ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ರಸ್ತೆ ನಿರ್ವಹಣೆಗ ಪ್ರತ್ಯೇಕ ವ್ಯವಸ್ಥೆ: ಕೃಷ್ಣ ಬೈರೇಗೌಡ

Last Updated 18 ಡಿಸೆಂಬರ್ 2018, 12:24 IST
ಅಕ್ಷರ ಗಾತ್ರ

ಬೆಳಗಾವಿ: ‘ಗ್ರಾಮೀಣ ಪ್ರದೇಶದ ಪ್ರಮುಖ ರಸ್ತೆಗಳನ್ನು ಗುರುತಿಸಿ ಪಂಚಾಯತ್‌ ರಾಜ್‌ ಇಲಾಖೆಯಿಂದಲೇ ನಿರ್ವಹಣೆ ಮಾಡಲಿದ್ದೇವೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ವಹಣಾ ವಿಭಾಗದ ಮಾದರಿಯಲ್ಲೇ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ವ್ಯವಸ್ಥೆ ರೂಪಿಸಲಿದ್ದೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಮಂಗಳವಾರ ಬಿಜೆಪಿಯ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಮುಂದಿನ ವರ್ಷದಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದರು.

‘ಗಣಿಗಾರಿಕೆ ನಡೆಯುವ ಕಡೆ ಗ್ರಾಮೀಣ ರಸ್ತೆಗಳ ಸಾಮರ್ಥ್ಯಕ್ಕಿಂತ ಹೆಚ್ಚು ಭಾರವನ್ನು ಹೊತ್ತ ಲಾರಿಗಳು ಸಂಚರಿಸುತ್ತಿವೆ. ಇದರಿಂದಾಗಿ ರಸ್ತೆಗಳು ಹದಗೆಡುತ್ತಿವೆ’ ಎಂದು ತೇಜಸ್ವಿನಿ ದೂರಿದರು.

‘ಗ್ರಾಮೀಣ ರಸ್ತೆಗಳನ್ನು ಗರಿಷ್ಠ 10 ಟನ್‌ ತೂಕದ ವಾಹನಗಳ ಸಂಚಾರಕ್ಕೆ ಅನುಗುಣವಾಗಿ ರೂಪಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಮುಖ್ಯರಸ್ತೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವಾಗ, ಅವುಗಳ ಸಾಮರ್ಥ್ಯ 30 ಟನ್‌ ತೂಕದ ವಾಹನಗಳ ಸಂಚಾರಕ್ಕೆ ಅನುಗುಣವಾಗಿರುವಂತೆ ನೋಡಿಕೊಳ್ಳುತೇವೆ’ ಎಂದು ಸಚಿವರು ಭರವಸೆ ನೀಡಿದರು.

ಕೇಂದ್ರದ ಅನುದಾನಕ್ಕೆ ಕತ್ತರಿ: ‘ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ (ಪಿಎಂಜಿಎಸ್‌ವೈ ) ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ಯಾವುದೇ ಅನುದಾನ ಬಂದಿಲ್ಲ. ರಾಜ್ಯದ 48 ಸಾವಿರ ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳು ಡಾಂಬರೀಕರಣಗೊಂಡಿವೆ. ಇನ್ನೂ 8 ಸಾವಿರ ಕಿ.ಮೀ.ಗಳಷ್ಟು ರಸ್ತೆಗಳು ಮೇಲ್ದರ್ಜೆಗೇರಿಸಬೇಕಿದೆ. ಕೇಂದ್ರವು ಪಿಎಂಜಿಎಸ್‌ವೈ ಮೂರನೇ ಹಂತದಲ್ಲಾದರೂ ಅನುದಾನ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿ ಈ ವರ್ಷ ಯಾವುದೇ ಹೊಸ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ಸಚಿವರು ತಿಳಿಸಿದರು. ಈ ಯೋಜನೆಯಡಿ ಗ್ರಾಮದ ಅಭಿವೃದ್ಧಿಗೆ ₹ 75 ಲಕ್ಷದಿಂದ ₹ 1 ಕೋಟಿಯಷ್ಟು ಅನುದಾನ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT