ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಪ್ರವಾಸದ ಬಸ್‌ ಮಗುಚಿ 17 ಜನರಿಗೆ ಗಾಯ

ಬೆಳಗಾವಿಯಿಂದ ಧರ್ಮಸ್ಥಳಕ್ಕೆ ಬಂದಿದ್ದ ವಿದ್ಯಾರ್ಥಿಗಳು
Last Updated 6 ಡಿಸೆಂಬರ್ 2019, 13:43 IST
ಅಕ್ಷರ ಗಾತ್ರ

ನೆಲ್ಯಾಡಿ (ಉಪ್ಪಿನಂಗಡಿ): ಶಾಲಾ ಪ್ರವಾಸದ ಖಾಸಗಿ ಬಸ್‌ವೊಂದು ಮಗುಚಿ 13 ಮಂದಿ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಬಸ್ ಹಾಗೂ ಕಾರಿನ ಚಾಲಕರಿಬ್ಬರು ಸೇರಿದಂತೆ 17 ಮಂದಿ ಗಾಯಗೊಂಡಿದ್ದಾರೆ.

ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಬಳಿ ಶುಕ್ರವಾರ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಶ್ರೀಗುರುಸಿದ್ದ ಸ್ವಾಮಿಗಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಧರ್ಮಸ್ಥಳ ಪ್ರವಾಸಕ್ಕೆ ಬಂದಿದ್ದರು.

ಬಸ್ ಧರ್ಮಸ್ಥಳದಿಂದ ಬೇಲೂರಿಗೆ ಹೋಗುವ ವೇಳೆ ಕೊಕ್ಕಡದ ಕಾಪಿನಬಾಗಿಲು ಬಳಿ ತಿರುವಿನಲ್ಲಿ ಎದುರಿನಿಂದ ಬಂದ ಕಾರೊಂದನ್ನು ತಪ್ಪಿಸುವ ಸಲುವಾಗಿ ಎಡಕ್ಕೆ ತಿರುಗಿಸಿದಾಗ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮಗುಚಿದೆ.

ವಿದ್ಯಾರ್ಥಿಗಳಾದ ಐಶ್ವರ್ಯ, ಚೈತ್ರಾಶ್ರೀ, ಸಂಜನಾ ರಾಜು, ಸಾಕ್ಷಿ, ಅನುರಾಧಾ, ಕಾವ್ಯ, ವರ್ಷಾ ಗಸ್ತಿ, ಶ್ರೇಯಾ, ಪೂಜಾ ಸತ್ಯಪ್ಪ, ಸಂಜನಾ, ನಯನಾ, ಸುಶಾಂತ್, ಬಾಲು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಆನಂದ ಅವಲಕ್ಕಿ, ಶಿಕ್ಷಕ ಬಿ. ಹಿರೇಮಠ, ಬಸ್‌ ಚಾಲಕ ರಮೇಶ್ ಪಾಟೀಲ್ ಹಾಗೂ ಕಾರು ಚಾಲಕ ಚಿತ್ತೂರು ಜಿಲ್ಲೆ ತಿರುಪತಿ ನಿವಾಸಿ ಪ್ರಸಾದ್ ಗಾಯಗೊಂಡಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಮಂಗಳೂರು ಅಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳದಲ್ಲೇ ಇದ್ದ ಗ್ಯಾರೇಜ್ ಮಾಲೀಕ ಹರೀಶ್ ಆಚಾರ್ಯ, ಸುರೇಂದ್ರ, ಸಾಬು ಮೋನು, ಶ್ರೀಕಾಂತ ಆಚಾರ್ಯ, ಯತೀಂದ್ರ ಶೆಟ್ಟಿ ಸೇರಿ ಬಸ್‌ನಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ನೆರವಾದರು.

ಶಿಕ್ಷಕಿ ಎಸ್.ಸಿ. ತಪೆಲಿ ಅಪಘಾತದ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ, ಉಪ್ಪಿನಂಗಡಿ ಎಸ್.ಐ. ಈರಯ್ಯ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT