ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ ಹತ್ಯೆ: ತರಬೇತಿಗೆ ಬಳಸಿದ್ದ ಗುಂಡುಗಳು ಪತ್ತೆ?

Last Updated 30 ಸೆಪ್ಟೆಂಬರ್ 2018, 16:32 IST
ಅಕ್ಷರ ಗಾತ್ರ

ಬೆಳಗಾವಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು, ತಾಲ್ಲೂಕಿನ ಗಡಿಯಲ್ಲಿರುವ ಕಿಣಯೆ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬಂದೂಕು ತರಬೇತಿಗೆ ಬಳಸಿದ್ದರು ಎನ್ನಲಾದ ಗುಂಡುಗಳನ್ನು ಎಸ್‌ಐಟಿ ಪೊಲೀಸರು ಈಚೆಗೆ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎಸ್‌ಐಟಿ ಅಧಿಕಾರಿಗಳ ತಂಡ, ಖಾನಾಪುರ–ಬೆಳಗಾವಿ ತಾಲ್ಲೂಕಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ತನಿಖೆ ಮುಂದುವರಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಂಬಂಧವಿದೆ ಎನ್ನಲಾಗುತ್ತಿರುವ, ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಶರದ್ ಕಲಸ್ಕರ್ ಹಾಗೂ ಸುಧನ್ವ ಗೋಂದಳಿಕರ್ ಅವರನ್ನು ಇಲ್ಲಿಗೆ ಕರೆತಂದಿದೆ. ಅರಣ್ಯ ಪ್ರದೇಶದಲ್ಲಿ ನಡೆಸಿದ ಬಂದೂಕು ತರಬೇತಿ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಿದೆ. ತರಬೇತಿಗೆ ಬಳಸಲಾದ ಐದು ಗುಂಡುಗಳು, ಐದು ಜೀವಂತ ಗುಂಡುಗಳು ಹಾಗೂ ಮಹತ್ವದ ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಪೊಲೀಸರು, ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನೆರವು ಪಡೆದುಕೊಂಡಿದ್ದಾರೆ ಎಂದೂ ತಿಳಿದುಬಂದಿದೆ.

‘ಬೆಳಗಾವಿಯಲ್ಲಿ ಬಂದೂಕು ತರಬೇತಿ ನೀಡಲಾಗಿತ್ತು’ ಎಂದು ಆರೋಪಿ ವಾಘ್ಮೋರೆ ವಿಚಾರಣೆ ವೇಳೆ ತಿಳಿಸಿದ್ದ. ಈ ಹೇಳಿಕೆ ಆಧರಿಸಿ, ಎಸ್ಐಟಿ ಅಧಿಕಾರಿಗಳು ಆತನನ್ನು ಜುಲೈನಲ್ಲಿ ಕರೆತಂದಿದ್ದರು. ಬಂದೂಕು ತರಬೇತಿ ನೀಡಲಾಗಿತ್ತು ಎನ್ನಲಾದ ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮಾಹಿತಿ ಕಲೆ ಹಾಕಿದ್ದರು. ಇದೀಗ, ಈಚೆಗೆ ಬಂಧಿತರಾದ ಆರೋಪಿಗಳನ್ನೂ ಕರೆ ತಂದು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

‘ಎಸ್‌ಐಟಿಯವರು ಇಲ್ಲಿಗೆ ಬಂದಿರುವ ಮಾಹಿತಿ ಇಲ್ಲ. ಅವರು ನಮ್ಮನ್ನು ಸಂಪರ್ಕಿಸಿಲ್ಲ. ಅವರಿಗೆ ಗುಂಡುಗಳು ಸಿಕ್ಕಿವೆಯೇ ಇಲ್ಲವೇ ಎನ್ನುವುದೂ ಗೊತ್ತಿಲ್ಲ’ ಎಂದು ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT