳಿಸುವ ಮೂಲಕ ಆರೆಸ್ಸೆಸ್ ಸಿದ್ಧಾಂತಗಳನ್ನು ಹೇರಲು ಸರ್ಕಾರ ಹೊರಟಿದೆ. ಆ ಮೂಲಕ ಬಹುತ್ವ ಸಂಸ್ಕೃತಿಯನ್ನು ನಾಶ ಮಾಡಲು ಮುಂದಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಸಚಿವ ಅಶ್ವತ್ಥನಾರಾಯಣ ಮಾತನಾಡಿ, ‘ಈ ನೀತಿಯು ನೆರೆ-ಹೊರೆಯಲ್ಲಿ ಸಮಾನ ಶಿಕ್ಷಣ ನೀತಿ ಎಂಬ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿಲ್ಲ. ಎನ್ಇಪಿ ಗುಣಮಟ್ಟ, ಸಮಾನತೆ ಹಾಗೂ ಸೇರುವಿಕೆಗೆ ಒತ್ತು ನೀಡುತ್ತದೆ. ಸುದೀರ್ಘ ಚರ್ಚೆಯ ನಂತರ ಅನುಷ್ಠಾನ ಮಾಡಲಾಗುತ್ತಿದೆ' ಎಂದು ಸಮರ್ಥಿಸಿದರು.

‘ಆನ್‌ಲೈನ್‌ ಮೂಲಕ 2015ರಿಂದ ಎನ್ಇಪಿಗೆ ಸಲಹೆ ಪಡೆಯಲಾಗಿದೆ. ಕರಡು ಸಿದ್ಧಪಡಿಸಲು ಶಿಕ್ಷಣ ಭಾಗಿದಾರರಿಂದ ಸಲಹೆ ಪಡೆಯಲಾಗಿದೆ. ದೇಶದ 2 ಲಕ್ಷ ಗ್ರಾಮ ಪಂಚಾಯತಿಯಿಂದ 1,10,623 ಸಲಹೆ ಬಂದಿದೆ. ಸಮಗ್ರವಾಗಿ ಅಧ್ಯಯನ ನಡೆಸಿ, ಎನ್ಇಪಿ ರೂಪಿಸಲಾಗಿದೆ’ ಎಂದರು.

ಕಾಂಗ್ರೆಸ್ಸಿನ ನಸೀರ್ ಅಹಮದ್, ‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎನ್ಇಪಿ ಅನುಷ್ಠಾನ ಮಾಡಲಾಗಿದೆ. ಈ ನೀತಿಯಲ್ಲಿ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ವಿದೇಶಿ ಮಾದರಿಯ ಕಲಿಕೆ ಇಲ್ಲಿ ಸಾಧ್ಯವಿಲ್ಲ. ನೀತಿಯನ್ನು ಸದ್ಯ ತಡೆ ಹಿಡಿದು, ಸುದೀರ್ಘ ಚರ್ಚೆಯಬಳಿಕ ಅನುಷ್ಠಾನ ಮಾಡಬೇಕು’ಎಂದು ಆಗ್ರಹಿಸಿದರು.

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ‘ಎನ್ಇಪಿ ಅನುಷ್ಠಾನಕ್ಕೆ ಯಾವುದೇ ತಯಾರಿ ಮಾಡಿಲ್ಲ. ನಮ್ಮಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಸೌಲಭ್ಯವಿಲ್ಲ. ಶಿಕ್ಷಕರ ಕೊರತೆಯಿದೆ. ಹೀಗಿರುವಾಗ ಪೂರ್ವ ಪ್ರಾಥಮಿಕ ತರಗತಿಯಿಂದ ಹೇಗೆ ಅನುಷ್ಠಾನ ಮಾಡುತ್ತಿರಿ’ ಎಂದು ಪ್ರಶ್ನಿಸಿದರು.

‘ಎನ್ಇಪಿ ಅನುಷ್ಠನ ಹಾಗೂ ಅದಕ್ಕೆ ಸಂಬಂಧಿಸಿದಂತೆ ಸದಸ್ಯರು ಕೇಳಿರುವ ಪ್ರಶ್ನೆ, ಸಲಹೆಗಳಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಒಟ್ಟಾಗಿ ಸಭೆ ಕರೆದು, ಸಮಸ್ಯೆಗೆ ಪರಿಹಾರ ನೀಡಬೇಕು’ ಎಂದು ಸಭಾಪತಿ ಸಲಹೆ ನೀಡಿದರು.

‘ಶೂದ್ರರ ಮಕ್ಕಳಿಗೆ ಅನ್ಯಾಯ’
‘ಈ ನೀತಿ ಅನುಷ್ಠಾನದ ನಂತರ ಸರ್ಕಾರಿ ವಿಶ್ವವಿದ್ಯಾಲಯಗಳು ಮುಚ್ಚಲಿವೆ ಅಥವಾ ಅದು ಬಡವರಿಗೆ ಮಾತ್ರ ಸೀಮಿತವಾಗಲಿದೆ. ಶೂದ್ರರ ಮಕ್ಕಳು ಡಿಗ್ರಿ ಮಾಡಬಾರದು ಎಂಬ ದುರುದ್ದೇಶ ಇದರಲ್ಲಿದೆ. ಶೂದ್ರರ ಮಕ್ಕಳ ಮೇಲೆ ದೊಡ್ಡ ದುಷ್ಪರಿಣಾಮ ಬೀರಲಿದೆ’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಆಕ್ರೋಶ ಹೊರ ಹಾಕಿದರು.

ಮಧ್ಯರಾತ್ರಿವರೆಗೂ ನಡೆದ ಕಲಾಪ
ಎನ್‌ಇಪಿ ಮೇಲಿನ ಚರ್ಚೆಯು ಪರಿಷತ್ತಿನಲ್ಲಿ ಮಧ್ಯರಾತ್ರಿ 12.35ರ ವರೆಗೂ ಮುಂದುವರಿಯಿತು. ನಂತರ ಸಭಾಪತಿ ಅವರ ಸೂಚನೆಯಂತೆ ಚರ್ಚೆಯನ್ನು ಪೂರ್ಣಗೊಳಿಸಲಾಯಿತು. ಕಲಾಪವನ್ನು ಶುಕ್ರವಾರ ಬೆಳಿಗೆ 10 ಗಂಟೆಗೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT