ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹37 ಸಾವಿರ ಕೋಟಿ ಬೆಳೆ ನಷ್ಟ: ಪರಿಹಾರಕ್ಕಾಗಿ ಕೇಂದ್ರಕ್ಕೆ ಪತ್ರ– ಸಿದ್ದರಾಮಯ್ಯ

ಹಾಸನಾಂಬ ದರ್ಶನ ಪಡೆದ ಸಿದ್ದರಾಮಯ್ಯ
Published 7 ನವೆಂಬರ್ 2023, 10:33 IST
Last Updated 7 ನವೆಂಬರ್ 2023, 10:33 IST
ಅಕ್ಷರ ಗಾತ್ರ

ಹಾಸನ: ರಾಜ್ಯಕ್ಕೆ ಕೂಡಲೇ ಅಗತ್ಯ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಹಾಸನಾಂಬ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕೇಂದ್ರವು ಸಹ ರಾಜ್ಯಕ್ಕೆ ಸಹಕಾರವನ್ನು ನೀಡಬೇಕು. ರಾಜ್ಯಗಳು ಜನರ ತೆರಿಗೆ ಹಣವನ್ನು ಕೇಂದ್ರಕ್ಕೆ ಕಟ್ಟಿರುತ್ತವೆ. ಸಮಯಕ್ಕೆ ಸರಿಯಾಗಿ ಪರಿಹಾರ ಒದಗಿಸುವುದು ಕೇಂದ್ರ ಸರ್ಕಾರದ ಕೆಲಸ ಎಂದರು.

ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ₹37,700 ಕೋಟಿ ಬೆಳೆ ನಷ್ಟ ಸಂಭವಿಸಿದೆ. ಎನ್ ಡಿ ಆರ್ ಎಫ್ -ಎಸ್ ಡಿ ಆರ್ ಎಫ್ ನಿಯಮದಂತೆ ₹17,900 ಕೋಟಿ ಪರಿಹಾರ ಬಿಡುಗಡೆ ಕೇಂದ್ರಕ್ಕೆ ಪ್ರಸ್ತಾವ ನೀಡಿದ್ದೇವೆ. ಕೇಂದ್ರ ಸರ್ಕಾರದಿಂದ ಬರ ಅಧ್ಯಯನ ತಂಡ ಸಹ ಭೇಟಿ ನೀಡಿ ಪರಿಶೀಲಿಸಿದೆ. ಇನ್ನೂ ಕೇಂದ್ರಕ್ಕೆ ವರದಿ ನೀಡಿಲ್ಲ. ಬರ ಪರಿಹಾರ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಹಣ ನೀಡದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಬೇರೆ ಪಕ್ಷದ ಶಾಸಕರನ್ನು ಸೆಳೆಯಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬರ ಪರಿಹಾರವಾಗಿ ಕೇಂದ್ರವನ್ನು ಹಣ ಕೇಳಬಾರದೆ? ಹಣ ಕೇಳಿದರೆ ಜಗಳ ಆಡಿದಂತೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರ ವಿರುದ್ಧ ಸಿದ್ದರಾಮಯ್ಯ ಅವರು ದುರಹಂಕಾರ ಮಾತನಾಡಿದ್ದಾರೆ ಎಂದು ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಆದರೆ ಪ್ರಧಾನಿ ಮೋದಿ ಅವರು ನನ್ನ ವಿರುದ್ಧ ಮಾತನಾಡಬಹುದೇ? ಮಧ್ಯಪ್ರದೇಶದ ಚುನಾವಣೆ ಪ್ರಚಾರ ಸಭೆಯಲ್ಲಿ ಕರ್ನಾಟಕದ ಬಗ್ಗೆ ಮಾತನಾಡುವುದು ಏಕೆ ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ ಸಂಬಂಧ ಆಯಾ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿದ್ದು ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಸ್ಥಳೀಯ ಶಾಸಕರು, ಕಳೆದ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಪಕ್ಷದ ಇತರೆ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.


ಹಾಸನ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ, ಶಾಸಕ ಕೆ.ಎಂ ಶಿವಲಿಂಗೇಗೌಡ ಇದ್ದರು.

ಮೌಢ್ಯ ನಂಬಲ್ಲ: ದೇವರನ್ನು ನಂಬುತ್ತೇನೆ

ಹಾಸನಾಂಬೆ ದರ್ಶನ ಮಾಡಲು ಉಸ್ತುವಾರಿ ಸಚಿವ ರಾಜಣ್ಣ ಬಂದಿದ್ದಾರೆ. ಹಾಸನಾಂಬ ಪೂಜೆ ನಡೆಯುತ್ತಿದೆ ಬರಬೇಕು ಎಂದರು. ಹಾಸನಾಂಬೆ ದರ್ಶನಕ್ಕೆ ಬಂದ‌ ಮೇಲೆ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ರಿವ್ಯೂ ಮೀಟಿಂಗ್ ಮಾಡೋಣ ಎಂದು ಹಾಸನಕ್ಕೆ ಬಂದೆ ಎಂದರು.

ಮೌಢ್ಯ ನಿನ್ನೆ, ಮೊನ್ನೆಯದಲ್ಲ. ಮೌಢ್ಯ ಎಂದರೆ ನಂಬಿಕೆಯಲ್ಲಿ ಅಪನಂಬಿಕೆ. ಮೌಢ್ಯವನ್ನು ಹಿಂದಿನಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಮೌಢ್ಯ ವಿರೋಧಿ ಕಾಯ್ದೆ ಮಾಡಿದ್ದೇವೆ.‌ ನಾನು ಮೌಢ್ಯಗಳನ್ನ ನಂಬುವುದಿಲ್ಲ. ಆದರೆ, ದೇವರಲ್ಲಿ ನಂಬಿಕೆ ಇದೆ. ಶೇ. 99ರಷ್ಟು ಜನ ಇಂದಿಗೂ ಮೌಢ್ಯ ನಂಬುತ್ತಾರೆ. ‌ನಾನು ದೇವರನ್ನು ನಂಬುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT