ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಜಿಲ್ಲೆ ಶೆಟ್ಟಿಹಳ್ಳಿ ವನ್ಯಜೀವಿಧಾಮ ವ್ಯಾಪ್ತಿಗೆ ರಾಜ್ಯ ಸರ್ಕಾರ ಕತ್ತರಿ

ವ್ಯಾಪ್ತಿ 700 ಚದರ ಕಿ.ಮೀಯಿಂದ 395 ಚ.ಕಿ.ಮೀ.ಗೆ ಇಳಿಕೆ
Published 24 ಆಗಸ್ಟ್ 2023, 0:52 IST
Last Updated 24 ಆಗಸ್ಟ್ 2023, 0:52 IST
ಅಕ್ಷರ ಗಾತ್ರ

ನವದೆಹಲಿ: ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿ ವನ್ಯಜೀವಿ ಧಾಮದ ವ್ಯಾಪ್ತಿಯನ್ನು 700 ಚದರ ಕಿ.ಮೀಟರ್‌ನಿಂದ 395 ಚದರ ಕಿ.ಮೀಗೆ ಇಳಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. 

ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದರ್ ಯಾದವ್‌ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ವನ್ಯಜೀವಿ ಮಂಡಳಿಯ 73ನೇ ಸ್ಥಾಯಿ ಸಮಿತಿ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ಆಗಿದ್ದು, ಶೆಟ್ಟಿಹಳ್ಳಿ ಅಭಯಾರಣ್ಯದ ಸಮೀಪವಿರುವ ಅರಣ್ಯ ಪ್ರದೇಶಗಳಲ್ಲಿ ಹಕ್ಕುಗಳು ಮತ್ತು ಹಕ್ಕುಗಳನ್ನು ಇತ್ಯರ್ಥಗೊಳಿಸಲು ಮತ್ತು ವರದಿ ಸಲ್ಲಿಸಲು ರಾಜ್ಯ ಸರ್ಕಾರವು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ಧರಿಸಲಾಯಿತು. 

ಅಭಯಾರಣ್ಯದ ವ್ಯಾಪ್ತಿಗೆ ಪಟ್ಟಣದ ಪ್ರದೇಶಗಳು, ಹಳ್ಳಿಗಳು ಹಾಗೂ ಕೃಷಿ ಭೂಮಿಗಳನ್ನು ಸೇರಿಸಿ 1974ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಭಯಾರಣ್ಯದ ವ್ಯಾಪ್ತಿಯನ್ನು ರಿ–ನೋಟಿಫೈ ಮಾಡುವ ಕುರಿತು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 50ನೇ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರವು ಅಭಯಾರಣ್ಯದ ಗಡಿಯಲ್ಲಿ ಪರಿಷ್ಕರಣೆ ಮಾಡಿ ಕೇಂದ್ರ ಪರಿಸರ ಸಚಿವಾಲಯಕ್ಕೆ ಕರಡು ಪ್ರಸ್ತಾವನೆ ಸಲ್ಲಿಸಬೇಕು ಎಂದು ಸ್ಥಾಯಿ ಸಮಿತಿ ನಿರ್ದೇಶನ ನೀಡಿತ್ತು. 

ಕರ್ನಾಟಕ ಸರ್ಕಾರವು ಗಡಿ ಪರಿಷ್ಕರಣಾ ಸಮಿತಿ ರಚಿಸಿ ವರದಿ ಪಡೆದಿತ್ತು. 1974ರಲ್ಲಿ ಅಭಯಾರಣ್ಯದ ವ್ಯಾಪ್ತಿ ನಿರ್ಧರಿಸಿರುವುದು ಅವೈಜ್ಞಾನಿಕ. ಅರಣ್ಯೇತರ ಪ್ರದೇಶಗಳನ್ನೂ ಅಭಯಾರಣ್ಯದ ವ್ಯಾಪ್ತಿಗೆ ಸೇರಿಸಲಾಗಿತ್ತು. ಇದರಿಂದಾಗಿ, ಜನರಿಗೆ ತೊಂದರೆಯಾಗುತ್ತಿದೆ. ಗಡಿಯ ಪರಿಷ್ಕರಣೆ ಮಾಡಿದರೆ ಅಭಯಾರಣ್ಯದ ನಿರ್ವಹಣೆ ಪರಿಣಾಮಕಾರಿ ಆಗಲಿದೆ ಎಂದು ಸಮಿತಿ ವರದಿ ನೀಡಿತ್ತು. ಆ ನಂತರ ಕರ್ನಾಟಕ ಸರ್ಕಾರ ಕರಡು ಅಧಿಸೂಚನೆ ಸಲ್ಲಿಸಿತ್ತು. 

ಕರಡು ಪ್ರಸ್ತಾವನೆ ಕುರಿತು ಸ್ಥಾಯಿ ಸಮಿತಿಯ 72ನೇ ಸಭೆಯಲ್ಲಿ ಚರ್ಚಿಸಲಾಗಿತ್ತು. ಅಭಯಾರಣ್ಯದ ಪ್ರಸ್ತಾವಿತ ಗಡಿಯ ಬಗ್ಗೆ ಪರಿಶೀಲನೆಗೆ ಪಿಸಿಸಿಎಫ್‌, ಸಚಿವಾಲಯದ ಅಧಿಕಾರಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ತಜ್ಞರ ಜತೆಗೆ ಸಮಾಲೋಚನಾ ಸಭೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. 

ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮೀಸಲು ಪ್ರದೇಶಕ್ಕೆ

ಈ ವರ್ಷದ ಮೇ ಹಾಗೂ ಜೂನ್‌ ತಿಂಗಳಲ್ಲಿ ವನ್ಯಜೀವಿ ಮಂಡಳಿಯ ಅಧಿಕಾರಿಗಳು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದರು. ಪ್ರಸ್ತಾವಿತ ಆಯ್ಕೆಯಿಂದ ಸಂಪರ್ಕ ಸಮಸ್ಯೆಯೂ ಬಗೆಹರಿಯಲಿದೆ ಎಂದೂ ಅಧಿಕಾರಿಗಳು ಸಭೆಯಲ್ಲಿ ಅಭಿಪ್ರಾಯಪಟ್ಟರು. ಈ ಪ್ರದೇಶವನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮೀಸಲು (ಬಫರ್‌) ಪ್ರದೇಶದ ವ್ಯಾಪ್ತಿಗೆ ತರುವ ಪ್ರಸ್ತಾವಕ್ಕೆ ಎನ್‌ಟಿಸಿಎ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದರು. 

ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಶೆಟ್ಟಿಹಳ್ಳಿ ಅಭಯಾರಣ್ಯ ಪಶ್ಚಿಮ ಘಟ್ಟಗಳ ಪೂರ್ವ ಭಾಗದಲ್ಲಿವೆ ಮತ್ತು ಹೆಚ್ಚಿನ ಸಂಖ್ಯೆಯ ಹುಲಿಗಳು ಅಥವಾ ಯಾವುದೇ ದೊಡ್ಡ ಸಸ್ತನಿಗಳನ್ನು ದೀರ್ಘಾವಧಿಯಲ್ಲಿ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿಲ್ಲ. ಶೆಟ್ಟಿಹಳ್ಳಿ ಅಭಯಾರಣ್ಯವು ತುಂಗಾ ನದಿಯ ಉತ್ತರಕ್ಕೆ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ದಕ್ಷಿಣಕ್ಕೆ ಇದೆ.

ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನದಿಯುದ್ದಕ್ಕೂ ಸೇರಿಸಬಹುದಾದ ಯಾವುದೇ ಪ್ರದೇಶಗಳಿಲ್ಲ. ಆದರೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಸಣ್ಣ ಅರಣ್ಯ ಪ್ರದೇಶಗಳಿದ್ದು, ಅಭಯಾರಣ್ಯ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳ ನಡುವೆ ಪ್ರಮುಖ ಸಂಪರ್ಕ ಒದಗಿಸಲು ಬಫರ್ ವಲಯಕ್ಕೆ ಸೇರಿಸಬಹುದು. ಆಡಳಿತಾತ್ಮಕವಾಗಿ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಪ್ರದೇಶದ ಭಾಗವಾಗಿ ಚೋರ್ಡೇನಹಳ್ಳಿ ಮತ್ತು ಕೈತೋಟ್ಲು ಅರಣ್ಯ ಸೇರ್ಪಡೆ ಮಾಡಲು ಸಭೆಯಲ್ಲಿ ಸಹಮತ ವ್ಯಕ್ತವಾಯಿತು. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯಕ್ಕೆ ಮೀಸಲು ಅರಣ್ಯಗಳನ್ನು ಸೇರಿಸುವ ಕುರಿತು ರಾಜ್ಯ ಸರ್ಕಾರ ತಕ್ಷಣವೇ ಅಧಿಸೂಚನೆ ಹೊರಡಿಸಲಿದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT