ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲಷ್ಟೇ ಪ್ರಾಂಶುಪಾಲರ ನೇಮಕಾತಿ ಪರೀಕ್ಷೆ

Published 30 ಜುಲೈ 2023, 0:05 IST
Last Updated 30 ಜುಲೈ 2023, 0:05 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ (ಗ್ರೇಡ್‌–1) ಹುದ್ದೆಗಳ ನೇಮಕಾತಿಗೆ ಭಾನುವಾರ (ಜುಲೈ 30) ಪರೀಕ್ಷೆ ನಡೆಯುತ್ತಿದ್ದು, ಬೆಂಗಳೂರಲ್ಲಷ್ಟೇ ಕೇಂದ್ರಗಳನ್ನು ನಿಗದಿ ಮಾಡಿರುವುದರಿಂದ ದೂರದ ಜಿಲ್ಲೆಗಳಿಂದ ಬರುವವರಿಗೆ ತೊಂದರೆಯಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ 310 ಪ್ರಾಂಶುಪಾಲರ ಹುದ್ದೆಗಳಿಗೆ ಮೊದಲ ಬಾರಿ ನೇರ ಪರೀಕ್ಷೆಗಳ ಮೂಲಕ ಭರ್ತಿ ಮಾಡಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್‌ 2022ರಲ್ಲಿ ಅಧಿಸೂಚನೆ ಹೊರಡಿಸಿತ್ತು. ತಾಂತ್ರಿಕ ಕಾರಣಗಳಿಂದ ನಿಗದಿಯಾಗಿದ್ದ ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ ಇದೇ ಭಾನುವಾರ ಪರೀಕ್ಷೆ ನಿಗದಿಯಾಗಿದ್ದರೂ, ವಿಜಯಪುರ, ಬೆಳಗಾವಿ, ಕಲಬುರಗಿ, ಬೀದರ್‌ ಸೇರಿದಂತೆ ದೂರ ಪ್ರದೇಶಗಳ ಅಭ್ಯರ್ಥಿಗಳು ಬೆಂಗಳೂರಿಗೇ ಬಂದು ಪರೀಕ್ಷೆ ಬರೆಯಬೇಕಿದೆ.

‘ಪರೀಕ್ಷೆಗೆ ಸಿದ್ಧತೆ ನಡೆಸಿರುವ ಮಧ್ಯೆಯೇ ಸರ್ಕಾರಿ ಪದವಿ ಕಾಲೇಜುಗಳ ಬೋಧಕ ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಜುಲೈ 29ರಂದು ಸರ್ಕಾರಿ ರಜಾ ದಿನವಾದರೂ ವರ್ಗಾವಣೆ ಪಟ್ಟಿಯಲ್ಲಿದ್ದ (ಪತಿ ಪತ್ನಿ ಕೋಟಾ) ನಮಗೆ ಕಾಲೇಜು ಶಿಕ್ಷಣ ಇಲಾಖೆ ಸಂಜೆ 6ರವರೆಗೂ ಕೌನ್ಸೆಲಿಂಗ್‌ ನಡೆಸಿದೆ. ಬೆಂಗಳೂರಿನ ಶೇಷಾದ್ರಿಪುರಂ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿನ ಕೇಂದ್ರದಲ್ಲಿ ಪ್ರಾಂಶುಪಾಲರ ಹುದ್ದೆಗೆ ಪರೀಕ್ಷೆಗೆ ಬರೆಯಬೇಕಿದೆ. ಬೆಳಿಗ್ಗೆ 10.30ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಬೀದರ್‌ನಿಂದ 680 ಕಿ.ಮೀ ಪ್ರಯಾಣ ಮಾಡಬೇಕಿದೆ. ಕಲಬುರಗಿಯಲ್ಲೇ ಪರೀಕ್ಷಾ ಕೇಂದ್ರ ತೆರೆದಿದ್ದರೆ ಅನುಕೂಲವಾಗುತ್ತಿತ್ತು’ ಎನ್ನುತ್ತಾರೆ ಪದವಿ ಕಾಲೇಜಿನಲ್ಲಿ 20 ವರ್ಷ ಸೇವೆ ಸಲ್ಲಿಸಿರುವ ಪ್ರಾಧ್ಯಾಪಕಿ.

ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ಕಲಬುರಗಿ, ಧಾರವಾಡ, ಮೈಸೂರು, ಮಂಗಳೂರು ಹಾಗೂ ಶಿವಮೊಗ್ಗ ನಗರಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಗಳಿವೆ. ಎಲ್ಲ ಆರೂ ನಗರಗಳಲ್ಲೂ ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದರೆ ಅನುಕೂಲವಾಗುತ್ತಿತ್ತು ಎನ್ನುವುದು ಬಹುತೇಕ ಆಕಾಂಕ್ಷಿಗಳ ಬೇಡಿಕೆ.

ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗಳಿಗೆ ಕಾಯಂ ನೇಮಕ ಪ್ರಕ್ರಿಯೆ ಹಲವು ದಶಕಗಳಿಂದಲೂ ನಿಯಮಿತವಾಗಿ ನಡೆದಿಲ್ಲ. ಸೇವಾ ಹಿರಿತನದ ಆಧಾರದ ಮೇಲೆ ಹಲವು ಪ್ರಾಧ್ಯಾಪಕರಿಗೆ 2008–2009ನೇ ಸಾಲಿನಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡಲಾಗಿತ್ತು. ಒಂದು ಸಾವಿರ ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಹಾಗೂ ಒಂದು ಸಾವಿರಕ್ಕಿಂತ ಹೆಚ್ಚಿರುವ ಕಾಲೇಜುಗಳನ್ನು ವಿಂಗಡಿಸಿ ಗ್ರೇಡ್‌–1 ಹಾಗೂ ಗ್ರೇಡ್‌–2 ಪ್ರಾಂಶುಪಾಲರು ಎಂದು ಪರಿಗಣಿಸಿ ಬಡ್ತಿಗೆ ಪರಿಗಣಿಸಲಾಗಿತ್ತು. ಅಂದು ಪ್ರಾಂಶುಪಾಲರಾಗಿ ಬಡ್ತಿ ಹೊಂದಿದ್ದ ಎಲ್ಲರೂ ನಿವೃತ್ತರಾಗಿದ್ದಾರೆ. ಪ್ರಸ್ತುತ 400ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ಆಯಾ ಕಾಲೇಜುಗಳಲ್ಲಿರುವ ಹಿರಿಯ ಪ್ರಾಧ್ಯಾಪಕರೇ ಪ್ರಭಾರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಬಡ್ತಿ ದೊರಕದೇ ನಿವೃತ್ತಿ

ಪ್ರಾಂಶುಪಾಲರ ಹುದ್ದೆಗಳಿಗೆ ಒಂದೂವರೆ ದಶಕ ಬಡ್ತಿ ನೀಡದ ಕಾರಣ ಸಾವಿರಕ್ಕೂ ಹೆಚ್ಚು ಪ್ರಾಧ್ಯಾಪಕರು ಪ್ರಾಂಶುಪಾಲರ ಹುದ್ದೆ ದೊರಕದೆ ನಿವೃತ್ತರಾಗಿದ್ದಾರೆ. ಅಧಿಸೂಚನೆ ಹೊರಡಿಸಿದ ನಂತರವೂ 15 ವರ್ಷಗಳ ಸೇವಾನುಭವ, ಪಿಎಚ್‌.ಡಿ. ಮತ್ತಿತರ ಎಲ್ಲ ಅರ್ಹತೆ ಇದ್ದ 142 ಪ್ರಾಧ್ಯಾಪಕರು ನಿವೃತ್ತರಾಗಿದ್ದಾರೆ. ಅಲ್ಪ ಅವಧಿಗಾದರೂ ಕಾಯಂ ಪ್ರಾಂಶುಪಾಲರಾಗಲು ನಿವೃತ್ತಿ ಹಂಚಿನಲ್ಲಿರುವ ಹಲವರು ಪರೀಕ್ಷೆ ಎದುರಿಸುತ್ತಿದ್ದಾರೆ. ಖಾಸಗಿ, ಅನುದಾನಿತ ಕಾಲೇಜುಗಳ ಪ್ರಾಧ್ಯಾಪಕರಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಪರೀಕ್ಷೆಗೆ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳಿರುವುದರಿಂದ ಬೆಂಗಳೂರಿನಲ್ಲೇ 5 ಕೇಂದ್ರಗಳನ್ನು ತೆರೆಯಲಾಗಿದೆ. ಒಂದೇದಿನ ಪರೀಕ್ಷೆ ನಡೆಯುವುದರಿಂದ ತೊಂದರೆ ಆಗದು.
ಎಸ್‌.ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕಿ, ಕೆಇಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT