ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯಕ್ಕೆ ಲೆಕ್ಕ ಕೊಡಲು ಸಿದ್ಧರಿದ್ದೀರಾ: ಸುಧಾಕರ್‌ಗೆ ಪ್ರದೀಪ್ ಈಶ್ವರ್ ಪ್ರಶ್ನೆ

Published 25 ಮಾರ್ಚ್ 2024, 15:46 IST
Last Updated 25 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಗಳಿಸಿದ ಪ್ರತಿ ಆದಾಯಕ್ಕೆ ಲೆಕ್ಕ ಕೊಡಲು ಸಿದ್ಧನಿದ್ದೇನೆ. ನೀವು ಲೆಕ್ಕ ಕೊಡಲು ಸಿದ್ಧರಿದ್ದೀರಾ’ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್​ಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕಳೆದ ಐದು ವರ್ಷದ ನನ್ನ ವ್ಯವಹಾರದ ಲೆಕ್ಕ ಕೊಡುತ್ತೇನೆ. ನನ್ನ ಪತ್ನಿ, ಸಂಬಂಧಿಕರ ಖಾತೆಯ ಲೆಕ್ಕವನ್ನೂ ಕೊಡುತ್ತೇನೆ. ನೀವು ನಿಮ್ಮ ಹಾಗೂ ನಿಮ್ಮ ಬಾವಮೈದುನನ ಖಾತೆಯಲ್ಲಿರುವ ಹಣದ ಲೆಕ್ಕ ಕೊಡುತ್ತೀರಾ’ ಎಂದು ಸುಧಾಕರ್‌ ಅವರನ್ನು ಪ್ರಶ್ನಿಸಿದರು.

‘ಐ.ಟಿ, ಇ.ಡಿ ದಾಳಿ ಎದುರಿಸಲು, ಸ್ವಚ್ಛ ಎಂದು ದೇವರ ಎದುರು ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ. ನೀವು ಪ್ರಮಾಣ ಮಾಡಲು ಸಿದ್ಧ ಇದ್ದೀರಾ’ ಎಂದೂ ಪ್ರಶ್ನಿಸಿದರು.

‘ಕೋವಿಡ್ ಸಂದರ್ಭದಲ್ಲಿ ಸುಧಾಕರ್ ವಿರುದ್ಧ ₹2,200 ಕೋಟಿ ಅಕ್ರಮದ ಆರೋಪ ಮಾಡಿದ್ದೆವು. ಅವರದ್ದೇ ಪಕ್ಷದ ಶಾಸಕ ಯತ್ನಾಳ್ ₹40 ಸಾವಿರ ಕೋಟಿ ಅಕ್ರಮದ ಆರೋಪ ಮಾಡಿದ್ದರು. ಅಷ್ಟು ದೊಡ್ಡ ಆರೋಪ ಇದ್ದವರಿಗೆ ಬಿಜೆಪಿ ಟಿಕೆಟ್ ಏಕೆ ನೀಡಿದೆ’ ಎಂದು ಪ್ರಶ್ನಿಸಿದರು.

‘ವಿನಾಶಕಾರಿ ವ್ಯಕ್ತಿಯೊಬ್ಬ ಸಂಸತ್​ಗೆ ಹೋದರೆ ಹೇಗೆ? ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದರೂ ಸುಧಾಕರ್​ ಅವರನ್ನು ಸಂಸತ್ ಮೆಟ್ಟಿಲು ತುಳಿಯಲು ಬಿಡುವುದಿಲ್ಲ’ ಎಂದು ಗುಡುಗಿದರು.

‘ರಾಜ್ಯದ ಕೆಲವು ಬಿಜೆಪಿ ನಾಯಕರಿಗೆ ವಿವಿಧ ಯೋಗಾಸನಗಳ ಮೂಲಕ ಅವರು ಸಹಾಯ ಮಾಡಿದ್ದಾರೆ. ಅವರನ್ನು ಸಂಸತ್​ಗೆ ಕಳುಹಿಸಿದರೆ, ಕೇಂದ್ರದ ಬಿಜೆಪಿ ನಾಯಕರಿಗೂ ಆಸನಗಳನ್ನು ಕಲಿಸುತ್ತಾರೆ’ ಎಂದು ಲೇವಡಿ ಮಾಡಿದರು.

‘ನಾನು ಮಾತನಾಡಿದರೆ ಸಿನಿಮಾ‌ ಡೈಲಾಗ್ ಹೇಳುತ್ತೀಯಾ ಎಂದು ಹೇಳುತ್ತಾರೆ. ಇದು ಡೈಲಾಗ್ ಅಲ್ಲ. ಹೊಟ್ಟೆಯಲ್ಲಿ ಇರುವ ನೋವು. ಅವರ ಕಿರುಕುಳದಿಂದ ನಾನು ಶಾಸಕನಾದೆ. ಸುಧಾಕರ್ ಕಾಂಗ್ರೆಸ್​ಗೆ ಅಪಾಯವಲ್ಲ. ಅವರು ಬಿಜೆಪಿಗೆ ಅಪಾಯ. ಒಂದು ತಿಂಗಳು ನನ್ನ ಮತ್ತು ಸುಧಾಕರ್ ನಡುವೆ ಯುದ್ಧ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT