ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅನೈತಿಕ ಪೊಲೀಸ್‌ಗಿರಿ ಇಬ್ಬರ ಬಂಧನ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊ: ಘಟನೆ ಬಗ್ಗೆ ದೂರು ಕೊಟ್ಟ ಮುಸ್ಲಿಂ ಮಹಿಳೆ
Last Updated 19 ಸೆಪ್ಟೆಂಬರ್ 2021, 19:15 IST
ಅಕ್ಷರ ಗಾತ್ರ

ಬೆಂಗಳೂರು: ಸಹೋದ್ಯೋಗಿ ಮಹಿಳೆಯನ್ನು ಮನೆಗೆ ಡ್ರಾಪ್ ಮಾಡುವ‌ ವೇಳೆ ನಡುರಸ್ತೆಯಲ್ಲೇ ಬೈಕ್ ಅಡ್ಡಗಟ್ಟಿ ಅನ್ಯ ಧರ್ಮದ ಯುವಕನ ಹಲ್ಲೆ‌ ಮಾಡಿದ್ದ ಇಬ್ಬರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೊಸೂರು ರಸ್ತೆಯ ಡೇರಿ ವೃತ್ತದ ಬಳಿ ಶುಕ್ರವಾರ (ಸೆ.17) ರಾತ್ರಿ ನಡೆದಿದ್ದ ಘಟನೆಯ ವಿಡಿಯೊ‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪೊಲೀಸರಿಗೆಸಂತ್ರಸ್ತ ಮುಸ್ಲಿಂ ಮಹಿಳೆಯೇ ದೂರು ನೀಡಿದ್ದು, ಮಹಿಳೆಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಅಪರಾಧ ಸಂಚು (ಐಪಿಸಿ 34), ಧರ್ಮಗಳ ನಡುವೆ ದ್ವೇಷ ಬಿತ್ತುವುದು (ಐಪಿಸಿ 153–ಎ), ಮಹಿಳೆ ಮೇಲೆ ದೌರ್ಜನ್ಯ ನಡೆಸಿ ಗೌರವಕ್ಕೆ ಧಕ್ಕೆ ತಂದ (ಐಪಿಸಿ 354), ಹಲ್ಲೆ (ಐಪಿಸಿ 323) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

‘ಪ್ರಕರಣದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ. ಅವರ ಮೊಬೈಲ್ ಜಪ್ತಿ ಮಾಡಲಾಗಿದೆ. ಅವರ ಹಿನ್ನೆಲೆ ಬಗ್ಗೆ ತಿಳಿಯಲು ತನಿಖೆ ಮುಂದುವರಿಸಲಾಗಿದೆ. ತನಿಖಾ ಹಂತದಲ್ಲಿ ಮಾಹಿತಿ ಸೋರಿಕೆ ಮಾಡದಂತೆ ಹೈಕೋರ್ಟ್‌ ಆದೇಶವಿದೆ. ಹೀಗಾಗಿ, ಆರೋಪಿಗಳ ಹೆಸರು ಬಹಿರಂಗಪಡಿಸಲಾಗದು’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಹಿಂಬಾಲಿಸಿ ಅಡ್ಡಗಟ್ಟಿದ್ದರು: 'ರಿಚ್ಮಂಡ್ ವೃತ್ತದಲ್ಲಿರುವ ಒಂದೇ ಕಂಪನಿಯಲ್ಲಿ‌ ಕೆಲಸ‌ ಮಾಡುತ್ತಿದ್ದ ಯುವಕ ಹಾಗೂ ಮಹಿಳೆ, ಕೆಲಸ‌ ಮುಗಿಸಿ ರಾತ್ರಿ ಮನೆಗೆ ಹೊರಟಿದ್ದರು. ಅವರನ್ನು‌ ಹಿಂಬಾಲಿಸಿದ್ದ ಗುಂಪು, ಬೈಕ್‌ ಅಡ್ಡಗಟ್ಟಿ ಗಲಾಟೆ ಮಾಡಿತ್ತು' ಎಂದು ಪೊಲೀಸ್ ಮೂಲಗಳು ಹೇಳಿವೆ.

'ಬುರ್ಖಾ ಧರಿಸಿರುವ ನಮ್ಮ ಧರ್ಮದ ಮಹಿಳೆಯನ್ನು ಬೈಕ್‌ನಲ್ಲಿ ಏಕೆ‌ ಕರೆದೊಯ್ಯುತ್ತಿದ್ದಿಯಾ? ಎಂದು ಗುಂಪು ಕೇಳಿತ್ತು. ‘ನಾವಿಬ್ಬರು ಸಹೋದ್ಯೋಗಿಗಳು. ಮಹಿಳೆಯನ್ನು ಮನೆಗೆ ಬಿಡಲು ಹೊರಟಿದ್ದೇನೆ’ ಎಂಬುದಾಗಿ ಯುವಕ ಹೇಳಿದ್ದ. ಧ್ವನಿಗೂಡಿಸಿದ್ದ ಮಹಿಳೆ, ‘ಸಹೋದ್ಯೋಗಿ ಜೊತೆ ಹೊರಟಿದ್ದೇನೆ. ತಡೆಯಲು ನೀವ್ಯಾರು?’ ಎಂದು ಕೇಳಿದ್ದರು.

‘ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಆರೋಪಿಗಳು, ಅವರ ಎದುರೇ ಯುವಕನ ಮೇಲೆ ಹಲ್ಲೆ ಮಾಡಿದ್ದರು. ಅವಾಚ್ಯವಾಗಿ ಬೈದಿದ್ದರು. ಕುಟುಂಬದವರ‌ ಮೊಬೈಲ್ ನಂಬರ್ ಪಡೆದು ಅವರ ಜೊತೆಯೂ‌ ಕೆಟ್ಟದಾಗಿ ‌ಮಾತನಾಡಿದ್ದರು. ಮಹಿಳೆಯನ್ನು ಬೈಕ್‌ನಿಂದ‌ ಇಳಿಸಿ ಆಟೊದಲ್ಲಿ‌ ಮನೆಗೆ ಕಳುಹಿಸಿದ್ದ ಆರೋಪಿಗಳು, ಯುವಕನಿಗೆ ಜೀವ ಬೆದರಿಕೆ ಹಾಕಿ ಕಳುಹಿಸಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಉತ್ತಮ ಉದ್ಯೋಗಿ’ ಬಹುಮಾನ ಪಡೆದಿದ್ದ ಮಹಿಳೆ
‘ಕೆಲಸದಲ್ಲಿ ಚುರುಕಿದ್ದ ಮಹಿಳೆಗೆ ಉತ್ತಮ ಉದ್ಯೋಗಿ ಬಹುಮಾನ ಲಭಿಸಿತ್ತು. ಶುಕ್ರವಾರ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಂಪನಿ, ಲ್ಯಾಪ್‌ಟಾಪ್ ನೀಡಿ ಗೌರವಿಸಿತ್ತು. ಕಾರ್ಯಕ್ರಮ ಮುಗಿಯುವುದು ತಡವಾಗಿತ್ತು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಪತಿಗೆ ಕರೆ ಮಾಡಿದ್ದ ಮಹಿಳೆ, ಸಹೋದ್ಯೋಗಿ ಬೈಕ್‌ನಲ್ಲಿ ಮನೆಗೆ ಬರುವುದಾಗಿ ಹೇಳಿದ್ದರು. ಅದಕ್ಕೆ ಪತಿ ಒಪ್ಪಿದ್ದರು. ಹೀಗಾಗಿ ಮಹಿಳೆ ಬೈಕ್‌ನಲ್ಲಿ ಸಹೋದ್ಯೋಗಿ ಜೊತೆ ತೆರಳುತ್ತಿದ್ದರು. ಯುವತಿ ಬುರ್ಖಾ ಧರಿಸಿದ್ದನ್ನು ಕಂಡ ಆರೋಪಿಗಳು, ಬೈಕ್‌ನಲ್ಲಿ ಹಿಂಬಾಲಿಸಿದ್ದರು’ ಎಂದೂ ತಿಳಿಸಿವೆ.

‘ಕಾನೂನು ಕೈಗೆತ್ತಿಕೊಂಡರೆ ಬಿಡುವುದಿಲ್ಲ’
ಬೆಂಗಳೂರು ಜಾಗತಿಕ ನಗರವಾಗಿದ್ದು, ಸರ್ವ ಜನಾಂಗದ ಶಾಂತಿ ತೋಟವಾಗಿದೆ. ಅದರ ಖ್ಯಾತಿಯನ್ನು ಉಳಿಸಲು ಸರ್ಕಾರ ಬದ್ಧವಾಗಿದೆ. ಯಾರೇ ಆದರೂ ಕಾನೂನು ಕೈಗೆತ್ತಿಕೊಳ್ಳುವುದನ್ನು, ಸಹಿಸುವುದಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು 12 ಗಂಟೆಯೊಳಗೆ ಬಂಧಿಸಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT