ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಾಸನಸಭೆಗೆ ಕಾರ್ಪೊರೇಟ್ ಲಗ್ಗೆಯ ಆತಂಕ: ಎಂ.ಎನ್‌. ವೆಂಕಟಾಚಲಯ್ಯ

ಕೃಷ್ಣ ಜೀವನಗಾಥೆ ಚರ್ಚೆಯಾಗಲಿ
Last Updated 4 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಐದು ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳು ನಮ್ಮ ಶಾಸನ ಸಭೆಗಳಲ್ಲಿ ಸ್ಥಾನ‌ ಪಡೆದು ತಮ್ಮ ನಿಯಮಾವಳಿಗಳನ್ನು ನಮ್ಮ ಮೇಲೆ ಹೇರುವ ಅಪಾಯವಿದ್ದು, ನಾವು ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಎಸ್‌.ಎಂ. ಕೃಷ್ಣ ಅವರ ಸಾಧನೆ–ಸಿದ್ಧಿಗಳ ಪರಿಚಯ ಹಾಗೂ ಆಕರ ಗ್ರಂಥಗಳಾದ ‘ಕೃಷ್ಣ ಪಥ’ ಸೇರಿ ಆರು ಕೃತಿಗಳ ಲೋಕಾರ್ಪಣೆ ಸಮಾ
ರಂಭದಲ್ಲಿ ಮಾತನಾಡಿದರು.

‘ಕೃಷ್ಣ ಅವರ ಜೀವನಗಾಥೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ಚರ್ಚೆಗಳಾಗಲಿ’ ಎಂದೂ ಹೇಳಿದರು.

‘ಕೃಷ್ಣ ಪಥ’ವನ್ನು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಮಹಾರಾಜ್‌ ಹಾಗೂ ‘ಸ್ಮೃತಿ ವಾಹಿನಿ’ ಸೇರಿ ಇತರೆ ಐದು ಕೃತಿಗಳನ್ನು ವೆಂಕಟಾಚಲಯ್ಯ ಬಿಡುಗಡೆ ಮಾಡಿದರು.

‘ಕಾಲೇಜು ಜೀವನದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ 110 ಹೆಣ್ಣು ಮಕ್ಕಳ ಪೈಕಿ 90 ಹೆಣ್ಣು ಮಕ್ಕಳು ಕೃಷ್ಣರಿಗೆ ಓಟು ಹಾಕಿದ್ದರು. ವಿದ್ಯಾರ್ಥಿ ಜೀವನದಲ್ಲಿ ಹಲವು ರೂಪವತಿಯರು ತಮ್ಮ ಜತೆ ಓಡಾಡಿದ್ದರು. ಆದರೆ, ಎಂದೂ ತಾವು ಲಕ್ಷ್ಮಣ ರೇಖೆ ಮೀರಿಲ್ಲ ಎಂದು ಕೃತಿಯಲ್ಲಿ ಕೃಷ್ಣ ಅವರು ಹೇಳಿಕೊಂಡಿದ್ದಾರೆ. ಆದರೆ, ಇವರು ಲಕ್ಷ್ಮಣ ರೇಖೆ ಮೀರಲಿಲ್ಲ. ಆ ಹೆಣ್ಣು ಮಕ್ಕಳು ಲಕ್ಷ್ಮಣ ರೇಖೆ ಮೀರಲಿಲ್ಲ ಎಂದೇನೂ ಹೇಳಿಲ್ಲ’ ಎಂದು ವೆಂಕಟಾಚಲಯ್ಯ ಹೇಳಿದಾಗ ಇಡೀ ಸಭಾಂಗಣದಲ್ಲಿ ನಗೆ ಉಕ್ಕಿತು.

‘ಕೃಷ್ಣ ಅವರನ್ನು ರಾಮಕೃಷ್ಣ ಆಶ್ರಮದ ಶಿಸ್ತು ಉತ್ತಮ ಸಂಸದೀಯ ಪಟುವಾಗಿ ರೂಪಿಸಿತು‌’ ಎಂದು ‌ಮುಕ್ತಿದಾನಂದ ಮಹಾರಾಜ್‌ ಹೇಳಿದರು.

ಸಾನಿಧ್ಯ ವಹಿಸಿದ್ದ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾ
ನಂದನಾಥ ಸ್ವಾಮೀಜಿ, ‘ಎಸ್.ಎಂ. ಕೃಷ್ಣ ರಾಜಕೀಯಕ್ಕೆ ಬಂದ ಹೊಸದರಲ್ಲಿ ಅಮೆರಿಕದ ಮಾತೆಯರು ತಮ್ಮ ಮಕ್ಕಳಿಗೆ, ಮಕ್ಕಳೇ ಬೇಗ ನಿಮ್ಮ ಆಹಾರವನ್ನು ತಿಂದು ಮುಗಿಸಿ, ಇಲ್ಲವಾದರೆ ಭಾರತದ ಬಡ ಮಕ್ಕಳು ಬಂದು ನಿಮ್ಮ ಆಹಾರವನ್ನು ಕಸಿದು ಕೊಂಡಾರು ಎಂದು ಹೇಳುತ್ತಿದ್ದರು. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾದಾಗ ಅದೇ ಅಮೆರಿಕದ ಮಾತೆಯರು ತಮ್ಮ ಮಕ್ಕಳಿಗೆ, ಮಕ್ಕಳೇ ನೀವು ಚೆನ್ನಾಗಿ ಓದಿ ಮುಂದೆ ಬನ್ನಿ. ಇಲ್ಲವಾದರೆ ಭಾರತದ ಮಕ್ಕಳು ಬಂದು ನಿಮ್ಮ ಅವಕಾಶಗಳನ್ನು ಕಸಿದುಕೊಳ್ಳುತ್ತಾರೆ ಎಂದು ಎಚ್ಚರಿಸುವಂತಾಯಿತು. ಇದು ಕೃಷ್ಣ ಅವರ ಸಾಧನೆ’ ಎಂದರು.

ಗ್ರಂಥ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಪಾವಗಡ ಪ್ರಕಾಶ್ ರಾವ್‌, ‘ಕೃಷ್ಣ ಅವರಿಗೆ ವಾಕ್ ಸಂಹಿತೆ, ವಸ್ತ್ರ ಸಂಹಿತೆ ಸಿದ್ಧಿಸಿದೆ’ ಎಂದರು.

ಎಸ್‌.ಎಂ. ಕೃಷ್ಣ ಮಾತನಾಡಿ, ‘ಈಗ ಪ್ರಜಾಪ್ರಭುತ್ವ ಹಣ ಬಲದ ಮೇಲೆ ನಿಂತಿದೆ. ಒಳ್ಳೆಯ ದಿನಗಳನ್ನು ನೋಡಿ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂಥವರಿಗೆ ಇದು ಕಳವಳ‌ ಮೂಡಿಸುತ್ತಿದೆ. ಎಲ್ಲಿಯವರೆಗೆ ಹಣದ ಪ್ರಭಾವ ಇರುತ್ತದೊ ಅಲ್ಲಿಯವರೆಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಮತ್ತು ಕವಿ ಸಿದ್ಧಲಿಂಗಯ್ಯ ಅವರು ಗ್ರಂಥಗಳ ಪರಿಚಯ ಮಾಡಿಕೊಟ್ಟರು. ‘ಕೃಷ್ಣ ಪಥ’ ಸಮಿತಿಯ ಗೌರವ ಕಾರ್ಯದರ್ಶಿ ಬಿ.ಎಲ್‌. ಶಂಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃತಿಗಳ ಒಟ್ಟು ಬೆಲೆ ₹ 6,800

‘ಕೃಷ್ಣ ಪಥ’, ‘ಚಿತ್ರದೀಪ ಸಾಲು’, ‘ಸ್ಮೃತಿ ವಾಹಿನಿ’, ‘ಭವಿಷ್ಯ ದರ್ಶನ’, ಆಂಗ್ಲ ಭಾಷೆಯಲ್ಲಿರುವ ‘ಸ್ಟೇಟ್ಸ್‌ ಮನ್ ಎಸ್‌.ಎಂ. ಕೃಷ್ಣ’, ‘ಡೌನ್‌ ಮೆಮೊರಿ ಲೇನ್‌ ಆಫ್‌ ರೇಡಿಯಂಟ್‌ ಜಾಯ್ಸ್‌’ ಹೀಗೆ ಒಟ್ಟು ಆರು ಆಕರ ಗ್ರಂಥಗಳ ಒಟ್ಟು ಬೆಲೆ ₹ 6,800. ಲೋಕಾರ್ಪಣೆಯ ಕೊಡುಗೆಯಾಗಿ ಶನಿವಾರ ₹ 3,000ಕ್ಕೆ ಗ್ರಂಥಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಸಂಪಾದಕರು ಕೆ.ಆರ್‌. ಕಮಲೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT