ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕೇಳಿದಾಕ್ಷಣ ಕೊಡಲು ಸಾಧ್ಯವಿಲ್ಲ: ಅಕ್ಕಿ ಪೂರೈಕೆ ಬಗ್ಗೆ ಸದಾನಂದ ಗೌಡ ಹೇಳಿಕೆ

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಡಿ.ವಿ.ಸದಾನಂದಗೌಡ ಹೇಳಿಕೆ
Published 23 ಜೂನ್ 2023, 14:37 IST
Last Updated 23 ಜೂನ್ 2023, 14:37 IST
ಅಕ್ಷರ ಗಾತ್ರ

ಮಂಡ್ಯ: ಕೇಂದ್ರ ಸರ್ಕಾರ ತನ್ನಲ್ಲಿರುವ ಆಹಾರ ಸಾಮಗ್ರಿಗಳನ್ನು ಎಲ್ಲರಿಗೂ ಹಂಚಿಕೆ ಮಾಡಬೇಕು. ಕರ್ನಾಟಕ ಕೇಳಿದಾಕ್ಷಣ ಕೊಡಲು ಸಾಧ್ಯವಿಲ್ಲ ಎಂದು ಸಂಸದ ಸದಾನಂದ ಗೌಡ ಹೇಳಿದ್ದಾರೆ.

ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಎಲ್ಲವನ್ನೂ ನೋಡಿಕೊಳ್ಳಬೇಕಾಗಿದೆ. ತನ್ನಲ್ಲಿರುವ ಆಹಾರ ಸಾಮಗ್ರಿಗಳನ್ನು ಎಲ್ಲರಿಗೂ ಹಂಚಿಕೆ ಮಾಡಬೇಕು. ಕರ್ನಾಟಕ ಕೇಳಿದಾಕ್ಷಣ ಕೊಡಲು ಸಾಧ್ಯವಿಲ್ಲ. ಭರವಸೆ ನೀಡುವ ಮುನ್ನ ಎಲ್ಲವನ್ನೂ ಯೋಚಿಸಿ ನಿರ್ಧಾರ ಮಾಡಬೇಕಿತ್ತು. ಅದು ಬಿಟ್ಟು ಈಗ ಕೇಂದ್ರದ ಕಡೆಗೆ ಕೈ ತೋರಿಸುವುದು ಸರಿಯಲ್ಲ, ರಾಜ್ಯದ ಹಿತಾಸಕ್ತಿ ಕಾಂಗ್ರೆಸ್‌ನವರಿಗೆ ಬೇಕಿಲ್ಲ’ ಎಂದು ಗುಡುಗಿದರು.

ಮುಖ್ಯಮಂತ್ರಿ ಕುರ್ಚಿ ಕಾಲು ಇಬ್ಬರ ಕೈಯಲ್ಲಿ

‘ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಯ ಎರಡು ಕಾಲುಗಳು ಸಿದ್ದರಾಮಯ್ಯ ಹಾಗೂ ಇನ್ನೆರಡು ಕಾಲು ಡಿ.ಕೆ.ಶಿವಕುಮಾರ್‌ ಕೈಯಲ್ಲಿವೆ. ಆದರೆ, ಈ ಕುರ್ಚಿ ಕಾಲುಗಳು ಯಾವಾಗ ಮುರಿದು ಬೀಳುತ್ತವೆಯೋ ಗೊತ್ತಿಲ್ಲ’ ಎಂದು ಸಂಸದ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.

‘ಪಕ್ಷ ಹಿನ್ನಡೆಯಾದರೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ಸಂತೋಷವಾಗಿದೆ. ಮಂಡ್ಯ ಮಾತ್ರವಲ್ಲ ರಾಜ್ಯದಲ್ಲಿ ಸೋತಿದ್ದೇವೆ. ಚುನಾವಣೆ ಹಿನ್ನಡೆಗೆ ಕಾರಣ ವಿಶ್ಲೇಷಣೆ ಮಾಡಬೇಕು. ಹಿಂದೆ ಇದ್ದ ಮಂಡ್ಯ ಇವತ್ತಿಲ್ಲ, ಕಾರ್ಯಕರ್ತರು ಸವಾಲು ಎದುರಿಸಲು ಸಿದ್ಧರಿದ್ದಾರೆ, ಒಳ್ಳೆಯ ಕಾರ್ಯಕ್ಷೇತ್ರ ಮಂಡ್ಯ’ ಎಂದರು.

‘ಕೆ.ಆರ್.ಎಸ್. ಅಣೆಕಟ್ಟೆ ಗೋಡೆಯಲ್ಲಿ ಬಿಟ್ಟ ಬಿರುಕನ್ನು ಸರಿ ಮಾಡಿದ್ದು ಬಿಜೆಪಿ ಸರ್ಕಾರ, ಇವರು ಈಗ ₹50 ಕೋಟಿ ಕೊಟ್ಟಿದ್ದಾರೆ. ನಾವು ಈಗಾಗಲೇ ₹170 ಕೋಟಿಗೂ ಅಧಿಕ ಹಣ ನೀಡಿದ್ದೇವೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪರದಾಡುತ್ತಿದ್ದಾರೆ. ಎಲ್ಲದ್ದಕ್ಕೂ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸುವ ಕೆಲಸ ಮಾಡುತ್ತಿರುವುದನ್ನು ಬಿಡಬೇಕು’ ಎಂದರು.

‘ಕಾಂಗ್ರೆಸ್ ನೇತೃತ್ವದ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು, ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಎಲ್ಲ ಜನೋಪಯೋಗಿ ಕಾರ್ಯಗಳಿಗೆ ಅಡ್ಡಗಾಲು ಹಾಕಿದೆ. ಅದರಂತೆ ಕಾಯ್ದೆಗಳನ್ನು ರದ್ದು ಮಾಡಿದೆ. ಸಾಮಾನ್ಯವಾಗಿ ಕಾಯ್ದೆಗಳಿಗೆ ತಿದ್ದುಪಡಿ ತರುವುದು ವಾಡಿಕೆ. ಆದರೆ, ರಾಜ್ಯ ಸರ್ಕಾರ ಅವುಗಳನ್ನೇ ರದ್ದು ಮಾಡುವ ಮಟ್ಟಕ್ಕೆ ಹೋಗುತ್ತಿರುವುದು ನಾಚಿಕೆಗೇಡು’ ಎಂದು ಹರಿಯಾಯ್ದರು.

‘ಕೇಂದ್ರ ಸಂಪುಟದ ಒಬ್ಬರೇ ಒಬ್ಬ ಸಚಿವರ ಮೇಲೂ ಭ್ರಷ್ಟಾಚಾರದ ಆರೋಪಗಳಿಲ್ಲ. 2024ರ ಚುನಾವಣೆಯಲ್ಲಿ 350 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ’ ಎಂದರು.

‘ರಾಜ್ಯದಲ್ಲಿ ನಾವು ಸೋತಿದ್ದೇವೆ, ಸೋತ ಮಾತ್ರಕ್ಕೆ ಹತಾಶರಾಗುವುದು ಬೇಡ, ವಾಜಪೇಯಿ ಅವರೂ ಸೋತಿದ್ದರು. ಈಗ ನಾವು ಜನಾದೇಶವನ್ನು ಒಪ್ಪಿಕೊಂಡಿದ್ದೇವೆ. ಎಲ್ಲಿ ಸೋತಿದ್ದೇವೋ ಅಲ್ಲಿಂದಲೇ ಮತ್ತೆ ಗೆದ್ದು ತೋರಿಸಬೇಕಾದ ಸಮಯ ಬಂದಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಹಾಗೂ ಹಾಸನ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ. ಕೊಟ್ಟ ಮಾತು ತಪ್ಪಿ ಕಾಂಗ್ರೆಸ್ ಪರಿತಪ್ಪಿಸುತ್ತಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದನ್ನು ಬಿಟ್ಟು ಜನೋಪಯೋಗಿ ಕೆಲಸ ಮಾಡಲಿ’ ಎಂದು ಒತ್ತಾಯಿಸಿದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಎಲ್ಲವನ್ನೂ ನೋಡಿಕೊಳ್ಳಬೇಕಾಗಿದೆ. ತನ್ನಲ್ಲಿರುವ ಆಹಾರ ಸಾಮಗ್ರಿಗಳನ್ನು ಎಲ್ಲರಿಗೂ ಹಂಚಿಕೆ ಮಾಡಬೇಕು. ಕರ್ನಾಟಕ ಕೇಳಿದಾಕ್ಷಣ ಕೊಡಲು ಸಾಧ್ಯವಿಲ್ಲ. ಭರವಸೆ ನೀಡುವ ಮುನ್ನ ಎಲ್ಲವನ್ನೂ ಯೋಚಿಸಿ ನಿರ್ಧಾರ ಮಾಡಬೇಕಿತ್ತು. ಅದು ಬಿಟ್ಟು ಈಗ ಕೇಂದ್ರದ ಕಡೆಗೆ ಕೈ ತೋರಿಸುವುದು ಸರಿಯಲ್ಲ, ರಾಜ್ಯದ ಹಿತಾಸಕ್ತಿ ಕಾಂಗ್ರೆಸ್‌ನವರಿಗೆ ಬೇಕಿಲ್ಲ’ ಎಂದು ಗುಡುಗಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಕಾಂಗ್ರೆಸ್ ಗ್ಯಾರಂಟಿಗಳಿಂದಾಗಿ ಮುಂದಿನ ದಿನಗಳಲ್ಲಿ ಸಮಸ್ಯೆರಾಯಸ್ವಾಮಿ ಆಗುತ್ತಾರೆ, ಉಚಿತ ಬಸ್ ವ್ಯವಸ್ಥೆ ಕೊಟ್ಟು ಅದಕ್ಕೆ ಸರಿಯಾದ ಸೌಲಭ್ಯ ನೀಡಿಲ್ಲ. ಅಕ್ಕಿ ಕೊಡುವುದಾಗಿ ವಾಗ್ದಾನ ಮಾಡಿ ಈಗ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ. ಉಚಿತ ವಿದ್ಯುತ್ ಯೋಜನೆಯಲ್ಲಿ ಕಂಬವೇ ಅವರ ಮೇಲೆ ಬೀಳುವಂತಾಗಿದೆ’ ಎಂದು ಟೀಕಿಸಿದರು.

ಮುಖಂಡರಾದ ವಿಜಯಶಂಕರ್, ನಿರಂಜನ್‌ ಕುಮಾರ್, ಅಶ್ವತ್ಥನಾರಾಯಣ, ಪ್ರೊ.ಮಲ್ಲಿಕಾರ್ಜುನ್, ಡಾ.ಇಂದ್ರೇಶ್, ಎಸ್.ಪಿ.ಸ್ವಾಮಿ, ಸಚ್ಚಿದಾನಂದ, ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ಮುನಿರಾಜು, ವಿದ್ಯಾ ನಾಗೇಂದ್ರ ಭಾಗವಹಿಸಿದ್ದರು.

ಮಂಡ್ಯ ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಗೆ ಸಂಸದ ಡಿ.ವಿ.ಸದಾನಂದಗೌಡ ಸೇರಿದಂತೆ ಗಣ್ಯರು ಚಾಲನೆ ನೀಡಿದರು
ಮಂಡ್ಯ ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಗೆ ಸಂಸದ ಡಿ.ವಿ.ಸದಾನಂದಗೌಡ ಸೇರಿದಂತೆ ಗಣ್ಯರು ಚಾಲನೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT