ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಅಪಘಾತ: 9 ಮಂದಿ ಸಾವು

Published 5 ಫೆಬ್ರುವರಿ 2024, 5:14 IST
Last Updated 5 ಫೆಬ್ರುವರಿ 2024, 5:14 IST
ಅಕ್ಷರ ಗಾತ್ರ

ಬೆಳಗಾವಿ/ಮಂಡ್ಯ/ಹಾಸನ: ರಾಜ್ಯದ ವಿವಿಧೆಡೆ ಭಾನುವಾರ ನಡೆದ ಪ್ರತ್ಯೇಕ ಮೂರು ಅಪಘಾತಗಳಲ್ಲಿ ಮೂವರು ಕೂಲಿ ಕಾರ್ಮಿಕ ಮಹಿಳೆಯರು ಸೇರಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶೇಡಬಾಳ ಶೇಡಬಾಳ ಬಳಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಟ್ರಾಲಿ ಪಲ್ಟಿಯಾಗಿ, ರಸ್ತೆಬದಿ ಸಾಗುತ್ತಿದ್ದ ಕೂಲಿಕಾರ ಮಹಿಳೆಯರಾದ ಮಾಲವ್ವ ರಾವಸಾಬ ಐನಾಪುರೆ(65), ಚಂಪಾ ಲಕ್ಕಪ್ಪ ತಳಕಟ್ಟಿ(45) ಹಾಗೂ ಭಾರತಿ ಸತ್ಯಪ್ಪ ಘಾಟಗೆ (42) ಸ್ಥಳದಲ್ಲಿಯೇ ಮೃತಪಟ್ಟರು. ಶೇಖವ್ವ ನರಸಪ್ಪ ನರಸಾಯಿ(45) ಗಂಭೀರವಾಗಿ ಗಾಯಗೊಂಡಿದ್ದು, ಮೀರಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಹಿಳೆಯರು ಹೊಲದಲ್ಲಿ ಜೋಳ ಕೀಳುವ ಕೆಲಸಕ್ಕೆ ಹೋಗಿ, ವಾಪಸ್‌ ಮನೆಗೆ ಬರುವಾಗ ಘಟನೆ ನಡೆದಿದೆ. ಅಪಘಾತದಿಂದ ಮೀರಜ್‌– ಜಮಖಂಡಿ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಖಾನಾಪುರ ತಾಲ್ಲೂಕಿನ ಭಂಡರಗಾಳಿ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ಜೀಪು–ಬೈಕ್‌ ನಡುವೆ ಡಿಕ್ಕಿ ಸಂಭವಿಸಿ, ಬೈಕ್‌ ಸವಾರರಾದ, ತಾಲ್ಲೂಕಿನ ಬೇಕವಾಡದ ರಾಮಲಿಂಗ ಮುತಗೇಕರ್‌(20), ಹನುಮಂತ ಪಾಟೀಲ(19) ಮೃತಪಟ್ಟಿದ್ದಾರೆ.  ‘ಇವರಿಬ್ಬರೂ ಸೈನಿಕ ತರಬೇತಿಗಾಗಿ ಬೆಳಗಾವಿ ತಾಲ್ಲೂಕಿನ ನಂದಿಹಳ್ಳಿ ಯತ್ತ ತೆರಳುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಸಮೀಪ ಬೆಂಗಳೂರು-ಜಾಲ್ಸೂರು ಹೆದ್ದಾರಿಯ ಹೇಮಾವತಿ ಸೇತುವೆ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದು, ಮೂವರು ಯುವಕರು ಸ್ಥಳದಲ್ಲೇ ಸಾವಿಗೀಡಾದರು.

ಕೆ.ಆರ್‌. ಪೇಟೆ ಪಟ್ಟಣದ ನಿವಾಸಿ, ಭಗವಾನ್ ಅಂಗಡಿಯ ಚೇತನ್‌ಕುಮಾರ್ ಪುತ್ರ ಅನಿಚೇತ್ (21), ಅಗ್ರಹಾರದ ನಿವಾಸಿ ಸರ್ವೇಯರ್ ಅಶೋಕ್ ಅವರ ಪುತ್ರ ಚಿರಂಜಿವಿ (22) ಮತ್ತು ಕುಶಾಲನಗರದ ಬೈಲುಕುಪ್ಪೆಯ ನಿವಾಸಿ ಸೋಮಶೇಖರ್ ಪುತ್ರ ಪವನ್ ಶೆಟ್ಟಿ ಮೃತರು. ಸಾಗರ್‌ ಎನ್ನುವವರಿಗೆ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಾಲ್ವರು ಶನಿವಾರ ಮಧ್ಯರಾತ್ರಿ ಅಕ್ಕಿಹೆಬ್ಬಾಳು ಕಡೆಯಿಂದ ಕೆ.ಆರ್.ಪೇಟೆಯತ್ತ ಬರುತ್ತಿದ್ದರು.

ಮನೆ, ಶಾಲೆ ಆವರಣಕ್ಕೆ ನುಗ್ಗಿದ ಬಸ್‌: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌, ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದ ಬಳಿ ಭಾನುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮನೆಯ ಗೋಡೆ ಮತ್ತು ಶಾಲೆಯ ಕಾಂಪೌಂಡ್‌ಗೆ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟರು. ಚನ್ನರಾಯಪಟ್ಟಣ ತಾಲ್ಲೂಕಿನ ಉದಯ ಪುರ ಗ್ರಾಮದ ಅಮೃತ್‌ರಾಜ್‌ (34) ಮೃತರು.

ಬಸ್‌ನಲ್ಲಿದ್ದ 10 ಮಂದಿ ಪ್ರಯಾಣಿಕ ರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸ ಲಾಗಿದೆ. ‘ಬಸ್‌ನ ಆಕ್ಸಲ್‌ ತುಂಡಾದ ಪರಿಣಾಮ ಈ ಘಟನೆ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT