ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆಗೆ ಮನವಿ: ಕೃಷ್ಣ ಬೈರೇಗೌಡ

Published 10 ಜುಲೈ 2023, 22:31 IST
Last Updated 10 ಜುಲೈ 2023, 22:31 IST
ಅಕ್ಷರ ಗಾತ್ರ

ಬೆಂಗಳೂರು: ಫಸಲ್‌ ಬಿಮಾ ಯೋಜನೆಯಡಿ ರೈತರು ಬೆಳೆ ವಿಮೆ ಸೌಲಭ್ಯಕ್ಕೆ ನೋಂದಣಿ ಮಾಡಿಸುವ ಅವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಕಾಂಗ್ರೆಸ್‌ನ ಕೆ.ಎಂ. ಶಿವಲಿಂಗೇಗೌಡ ಶೂನ್ಯ ವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ‘ಫಸಲ್‌ ಬಿಮಾ ಯೋಜನೆಯು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮ. ರಾಜ್ಯವೂ ವೆಚ್ಛ ಭರಿಸುತ್ತದೆ. ಆದರೆ, ನೋಂದಣಿ ಅವಧಿ ವಿಸ್ತರಣೆಗೆ ಪೋರ್ಟಲ್‌ನಲ್ಲಿ ಅವಕಾಶ ನೀಡುವುದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ’ ಎಂದರು.

‘ಕೆಲವು ಬೆಳೆಗಳ ವಿಮೆ ನೋಂದಣಿಗೆ ಜೂನ್‌ 30ರವರೆಗೆ ಅವಕಾಶ ಇತ್ತು. ರಾಜ್ಯ ಸರ್ಕಾರದ ಮನವಿ ಮೇರೆಗೆ ಒಂದು ದಿನ ವಿಸ್ತರಿಸಲಾಗಿತ್ತು. ಒಂದೇ ದಿನ 30,000 ರೈತರು ನೋಂದಣಿ ಮಾಡಿಸಿದ್ದರು. ಉದ್ದು, ಎಳ್ಳು, ಶೇಂಗಾ ಬೆಳೆಗಳ ವಿಮೆ ನೋಂದಣಿಗೆ ಜುಲೈ 15ರವರೆಗೆ ಅವಕಾಶವಿದೆ. ಕೆಲವು ಬೆಳೆಗಳ ವಿಮೆ ನೋಂದಣಿಗೆ ನವೆಂಬರ್‌ವರೆಗೂ ಅವಕಾಶವಿದೆ. ಈಗಾಗಲೇ ಅವಧಿ ಮುಗಿದಿರುವ ಬೆಳೆಗಳ ವಿಮೆ ನೋಂದಣಿಗೆ ಮತ್ತೊಮ್ಮೆ ಕಾಲಾವಕಾಶ ವಿಸ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದರು.

ಫಸಲ್‌ ಬಿಮಾ ಯೋಜನೆಯಲ್ಲಿ ಹಲವು ಸಮಸ್ಯೆಗಳಿವೆ. ಗುಜರಾತ್‌ ಸೇರಿದಂತೆ ಕೆಲವು ರಾಜ್ಯಗಳು ಈ ಯೋಜನೆಯಿಂದ ಹೊರಬಂದು ಪ್ರತ್ಯೇಕ ಬೆಳೆ ವಿಮೆ ಯೋಜನೆ ಜಾರಿಗೊಳಿಸುತ್ತಿವೆ ಎಂದರು.

ಶಿವಲಿಂಗೇಗೌಡ ಮಾತನಾಡಿ, ‘ಫಸಲ್‌ ಬಿಮಾ ಯೋಜನೆಗಿಂತ ಹಿಂದೆ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ವಿಮಾ ಯೋಜನೆಯೇ ಉತ್ತಮವಾಗಿತ್ತು. ಈಗ ನೋಂದಣಿ ಅವಧಿ ಮುಗಿದಿರುವುದರಿಂದ ಸಮಸ್ಯೆಯಾಗಿದೆ. ಅವಧಿ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT