ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ನುಗ್ಗಿ ಸಚಿವ ಮಧು ಬಂಗಾರಪ್ಪ ವಿರುದ್ಧ BJP ಯುವ ಮೋರ್ಚಾ ಕಾರ್ಯಕರ್ತರ ಘೋಷಣೆ

ಶಿವಮೊಗ್ಗ ಜಿಪಂನಲ್ಲಿ ಘಟನೆ: ಸಾವರ್ಕರ್, ಹೆಡ್ಗೇವಾರ್ ಪಠ್ಯ ಕೈಬಿಟ್ಟಿದ್ದಕ್ಕೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ವಿರೋಧ
Published 26 ಜುಲೈ 2023, 6:43 IST
Last Updated 26 ಜುಲೈ 2023, 6:43 IST
ಅಕ್ಷರ ಗಾತ್ರ

ಶಿವಮೊಗ್ಗ: ಸಾವರ್ಕರ್ ಹಾಗೂ ಹೆಡ್ಗೇವಾರ್ ಕುರಿತ ಪಾಠಗಳನ್ನು ಪಠ್ಯಪುಸ್ತಕದಿಂದ ಕೈಬಿಟ್ಟ ಕ್ರಮ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬುಧವಾರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಹಾನಿ ಕುರಿತು ಪರಿಶೀಲನೆ ನಡೆಸಲು ಇಲ್ಲಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮಧು ಬಂಗಾರಪ್ಪ ಅಧಿಕಾರಿಗಳ ಸಭೆ ಕರೆದಿದ್ದರು. ಸಭೆ ಆರಂಭವಾಗುತ್ತಿದ್ದಂತೆಯೇ ದಿಢೀರನೆ ಸಭಾಂಗಣಕ್ಕೆ ನುಗ್ಗಿದ ಯುವ ಮೋರ್ಚಾ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿದರು.

ಕಪ್ಪುಪಟ್ಟಿ ಪ್ರದರ್ಶಿಸಿದರು. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು.

ಸಚಿವರು ಪಠ್ಯ ಹರಿದು ಹಾಕಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ದೇಶದ್ರೋಹಿ ಎಂದು ನಿಂದಿಸಿದರು.

ಪೊಲೀಸ್ ಭದ್ರತೆಯ ಕಣ್ಣು ತಪ್ಪಿಸಿ ಸಭೆಗೆ ನುಗ್ಗಿ ಪ್ರತಿಭಟನೆ ನಡೆದಿದ್ದು ಸಭೆಯಲ್ಲಿ ಕೆಲಕಾಲ ಗೊಂದಲ ಮೂಡಿಸಿತು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹರಿಕೃಷ್ಣ, ಕಾರ್ಯಕರ್ತರಾದ ಜಗದೀಶ್, ದರ್ಶನ್, ಪ್ರದೀಪ್, ವಿಶ್ವನಾಥ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು. ನಂತರ ಜಿಲ್ಲಾ ಪಂಚಾಯ್ತಿ ಕಚೇರಿ ಮುಖ್ಯಗೇಟ್ ಮುಚ್ಚಲಾಯಿತು. ಪ್ರತಿಭಟನೆ ನಂತರ ಜಿಲ್ಲಾ ಪಂಚಾಯ್ತಿ ಕಚೇರಿ ಹಾಗೂ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು. ಸಭೆಯ ನಂತರ ಮಧು ಬಂಗಾರಪ್ಪ ಜಿಲ್ಲಾ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿದರು.

ಕಪ್ಪು ಪಟ್ಟಿ ಪ್ರದರ್ಶಿಸುವವರೆಲ್ಲ ಹೋರಾಟಗಾರರಲ್ಲ : ಮಧು ಬಂಗಾರಪ್ಪ

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ಅವರು (ಪ್ರತಿಭಟನಾಕಾರರು) ಮೊದಲು ಪಠ್ಯ ಓದಲಿ. ನಂತರ ಪ್ರತಿಭಟನೆ ಮಾಡಲಿ ಎಂದು ಸಲಹೆ ನೀಡಿದರು.

ಬಿಜೆಪಿಯವರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಅವರಿಗೆ ಪ್ರತಿಭಟನೆ ಮಾಡುವುದು ಬೇರೇನು ಕೆಲಸವಿಲ್ಲ

ಅವರಷ್ಟು ದಡ್ಡರನ್ನು ನಾನು ನೋಡಿಯೇ ಇಲ್ಲ. ಮೊದಲು ಅವರು ಪುಸ್ತಕ ಓದಲಿ. ಕಪ್ಪು ಪಟ್ಟಿ ಪ್ರದರ್ಶಿಸುವವರೆಲ್ಲ ಹೋರಾಟಗಾರರಲ್ಲ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT