ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಮೀಸಲಾತಿ: ‘ಅರ್ಹತೆ’ಗೆ ‘ಮೀಸಲಾತಿ’ ಇಲ್ಲ, ಗೊಂದಲಕ್ಕೆ ತೆರೆ ಎಳೆದ ಸರ್ಕಾರ

Last Updated 8 ನವೆಂಬರ್ 2021, 2:09 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಂತ ಅರ್ಹತೆ (ಮೆರಿಟ್‌) ಆಧಾರದಲ್ಲಿ ನೇಮಕಗೊಂಡ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ವರ್ಗದ (ಎಸ್‌ಟಿ) ನೌಕರರನ್ನು ಮುಂಬಡ್ತಿ ನೀಡುವ ಸಂದರ್ಭದಲ್ಲಿ ಶೇ 15 ಮತ್ತು ಶೇ 3 ಮೀಸಲಾತಿ ಕೋಟಾಕ್ಕೆ ಪರಿಗಣಿಸಬಾರದು. ಅಂಥ ನೌಕರರನ್ನು ಸಾಮಾನ್ಯ ವರ್ಗದ ನೌಕರರೆಂದೇ ಪರಿಗಣಿಸಬೇಕು’ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.

ಆ ಮೂಲಕ, ಸ್ವಂತ ಅರ್ಹತೆಯಲ್ಲಿ ನೇರ ನೇಮಕಾತಿ ಹೊಂದಿದ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಸಂದರ್ಭದ ಗೊಂದಲಕ್ಕೆ ತೆರೆ ಎಳೆದಿದೆ. ಮುಖ್ಯಮಂತ್ರಿಯ ಅನುಮೋದನೆಯಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಈ ಸಂಬಂಧ ಶನಿವಾರ (ನ. 6) ಸುತ್ತೋಲೆ ಹೊರಡಿ
ಸಿದೆ. ಈ ಸುತ್ತೋಲೆಯು ಹೊರಡಿಸಿದ ದಿನ ದಿಂದಲೇ ಜಾರಿಗೆ ಬರಲಿದ್ದು, ಪೂರ್ವಾನ್ವಯ ಇಲ್ಲ ಎಂದೂ ಸೂಚಿಸಲಾಗಿದೆ.

ಕೆಲವು ಇಲಾಖೆಗಳಲ್ಲಿ ಮುಂಬಡ್ತಿ ನೀಡುವಾಗ, ಸ್ವಂತ ಅರ್ಹತೆ ಆಧಾರದಲ್ಲಿ ನೇಮಕಗೊಂಡ ಎಸ್‌ಸಿ, ಎಸ್‌ಟಿ ನೌಕರರನ್ನು ಮೀಸಲಾತಿ ಕೋಟಾದಲ್ಲಿ ಪರಿಗಣಿಸಿದ್ದರಿಂದ ಹಲವರು ಬಡ್ತಿ ಅವಕಾಶದಿಂದ ವಂಚಿತರಾಗಿದ್ದರು. ಈ ಸುತ್ತೋಲೆ ಎಸ್‌ಸಿ, ಎಸ್‌ಟಿ ನೌಕರರ ವಲಯದಲ್ಲಿ ಸಂತಸ ಮೂಡಿಸಿದೆ.

ರಾಜ್ಯ ನಾಗರಿಕ ಸೇವಾ ಹುದ್ದೆಗಳಲ್ಲಿ ಎಸ್‌ಸಿ, ಎಸ್‌ಟಿ ನೌಕರರಿಗೆ ನೀಡಲಾಗುವ ಮುಂಬಡ್ತಿಯಲ್ಲಿ ಶೇ 15 ಮತ್ತು ಶೇ 3 ಮೀಸಲಾತಿ ಕಲ್ಪಿಸುವ ಕುರಿತು 1978 ರ ಏ. 27 ರಂದು ಹೊರಡಿಸಿದ ಆದೇಶದಲ್ಲಿ ವಿವರಿಸಲಾಗಿದೆ. 1999ರ ಆದೇಶದಲ್ಲಿ ಆಯಾ ವೃಂದದ ಕಾರ್ಯನಿರತ ವೃಂದಬಲದಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಪ್ರಾತಿನಿಧ್ಯ ಶೇ 15 ಮತ್ತು ಶೇ 3 ತಲುಪುವವರೆಗೆ ಮೀಸಲಾತಿ ರೋಸ್ಟರ್‌ ಅಳವಡಿಸುವಂತೆ ಸೂಚಿಸಲಾಗಿದೆ.

‘ಯಾವುದೇ ವೃಂದದಲ್ಲಿ ಮೀಸಲಾತಿ ಲೆಕ್ಕ ಹಾಕುವಾಗ ಸ್ವಂತ ಅರ್ಹತೆಯಲ್ಲಿ ನೇರ ನೇಮಕಾತಿಯಲ್ಲಿ ನೇಮಕಗೊಂಡ ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಮೀಸಲಾತಿ ಕೋಟಾ ಎದುರು ಪರಿಗಣಿಸುವಂತಿಲ್ಲ. ಅಲ್ಲದೆ, ಈ ರೀತಿ ನೇಮಕ ಹೊಂದಿದ ನಂತರದ ವೃಂದಕ್ಕೂ ಸ್ವಂತ ಅರ್ಹತೆಯಲ್ಲಿಯೇ ಮುಂಬಡ್ತಿ ಹೊಂದಿದ್ದರೆ ಮೀಸಲಾತಿ ಕೋಟಾದಲ್ಲಿ ಪರಿಗಣಿಸಬಾರದು. ಅಂದರೆ, ಯಾವ ವೃಂದದಲ್ಲಿ ಇರುತ್ತಾರೊ ಆ ವೃಂದದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕೋಟಾ ಪ್ರಾತಿನಿಧ್ಯ ಲೆಕ್ಕ ಹಾಕುವಾಗ ಈ ನೌಕರರನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು. ಉಳಿದ ಎಸ್‌ಸಿ, ಎಸ್‌ಟಿ ನೌಕರರನ್ನು ಮಾತ್ರ ಮೀಸಲಾತಿ ಕೋಟಾದಲ್ಲಿ ಪರಿಗಣಿಸಬೇಕು’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಯಾವುದೇ ವೃಂದದಲ್ಲಿ ಮುಂಬಡ್ತಿಗೆ ಲಭ್ಯವಿರುವ ರಿಕ್ತ ಸ್ಥಾನಗಳು ಸಾಮಾನ್ಯ ವರ್ಗದವರಾಗಿದ್ದು, ಅದರ ಪೂರಕ ವೃಂದದಲ್ಲಿ ಜ್ಯೇಷ್ಠತಾ ಪಟ್ಟಿಯ ಅನುಸಾರ ಎಸ್‌ಸಿ, ಎಸ್‌ಟಿ ವರ್ಗದ ನೌಕರ ಮುಂಬಡ್ತಿಗೆ ಅರ್ಹರಾಗಿದ್ದರೆ ಅವರನ್ನು ಸಾಮಾನ್ಯ ವರ್ಗದ ರಿಕ್ತ ಸ್ಥಾನದ ಎದುರು ಪರಿಗಣಿಸಿ ಮುಂಬಡ್ತಿ ನೀಡಬೇಕು. ಮುಂಬಡ್ತಿ ನೀಡುತ್ತಿರುವ ವೃಂದದಲ್ಲಿ ಮೀಸಲಾತಿ ಪ್ರಾತಿನಿಧ್ಯ ಭರ್ತಿಯಾಗಿದೆ ಎಂಬ ಕಾರಣಕ್ಕೆ ಅರ್ಹ ಎಸ್‌ಸಿ, ಎಸ್‌ಟಿ ನೌಕರರನ್ನು ಸಾಮಾನ್ಯ ವರ್ಗದ ಮುಂಬಡ್ತಿ ರಿಕ್ತ ಸ್ಥಾನದ ಎದುರು ಪರಿಗಣಿಸದೇ ಇರುವಂತಿಲ್ಲ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಾಗಿ ನೇರ ನೇಮಕಾತಿ ಹೊಂದಿದ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಸ್ವಂತ ಅರ್ಹತೆಯ ಅಭ್ಯರ್ಥಿಗಳು ಎಂದೇ ಪರಿಗಣಿಸಬೇಕು. ಈ ರೀತಿ ಪರಿಗಣಿಸಲಾಗುವ ಅಭ್ಯರ್ಥಿಗಳು ಶುಲ್ಕ ವಿನಾಯಿತಿ ಹೊರತುಪಡಿಸಿ ಆಯ್ಕೆ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಬೇರೆ ಯಾವುದೇ ವಿನಾಯಿತಿ ಪಡೆದಿರಬಾರದು. ವಿನಾಯಿತಿ ಪಡೆದಿದ್ದರೆ ಅಂಥವರನ್ನು ಆಯಾ ಮೀಸಲಾತಿ ವರ್ಗದಲ್ಲಿ ಮಾತ್ರ ಪರಿಗಣಿಸಬೇಕು ಎಂದು ತಿಳಿಸಲಾಗಿದೆ.

ಮುಂಬಡ್ತಿ ನೀಡುವ ಸಂದರ್ಭದಲ್ಲಿ ಪ್ರಾತಿನಿಧ್ಯದ ಕೊರತೆ ಇದ್ದು ಮೀಸಲಾತಿ ರೋಸ್ಟರ್‌ ನಿರ್ವಹಿಸುವ ಸಂದರ್ಭದಲ್ಲಿ ಎಷ್ಟು ಹುದ್ದೆಗಳಿಗೆ ಮುಂಬಡ್ತಿ ನೀಡಲಾಗುತ್ತಿದೆಯೊ ಅಷ್ಟೂ ಹುದ್ದೆಗಳಿಗೆ ರೋಸ್ಟರ್‌ ಅನ್ವಯಿಸಬೇಕು. ಪ್ರಾತಿನಿಧ್ಯ ಪೂರ್ಣಗೊಂಡಿದೆ ಎಂಬ ಕಾರಣಕ್ಕೆ ಮಧ್ಯದಲ್ಲಿಯೇ ರೋಸ್ಟರ್‌ ನಿರ್ವಹಣೆಯನ್ನು ನಿಲ್ಲಿಸಬಾರದು ಎಂದೂ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅರ್ಹತೆಯಲ್ಲಿ ಆಯ್ಕೆಯಾದರೂ ‘ಮೀಸಲಾತಿ’ಗೆ ಅರ್ಹರು

ಸ್ವಂತ ಅರ್ಹತೆ ಆಧಾರದಲ್ಲಿ ನೇರ ನೇಮಕಾತಿ ಅಥವಾ ಮುಂಬಡ್ತಿ ಹೊಂದಿದ್ದರೂ, ನಂತರದ ವೃಂದಕ್ಕೆ ಬಡ್ತಿಗೆ ಪರಿಗಣಿಸುವ ಸಂದರ್ಭದಲ್ಲಿ ಅವಕಾಶ ಇದ್ದರೆ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ಉದಾಹರಣೆಗೆ, ಸಹಾಯಕ ವೃಂದದಲ್ಲಿ ಸ್ವಂತ ಅರ್ಹತೆ ಆಧಾರದಲ್ಲಿ ನೇಮಕಗೊಂಡ ಎಸ್‌ಸಿ, ಎಸ್‌ಟಿ ನೌಕರ ಹಿರಿಯ ಸಹಾಯಕ ವೃಂದಕ್ಕೆ ಮುಂಬಡ್ತಿ ಹೊಂದುವ ಸಂದರ್ಭದಲ್ಲಿ ಮೀಸಲಾತಿ ಪಡೆಯಲು ಅರ್ಹನಾಗಿರುತ್ತಾನೆ. ಆದರೆ, ಹೀಗೆ ಮುಂಬಡ್ತಿ ಹೊಂದಿದವರನ್ನು ಸಾಮಾನ್ಯ ವರ್ಗದ ನೌಕರನೆಂದು ಪರಿಗಣಿಸದೆ, ಎಸ್‌ಸಿ, ಎಸ್‌ಟಿ ನೌಕರನೆಂದೇ ಪರಿಗಣಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೊನೆಗೂ ಜಯ ಸಿಕ್ಕಿದೆ. ಆದರೆ, ಈ ಸುತ್ತೋಲೆ, ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ ಜಾರಿಯಾದ ದಿನದಿಂದ ಅನ್ವಯ ಆಗಬೇಕು.

- ಡಿ. ಚಂದ್ರಶೇಖರಯ್ಯ, ಅಧ್ಯಕ್ಷ, ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT