ಬೆಂಗಳೂರು: ಮನುಷ್ಯರನ್ನು ಸಮಾನವಾಗಿ ಕಾಣದ ಯಾವುದೇ ಧರ್ಮ ಧರ್ಮವೇ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ತಮಿಳುನಾಡು ಸಚಿವ ಉದಯನಿಧಿ ಸ್ವಾಲಿನ್ ಯಾವ ಸನ್ನಿವೇಶದಲ್ಲಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಆದರೆ, ಯಾವುದೇ ಧರ್ಮ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದರೆ ಅಂತಹ ಧರ್ಮವನ್ನು ಒಪ್ಪಲು ಸಾಧ್ಯವಿಲ್ಲ ಎನ್ನುವುದು ನನ್ನ ನಿಲುವು’ ಎಂದರು.
ಉಚಿತ ಯೋಜನೆಯಿಂದ ಆರ್ಥಿಕತೆಗೆ ಹೊಡೆತ ಎನ್ನುವ ಪ್ರಧಾನಿ ನರೇಂದ್ರ ಅವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. ಅವರ ಹೇಳಿಕೆ ಸತ್ಯವಾಗಿದ್ದರೆ ಅಡುಗೆ ಅನಿಲದ ಸಿಲಿಂಡರ್ ದರ ಏಕೆ ಕಡಿಮೆ ಮಾಡಿದರು. ಗೃಹಲಕ್ಷ್ಮಿ ಯೋಜನೆಯನ್ನು ಮಧ್ಯ ಪ್ರದೇಶದಲ್ಲಿ ಏಕೆ ನಕಲು ಮಾಡಿದರು ಎಂದು ಪ್ರಶ್ನಿಸಿದರು.
ಶ್ರೀಮಂತರ ಸಾಲ ಮನ್ನಾ ಸೇರಿದಂತೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವುಗಳಿಂದ ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪಿದೆ. ‘ಮೋದಿನಾಮಿಕ್ಸ್’ ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದೆ. ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಪ್ರಧಾನಿ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.