ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ಇಲಾಖೆಯ ಪುನರ್‌ರಚನೆ ಅಗತ್ಯ: ಕಂದಾಯ ಸಚಿವ ಕೃಷ್ಣ ಬೈರೇಗೌಡ

Published 29 ಅಕ್ಟೋಬರ್ 2023, 16:31 IST
Last Updated 29 ಅಕ್ಟೋಬರ್ 2023, 16:31 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮಕಾಲೀನ ಸಂದರ್ಭಕ್ಕೆ ಪೂರಕವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯನ್ನು ಪುನರ್‌ರಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕುʼ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನದಲ್ಲಿನ ಪ್ರಗತಿ ಕುರಿತು ಅಧಿಕಾರಿಗಳ ಜತೆ ಭಾನುವಾರ ಯವನಿಕಾ ಸಭಾಂಗಣದಲ್ಲಿ ಸಭೆ ನಡೆಸಿದ ಅವರು, ‘ಸುಗಮ ನೋಂದಣಿ ಪ್ರಕ್ರಿಯೆ, ತೆರಿಗೆ ಸೋರಿಕೆ ತಡೆ ಮತ್ತು ಜನಸ್ನೇಹಿ ಸೇವೆ ಒದಗಿಸುವ ನಿಟ್ಟಿನಲ್ಲಿ ಇಲಾಖೆಯನ್ನು ಪುನರ್‌ ರಚಿಸಬೇಕು. ತಂತ್ರಜ್ಞಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲು ಅವಕಾಶ ಇರುವಂತೆ ಈ ಪ್ರಕ್ರಿಯೆ ನಡೆಯಬೇಕುʼ ಎಂದರು.

ಕರ್ನಾಟಕದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿತ್ತು. ಕೆಲವು ವರ್ಷಗಳ ಕಾಲ ತಂತ್ರಜ್ಞಾನದ ಅಳವಡಿಕೆ ಮತ್ತು ಬಳಕೆಯಲ್ಲಿ ಹಿನ್ನಡೆ ಆಗಿತ್ತು. ಈಗ ಪುನಃ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಇನ್ನೂ ಹೊಸ ತಂತ್ರಜ್ಞಾನಗಳ ಅಳವಡಿಕೆ ಮತ್ತು ಬಳಕೆಗೆ ಮುಂದಾಗಬೇಕು ಎಂದು ಸೂಚಿಸಿದರು.

ಬಾಡಿಗೆ ಕರಾರುಗಳೂ ಸೇರಿದಂತೆ ನೋಂದಣಿಯೇತರ ಮುದ್ರಾಂಕ ಶುಲ್ಕ ದೊಡ್ಡ ಪ್ರಮಾಣದಲ್ಲಿ ಸೋರಿಕೆ ಆಗುತ್ತಿದೆ. ಅದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ನೋಂದಣಿಯೇತರ ಮುದ್ರಾಂಕ ಶುಲ್ಕ ಪಾವತಿಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವೂ ಆಗಬೇಕು. ಇಲಾಖೆಯಲ್ಲಿ ಪಾರದರ್ಶಕತೆ ತರುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಕಳೆದ ವರ್ಷದಲ್ಲಿ ₹17,850 ಕೋಟಿಯಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಕ್ಕೆ ಶ್ರಮಿಸಿರುವುದು, ಕಾವೇರಿ–2 ತಂತ್ರಾಂಶದ ಅಳವಡಿಕೆ ಮತ್ತು ಸುಗಮ ಕಾರ್ಯಾಚರಣೆ ಹಾಗೂ ವಿವಾದಕ್ಕೆ ಆಸ್ಪದವಿಲ್ಲದಂತೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಳಿಸಿರುವುದಕ್ಕೆ ಇಲಾಖೆಯ ಅಧಿಕಾರಿಗಳನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್‌, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತೆ ಬಿ.ಆರ್‌. ಮಮತಾ, ಹಿಂದಿನ ಆಯುಕ್ತರಾದ ಕೆ.ವಿ. ತ್ರಿಲೋಕಚಂದ್ರ, ಕೆ.ಪಿ. ಮೋಹನ್‌ ರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT