ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಷಿಕಾ ನೆನಪಿನ ಅಂಬರೀಷ್ ಸಹಾಯಹಸ್ತ

Last Updated 25 ನವೆಂಬರ್ 2018, 6:57 IST
ಅಕ್ಷರ ಗಾತ್ರ

ಬೆಂಗಳೂರು: ಅಗಲಿದ ನಟ ಅಂಬರೀಷ್ ಅವರು ‘ಚಂದನವನ’ದ ಹೊಸ ನಟರಿಗೆ ನೀಡುತ್ತಿದ್ದ ಸಹಾಯ ಹಸ್ತದ ಬಗ್ಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಕಥೆಗಳಿವೆ. ‘ಹೊಸಬರನ್ನು ಪ್ರೋತ್ಸಾಹಿಸಬೇಕು ಎನ್ನುವ ವಿಚಾರದಲ್ಲಿ ಅಂಬಿ ಅವರದ್ದು ಅಚಲ ನಿಲುವು’ ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರು ಯಾವತ್ತೂ ಆಡುವ ಮಾತು.

ಆ ಮಾತಿಗೆ ಪೂರಕವಾಗಿ ಇಲ್ಲೊಂದು ದೃಷ್ಟಾಂತ ಇದೆ. ಬಿಡುಗಡೆ ಆದ ಐದೇ ದಿನಗಳಲ್ಲಿ ಚಿತ್ರಮಂದಿರಗಳಿಂದ ಎತ್ತಂಗಡಿ ಆಗುತ್ತಿದ್ದ, ರಿಷಿಕಾ ಶರ್ಮಾ ನಿರ್ದೇಶನದ ‘ಟ್ರಂಕ್’ ಸಿನಿಮಾ ಇಪ್ಪತ್ತೈದು ದಿನ ಓಡುವಂತೆ ಮಾಡಿದ್ದರ ಹಿಂದೆ ಅಂಬರೀಷ್ ಅವರ ಸಹಾಯಹಸ್ತ ಇತ್ತು.

‘ಟ್ರಂಕ್’ ಚಿತ್ರ ಆರಂಭದಲ್ಲಿ 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಆದರೆ, ಹೊಸ ಸಿನಿಮಾಗಳು ಬಂದ ಕಾರಣ, ಮೊದಲ ವಾರದ ನಂತರ 59 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ನಿಲ್ಲಿಸಲಾಯಿತು.

‘ಟ್ರಂಕ್‌ ಸಿನಿಮಾ ನಿರ್ದೇಶನ ಮಾಡಿದ ರಿಷಿಕಾ ಅವರು ಜಿ.ವಿ.ಅಯ್ಯರ್ ಅವರ ಮೊಮ್ಮಗಳು. ಸಿನಿಮಾ ಚೆನ್ನಾಗಿದೆ’ ಎಂದು ಅಂಬರೀಷ್ ಅವರಲ್ಲಿ ಯಾರೋ ಹೇಳಿದ್ದರಂತೆ. ‘ಅಯ್ಯರ್ ಅವರು ನನಗೆ ಬಹಳ ಸಹಾಯ ಮಾಡಿದವರು. ಅವರನ್ನು ಮರೆಯಲು ಸಾಧ್ಯವಿಲ್ಲ. ರಿಷಿಕಾ ಅವರ ಮೊಮ್ಮಗಳು ಎಂದಾದರೆ, ಆಕೆಗೆ ನನ್ನ ಬಳಿ ಒಮ್ಮೆ ಬರುವಂತೆ ಹೇಳಿ ಎಂದು ಅಂಬರೀಷ್ ಹೇಳಿದ್ದರಂತೆ. ಅಂಬರೀಷ್ ಅವರನ್ನು ತಕ್ಷಣ ಸಂಪರ್ಕಿಸಬೇಕು ಎಂದು ನಟಿ ಅರುಣಾ ಬಾಲರಾಜ್ ಅವರು ನನ್ನಲ್ಲಿ ಹೇಳಿದ್ದರು. ಆದರೆ ತಕ್ಷಣ ಸಂಪರ್ಕಿಸಲು ಆಗಿರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ರಿಷಿಕಾ.

ರಿಷಿಕಾ ಶರ್ಮಾ
ರಿಷಿಕಾ ಶರ್ಮಾ

‘ನಾವು ಮಾಡಿದ ಸಿನಿಮಾ ಒಂದೇ ವಾರದಲ್ಲಿ ಸಿನಿಮಾ ಮಂದಿರಗಳಿಂದ ಹೊರಹೋಗುವಂತಹದ್ದಾಗಿರಲಿಲ್ಲ. ನಾನು ಅಂಬರೀಷ್ ಅವರಿಗೆ ಕರೆ ಮಾಡಿ, ನಿಮ್ಮನ್ನು ಭೇಟಿ ಆಗಬೇಕು ಎಂದು ಹೇಳಿದೆ. ಮನೆಗೆ ಬರುವಂತೆ ಸೂಚಿಸಿದರು. ಮನೆಗೆ ಹೋದಾಗ ಅವರು ಆಗಷ್ಟೇ ಡಯಾಲಿಸಿಸ್‌ ಮುಗಿಸಿಕೊಂಡು ಬಂದಿದ್ದರು. ಮೂರು ಗಂಟೆ ನಮ್ಮ ಜೊತೆ ಮಾತನಾಡಿದರು. ಸಿನಿಮಾ ಹೇಗೆ ನಡೆಯುತ್ತಿದೆ ಎಂದು ಅಂಬರೀಷ್ ಕೇಳಿದಾಗ, ಚಿತ್ರಮಂದಿರಗಳಿಂದ ತೆಗೆಯುತ್ತಿದ್ದಾರೆ ಎಂಬುದನ್ನು ತಿಳಿಸಿದೆ. ಆಗ ನಮ್ಮ ಸಹಾಯಕ್ಕೆ ಬಂದ ಅಂಬರೀಷ್, ಚಿತ್ರ ನಿರ್ಮಾಪಕ ಹಾಗೂ ವಿತರಕ ಜಯಣ್ಣ ಅವರ ಜೊತೆ ಮಾತನಾಡಿ, ಅವರನ್ನು ಭೇಟಿಯಾಗುವಂತೆ ಸೂಚಿಸಿದರು’ ಎಂದರು ರಿಷಿಕಾ.

ಅಂಬರೀಷ್ ಅವರು ಜಯಣ್ಣ ಅವರಲ್ಲಿ ಹೇಳಿದ್ದು ಇಷ್ಟು: ‘ಅಯ್ಯರ್ ಅವರು ಸಿನಿಮಾ ಉದ್ಯಮ ಕಟ್ಟಿದವರು. ಅಯ್ಯರ್ ಅವರಿಂದಾಗಿ ನಾವೆಲ್ಲ ಬೆಳೆದವರು. ಅವರ ಮೊಮ್ಮಗಳು ಮಾಡಿರುವ ಸಿನಿಮಾಕ್ಕೆ ಹೀಗಾಗಬಾರದು’.

‘ನಾವು ಜಯಣ್ಣ ಅವರನ್ನು ಭೇಟಿ ಮಾಡಿದೆವು. ಅಂಬರೀಷ್ ಅವರು ತಮ್ಮ ಸಿನಿಮಾ ಪ್ರದರ್ಶನಕ್ಕೆ ಕೂಡ ಕರೆ ಮಾಡಿದವರಲ್ಲ. ಆದರೆ ನಿಮಗಾಗಿ ಕರೆ ಮಾಡಿದ್ದಾರೆ. ನೀವು ಪುಣ್ಯ ಮಾಡಿದ್ದೀರಿ ಎಂದು ಜಯಣ್ಣ ನಮ್ಮಲ್ಲಿ ಹೇಳಿದರು. ನಮಗೆ ಕೆಲವಷ್ಟು ಸಿನಿಮಾ ಮಂದಿರಗಳನ್ನು ಕೊಡಿಸಿದರು. ನಮ್ಮ ಸಿನಿಮಾ 25 ದಿನ ಪೂರೈಸಿತು. ನಿರ್ಮಾಪಕರು ಹೂಡಿದ ಹಣ ವಾಪಸ್ ಬಂತು. 25 ದಿನ ಓಡದೆ ಇದ್ದಿದ್ದರೆ ಹೂಡಿದ ಹಣ ವಾಪಸ್ ಬರುವ ಸಾಧ್ಯತೆ ಇರಲಿಲ್ಲ’ ಎಂದು ಕೃತಜ್ಞತೆಯಿಂದ ಹೇಳುತ್ತಾರೆ ರಿಷಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT