ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ವಿಶೇಷಾತಿಥ್ಯ' ಬಹಿರಂಗಕ್ಕೆ ದರ್ಶನ್ ಆತ್ಮೀಯತೆಗಾಗಿ ರೌಡಿ ಗುಂಪುಗಳ ಪೈಪೋಟಿ ಕಾರಣ

Published : 28 ಆಗಸ್ಟ್ 2024, 5:42 IST
Last Updated : 28 ಆಗಸ್ಟ್ 2024, 5:42 IST
ಫಾಲೋ ಮಾಡಿ
Comments

ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ದರ್ಶನ್‌ ಅವರಿಗೆ ವಿಶೇಷ ಆತಿಥ್ಯ ಹಾಗೂ ನಟನ ಜತೆಗೆ ಆತ್ಮೀಯತೆ ಬೆಳೆಸುವ ವಿಚಾರಕ್ಕೆ ಎರಡು ರೌಡಿ ಗುಂಪುಗಳ ಮಧ್ಯೆ ಉಂಟಾದ ಗಲಾಟೆಯಿಂದ ‘ರೌಂಡ್‌ ಟೇಬಲ್ ಪಾರ್ಟಿ’, ಬ್ಯಾರಕ್‌ ಒಳಗಿರುವ ಫೋಟೊಗಳು ಬಹಿರಂಗಗೊಂಡಿವೆ ಎಂಬುದು ಗೊತ್ತಾಗಿದೆ.

ಬೇರೆ ಬೇರೆ ಪ್ರಕರಣಗಳಲ್ಲಿ ಜೈಲಿನಲ್ಲಿರುವ ರೌಡಿಗಳಾದ ಬೇಕರಿ ರಘು ಹಾಗೂ ವಿಲ್ಸನ್‌ ಗಾರ್ಡನ್‌ ನಾಗ ಮಧ್ಯೆ ಉಂಟಾದ ಗಲಾಟೆಯಿಂದ ದರ್ಶನಾತಿಥ್ಯದ ಫೋಟೊಗಳು ಹೊರಬಂದಿವೆ ಎನ್ನಲಾಗಿದೆ.

‘ಸೈಕಲ್‌ ರವಿಯ ಬಲಗೈ ಬಂಟ ಬೇಕರಿ ರಘು ಪರಿಚಯ ಮೊದಲೇ ದರ್ಶನ್‌ಗಿತ್ತು. ಆದರೆ, ವಿಲ್ಸನ್‌ ಗಾರ್ಡನ್‌ ನಾಗ ಪರಿಚಯ ಇರಲಿಲ್ಲ. ದರ್ಶನ್‌ ಪರಪ್ಪನ ಅಗ್ರಹಾರ ಸೇರಿದ ಬಳಿಕ ರಘು ಉಸ್ತುವಾರಿಯಲ್ಲಿ ವಿಶೇಷ ಆತಿಥ್ಯ ದೊರೆಯುತ್ತಿತ್ತು. ರಘು ತನ್ನ ಪರಿಚಯಸ್ಥರಿಂದ ನಟನಿಗೆ ಕೆಲವು ಸೌಲಭ್ಯಗಳನ್ನು ಒದಗಿಸುತ್ತಿದ್ದ. ದಿನ ಕಳೆದಂತೆ ದರ್ಶನ್‌ ಅವರು ರಘುವಿನಿಂದ ದೂರವಾದರು ಎನ್ನಲಾಗಿದೆ.

ವಿಲ್ಸನ್‌ ಗಾರ್ಡನ್‌ ನಾಗನ ಸ್ನೇಹ ಬೆಳೆಸಿದ್ದರು. ನಂತರ, ನಾಗನೇ ದರ್ಶನ್‌ಗೆ ಬೇಕಾದ ಸೌಲಭ್ಯ ಕಲ್ಪಿಸುತ್ತಿದ್ದ. ಜೈಲಿನ ಒಳಗೆ ಇಬ್ಬರೂ ತಮ್ಮ ಸಹಚರರ ಜತೆಗೆ ‘ರೌಂಡ್‌ ಟೇಬಲ್ ಪಾರ್ಟಿ’ ನಡೆಸುತ್ತಿದ್ದರು. ಇದು ರಘುಗೆ ಸಿಟ್ಟು ತರಿಸಿತ್ತು. ಇದೇ ವಿಚಾರಕ್ಕೆ ಒಂದು ರೌಡಿ ಗುಂಪು ಫೋಟೊ ತೆಗೆದು ಹೊರಗಿದ್ದ ವ್ಯಕ್ತಿಯೊಬ್ಬರಿಗೆ ಕಳುಹಿಸಿತ್ತು. ಈ ಬಗ್ಗೆಯೂ ಪೊಲೀಸ್‌ ತನಿಖೆ ಆರಂಭವಾಗಿದೆ.

ನಾಗನಿಗೆ ಒಂದು ಬ್ಯಾರಕ್‌ನಿಂದ ಮತ್ತೊಂದು ಬ್ಯಾರಕ್‌ಗೆ ಹೋಗಲು ಜೈಲಿನ ಅಧಿಕಾರಿಗಳೇ ಅನುಮತಿ ನೀಡಿದ್ದರು. ಆಗಾಗ್ಗೆ ದರ್ಶನ್‌ ಬ್ಯಾರಕ್‌ಗೂ ಹೋಗುತ್ತಿದ್ದ’ ಎಂದು ಮೂಲಗಳು ಹೇಳಿವೆ.

ಫೋಟೊ ತೆಗೆದಿದ್ದ ವೇಲುಗೆ ಥಳಿತ?

‘ದರ್ಶನ್, ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನ ಹಾಗೂ ದರ್ಶನ್‌ ವ್ಯವಸ್ಥಾಪಕ ನಾಗರಾಜ್‌ ಅವರು ಸಿಗರೇಟ್‌ ಸೇದುತ್ತಾ ಕುರ್ಚಿಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುವ ಫೋಟೊ ತೆಗೆದಿದ್ದ ರೌಡಿ ವೇಲುಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ‘ಫೋಟೊ ತೆಗೆದು ನೀನೇ ಮಾಧ್ಯಮಕ್ಕೆ ಕಳುಹಿಸಿದ್ದೀಯಾ’ ಎಂದು ಆಕ್ರೋಶಗೊಂಡ ನಾಗನ ಕಡೆಯವರು ಥಳಿಸಿದ್ದಾರೆ’ ಎಂಬ ಮಾಹಿತಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT