ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬಿತ್ತನೆ ಚುರುಕು: ಸಕಾಲಕ್ಕೆ ರಸಗೊಬ್ಬರ ದೊರೆಯದೆ ಕೃಷಿಕರ ಅಳಲು

Last Updated 26 ಜುಲೈ 2022, 5:40 IST
ಅಕ್ಷರ ಗಾತ್ರ

ಬೆಂಗಳೂರು: ಮುಂಗಾರಿನಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಸಕಾಲಕ್ಕೆ ದೊರೆಯದೆ ಅನ್ನದಾತರು ಪರದಾಡುತ್ತಿದ್ದಾರೆ.

ಬಿತ್ತನೆ ಸಮಯವಾದ ಜೂನ್‌, ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸಹಜವಾಗಿಯೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚು. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ 26.76 ಲಕ್ಷ ಟನ್‌ಗಳಷ್ಟು ಬೇಡಿಕೆ ಸೃಷ್ಟಿಯಾಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿತ್ತು.

ಭತ್ತ, ರಾಗಿ, ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದೆ. ಈ ಸಮಯದಲ್ಲೇ ದಿನೇ ದಿನೇ ರಸಗೊಬ್ಬರ ಸಮಸ್ಯೆ ಹೆಚ್ಚುತ್ತಿದ್ದು, ರೈತರು ಅಂಗಡಿಗಳ ಎದುರು ಕಾದು ನಿಲ್ಲಬೇಕಾದ ಸ್ಥಿತಿ ಸೃಷ್ಟಿಯಾಗುತ್ತಿದೆ. ಹಲವೆಡೆ ಪೂರೈಕೆಯಾದ ತಕ್ಷಣವೇ ಖಾಲಿಯಾಗುತ್ತಿದೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ನಿಗದಿತ ಬೆಲೆಗಿಂತ ಹೆಚ್ಚು ಹಣ ಪಡೆದು ಮಾರಾಟ ಮಾಡುತ್ತಿದ್ದಾರೆ. ಅನಿವಾರ್ಯ ಪರಿಸ್ಥಿತಿ ಇರುವುದರಿಂದ ಹೆಚ್ಚು ಹಣ ನೀಡುವುದು ಅನಿವಾರ್ಯ. ಕೆಲವು ಜಿಲ್ಲೆಗಳಲ್ಲಿ ರಸಗೊಬ್ಬರಕ್ಕೆ ನೂಕುನುಗ್ಗಲು ಉಂಟಾಗುತ್ತಿದೆ ಎಂದು ರೈತ ಸಂಘದ ಮುಖಂಡರು ದೂರಿದ್ದಾರೆ.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಸಗೊಬ್ಬರ ಕೊರತೆಯಾಗಿದೆ.ಭತ್ತ ಮತ್ತು ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಯೂರಿಯಾಗೆ ಹಾಗೂ ರಾಗಿ, ಹತ್ತಿ, ಜೋಳ, ತಂಬಾಕು ಬೆಳೆಯುವ ಪ್ರದೇಶಗಳಲ್ಲಿ ಡಿಎಪಿಗೆ ಬೇಡಿಕೆ ಹೆಚ್ಚಾಗಿದೆ. ಸರ್ಕಾರ ರಸಗೊಬ್ಬರ ಪೂರೈಕೆಗೆ ಸರಿಯಾದ ಕ್ರಮಗಳನ್ನು ಕೈಗೊಂಡಿದ್ದರೆ ಈ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಸಾಕಷ್ಟು ಪ್ರಮಾಣದಲ್ಲಿ ರಸ ಗೊಬ್ಬರ ಪೂರೈಕೆಯಾಗುತ್ತಿಲ್ಲ.200 ಚೀಲ ರಸಗೊಬ್ಬರಕ್ಕೆ 300ಕ್ಕೂ ಹೆಚ್ಚು ರೈತರು ಕಾಯುತ್ತಿರುತ್ತಾರೆ. ಕೆಲವರಿಗೆ ಮಾತ್ರ ದೊರೆಯುತ್ತಿದೆ. ಉಳಿದವರು ಬರಿಗೈಯಲ್ಲಿ ಹೋಗಬೇಕಾಗುತ್ತದೆ. ಪ್ರತಿ ವರ್ಷವೂ ಇದೇ ಸಮಸ್ಯೆಯಾಗುತ್ತಿದೆ’ ಎಂದು ರೈತ ಸಂಘದ ದೊಡ್ಡಬಳ್ಳಾ ಪುರ ತಾಲ್ಲೂಕು ಘಟಕದ ಅಧ್ಯಕ್ಷ ಹನುಮೇಗೌಡ ದೂರಿದರು.

15 ಲಕ್ಷ ಬಾಟಲ್‌ ನ್ಯಾನೊಯೂರಿಯಾ ಮಾರಾಟ
ರಾಜ್ಯದಲ್ಲಿ ಏಪ್ರಿಲ್‌ನಿಂದ ಇಲ್ಲಿಯವರೆಗೆ 15 ಲಕ್ಷ ಬಾಟಲ್‌ ನ್ಯಾನೊ ಯೂರಿಯಾ ಮಾರಾಟ ಮಾಡಲಾಗಿದೆ. ‘ನ್ಯಾನೊ ಯೂರಿಯಾಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.500 ಮಿಲಿ ಲೀಟರ್‌ ಬಾಟಲ್‌ ನ್ಯಾನೊ ಯೂರಿಯಾ 45 ಕೆ.ಜಿ. ತೂಕದ ಒಂದು ಚೀಲ ಯೂರಿಯಾಗೆ ಸಮನಾಗಿದೆ’ ಎಂದು ಇಫ್ಕೊ ಮಾರುಕಟ್ಟೆ ವ್ಯವಸ್ಥಾಪಕ ಡಾ.ಸಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.

‘ಸಂಗ್ರಹ ಇದೆ, ರೈತರು ಆತಂಕಗೊಳ್ಳುವ ಅಗತ್ಯವಿಲ್ಲ’
‘ಎಲ್ಲೆಡೆ ಮಳೆಯಾಗಿರುವುದರಿಂದ ಸಹಜವಾಗಿಯೇ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ, ರೈತರು ಆತಂಕಪಡುವ ಅಗತ್ಯವಿಲ್ಲ. ಸಾಕಷ್ಟು ಸಂಗ್ರಹ ಲಭ್ಯವಿದೆ. ರಾಜ್ಯಕ್ಕೆ ರಸಗೊಬ್ಬರ ನಿಯಮಿತವಾಗಿ ಪೂರೈಕೆಯಾಗುತ್ತಿದೆ’ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ ಅವರುತಿಳಿಸಿದರು.

‘ರಾಜ್ಯದಲ್ಲಿನ ಒಟ್ಟು 83 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಇದುವರೆಗೆಶೇ 68ರಷ್ಟು ಬಿತ್ತನೆಯಾಗಿದೆ. ಇನ್ನೂ ಆಗಸ್ಟ್‌ 15ರವರೆಗೆ ಕಾಲಾವಕಾಶ ಇದೆ. ರಸಗೊಬ್ಬರವನ್ನು ಸಕಾಲಕ್ಕೆ ರೈತರಿಗೆ ತಲುಪಿಸಲು ಯಾವುದೇ ರೀತಿಯ ತೊಡಕುಗಳಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ಕೊರತೆಯಾಗುವ ಆತಂಕದಿಂದ ರಸಗೊಬ್ಬರ ಸಂಗ್ರಹಿಸಿಟ್ಟು ಕೊಳ್ಳುವ ಅಗತ್ಯವೇ ಇಲ್ಲ. ಜತೆಗೆ, ನ್ಯಾನೊ ಯೂರಿಯಾ ಬಳಸುವಂತೆ ರೈತರಿಗೆ ಸಲಹೆ ನೀಡಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT