ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕಜೀವಿಗಳತ್ತಲೂ ಇರಲಿ ಕಾಳಜಿ

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಬೇಕಿದೆ ಕಾಯಕಲ್ಪ | ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಕೊರತೆ
Last Updated 26 ಡಿಸೆಂಬರ್ 2022, 23:15 IST
ಅಕ್ಷರ ಗಾತ್ರ

ಮಂಗಳೂರು: ಉಳಿದುಕೊಳ್ಳುವುದಕ್ಕೆ ಸುರಕ್ಷಿತ ನೆಲೆ ಇಲ್ಲ. ಹಸಿದ ಹೊಟ್ಟೆಗೆ ಆಹಾರ ಸಿಗುವ ಖಾತರಿ ಇಲ್ಲ. ಯಾರಾದರೂ ಹೊಡೆಯುತ್ತಾರೇನೋ ಎಂಬ ಭೀತಿ ಒಂದೆಡೆಯಾದರೆ, ರಸ್ತೆಯಲ್ಲಿ ಶರವೇಗದಲ್ಲಿ ಸಾಗಿಬರುವ ವಾಹನಗಳ ಚಕ್ರಗಳಡಿ ಸಿಲುಕುವ ಆತಂಕ ಇನ್ನೊಂದೆಡೆ....

ಇಷ್ಟೆಲ್ಲ ಅಭದ್ರತೆ–ಕಳವಳಗಳನ್ನು ಎದುರಿಸುವ ಬೀದಿ ಪ್ರಾಣಿಗಳು ನಮ್ಮ ನಿಮ್ಮಂತೆಯೇ ಈ ಭೂಮಿಯಲ್ಲಿ ಬದುಕಿ ಬಾಳುವ ಹಕ್ಕನ್ನು ಹೊಂದಿವೆ. ಆದರೆ, ಅವುಗಳತ್ತ ಪ್ರೀತಿ ತೋರಿಸುವ ಬದಲು ದೂರ ತಳ್ಳುವವರೇ ಜಾಸ್ತಿ. ‘ಮನುಷ್ಯರು’ ಎನಿಸಿಕೊಂಡವರು ಕೊಂಚವೇ ಕೊಂಚ ದಯೆ ತೋರಿದರೂ ಅವುಗಳೂ ನೆಮ್ಮದಿಯ ಬದಕು ಕಟ್ಟಿಕೊಳ್ಳುವುದು ಸಾಧ್ಯವಾಗಲಿದೆ.

ತಮಗೆ ಸಿಗುವ ಪ್ರೀತಿಗಿಂತ ಹತ್ತಾರು ಪಟ್ಟು ಅಧಿಕ ಪ್ರೀತಿಯನ್ನು ಈ ಮೂಕ ಜೀವಿಗಳು ಮರಳಿಸುತ್ತವೆ. ಕಾಳಜಿದಿಂದ ನೋಡಿಕೊಂಡಿದ್ದೇ ಆದರೆ, ಅವುಗಳು ಕೂಡಾ ಬಾಲ ಅಲ್ಲಾಡಿಸುತ್ತಾ, ಕುಣಿಯುತ್ತಾ ಖುಷಿ ಹಂಚಿಕೊಳ್ಳುತ್ತವೆ. ತಮ್ಮತ್ತ ಕರುಣೆದೋರಿದವರ ಮನಸ್ಸಿನಲ್ಲೂ ಉಲ್ಲಾಸ ಮೂಡಿಸುತ್ತವೆ.

ಬೀದಿ ಪಾಲಾದನಾಯಿ, ಬೆಕ್ಕುಗಳಂತಹ ಮೂಕಜೀವಿಗಳಿಗೂ ನೆಮ್ಮದಿಯ ಬದುಕು ಕಲ್ಪಿಸಬೇಕಾದರೆ ಅವುಗಳ ಸಂತಾನ ವೃದ್ಧಿಯನ್ನು ನಿಯಂತ್ರಿಸುವುದು ಬಲು ಮುಖ್ಯ. ಆದರೆ, ಈ ಕಾರ್ಯವನ್ನು ಅತ್ಯಂತ ವೈಜ್ಞಾನಿಕವಾಗಿ ಹಾಗೂ ಅವುಗಳಿಗೆ ಹಿಂಸೆ ಆಗದ ರೀತಿಯಲ್ಲಿ ನಡೆಸುವುದು ಸವಾಲಿನ ಕೆಲಸ. ನಾಗರಿಕರು ಬೀದಿನಾಯಿಗಳ ಬಗ್ಗೆಯೂ ಒಂದಿನಿತು ಆಸ್ಥೆ ತೋರಿಸಿದರೆ ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಬಹುದು ಎನ್ನುತ್ತಾರೆ ಪ್ರಾಣಿಪ್ರಿಯರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಿಮಲ್ ಕೇರ್‌ ಟ್ರಸ್ಟ್‌ ಬೀದಿನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಬೀದಿನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ ನಾಲ್ಕೈದು ಗ್ರಾಮ ಪಂಚಾಯಿತಿಗಳಿಗೆ ಒಂದಾದರೂ ಪ್ರಾಣಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸುವ ಕೇಂದ್ರಗಳನ್ನು ಆರಂಭಿಸಬೇಕು ಎಂಬುದು ಅವರ ಬೇಡಿಕೆ.

‘ಬೀದಿ ನಾಯಿಗಳಿಗೆ ಅಥವಾ ಬೆಕ್ಕುಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆಗೆ ಸ್ಥಳೀಯಾಡಳಿತ ಸಂಸ್ಥೆಗಳು ವ್ಯವಸ್ಥೆ ಕಲ್ಪಿಸುವುದು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕಡ್ಡಾಯ. ಆದರೆ, ಬಹುತೇಕ ಗ್ರಾಮ ಪಂಚಾಯಿತಿಗಳು ಈ ಸಲುವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಡುತ್ತಿಲ್ಲ. ಹಾಗಾಗಿ ಈ ಕಾರ್ಯಕ್ರಮವು ಗ್ರಾಮೀಣ ಪ್ರದೇಶಗಳಲ್ಲಿ ನಿಯಮಿತವಾಗಿ ಜಾರಿಯಾಗುತ್ತಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಣಿ ಹಿಂಸೆ ತಡೆ ಸೊಸೈಟಿಯ (ಎಸ್‌ಪಿಸಿಎ) ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ನಾಯಿ ಸಾಕಲು ಪರವಾನಗಿ ಕಡ್ಡಾಯವಾಗಬೇಕು. ಇಲ್ಲದಿದ್ದರೆ ಮನೆಯಲ್ಲಿ ನಾಯಿ ಅಥವಾ ಬೆಕ್ಕು ಮರಿ ಹಾಕಿದರೆ ಅವುಗಳನ್ನು ಜನರು ಬೀದಿಗೆ ಬಿಡುತ್ತಾರೆ. ಇವುಗಳ ಮೇಲೆ ನಿಗಾ ಇಡುವುದು ಸಾಧ್ಯವಾಗುವುದಿಲ್ಲ. ನೀವು ದಶಕಗಳ ಕಾಲ ಬೀದಿ ಪ್ರಾಣಿಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸಿದರೂ ಅವುಗಳ ಸಂಖ್ಯೆ ನಿಯಂತ್ರಣಕ್ಕೆ ಬರುವುದಿಲ್ಲ’ ಎಂದು ಸಲಹೆ ನೀಡುತ್ತಾರೆ ಪ್ರಾಣಿಗಳ ರಕ್ಷಣಾ ಕಾರ್ಯದಲ್ಲಿ ಹಾಗೂ ಈ ಕುರಿತ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಕಟೀಲ್‌ ದಿನೇಶ್‌ ಪೈ.

ಎಸ್‌ಪಿಸಿಎ ರಚನೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌.ಅಧ್ಯಕ್ಷತೆಯಲ್ಲಿ ಒಟ್ಟು 19 ಮಂದಿ ಸದಸ್ಯರನ್ನು ಒಳಗೊಂಡ ಎಸ್‌ಪಿಸಿಎ ರಚನೆ ಆಗಿದೆ. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ (ಆಡಳಿತ) ಅರುಣ್‌ ಕುಮಾರ್ ಎನ್‌. ಶೆಟ್ಟಿ ಅವರು ಇದರ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಕಟೀಲ್‌ ದಿನೇಶ್‌ ಪೈ, ಶಶಿಧರ ಶೆಟ್ಟಿ, ಸುಮನಾ ಆರ್‌.ನಾಯಕ್‌, ಶಿವಾನಂದ ಆರ್‌.ಮೆಂಡನ್‌, ಕುರ್ನಾಡು ಚಾರ್ಲ್ಸ್‌ ಇಮ್ಯಾನ್ಯುವೆಲ್‌, ಡಾ.ಯಶಸ್ವಿ ನಾರಾವಿ, ಸುಬ್ರಹ್ಮಣ್ಯ ಕುಮಾರ್‌ ಬೆಳ್ತಂಗಡಿ, ವಿದ್ಯಾ ರಾವ್‌ ಇದರ ಸದಸ್ಯರು. ಅಲ್ಲದೇ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಕೂಡಾ ಇದರ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಪ್ರಾಣಿಗಳ ಸಂರಕ್ಷಣೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಲು ಸಮಿತಿಯು ವರ್ಷದಲ್ಲಿ ಎರಡು ಸಲ ಕಡ್ಡಾಯವಾಗಿ ಸಭೆ ನಡೆಸುತ್ತದೆ. ಅಲ್ಲದೇ ಪೂರಕ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಆಗಾಗ ಸಭೆ ಸೇರುತ್ತಿದೆ. ಸಮಿತಿಯಕೊನೇಯ ಸಭೆ ಡಿ. 3ರಂದು ನಡೆದಿದೆ.

ಪುನರ್ವಸತಿ ಕೇಂದ್ರ; ಅನುದಾನ ಕೊರತೆ

ಬೀದಿಪಾಲಾದ ಹಾಗೂ ಗಾಯಗೊಂಡದ ನಾಯಿ ಬೆಕ್ಕು, ಜಾನುವಾರು ಹಾಗೂ ವನ್ಯಜೀವಿಗಳ ಚಿಕಿತ್ಸೆ ನೀಡಲು ಸುಸಜ್ಜಿತ ಆಸ್ಪತ್ರೆ ಹಾಗೂ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲು ಎಸ್‌ಪಿಸಿಎ ಡಿಸೆಂಬರ್‌ನಲ್ಲಿ ನಡೆಸಿದ ಸಭೆಯಲ್ಲಿ ತೀರ್ಮಾನಿಸಿದೆ. ಈ ಸಲುವಾಗಿ ಜಿಲ್ಲಾಡಳಿತವು ಬೊಂಡಂತಿಲ ಗ್ರಾಮದಲ್ಲಿ 12 ಎಕರೆ ಜಾಗವನ್ನು ಮಂಜೂರು ಮಾಡಿದೆ. ಆದರೆ, ಆಸ್ಪತ್ರೆ ಹಾಗೂ ಪುನರ್ವಸತಿ ಕೇಂದ್ರ ಸ್ಥಾಪನೆ ಅನುದಾನ ಹೊಂದಿಸುವುದು ಸೊಸೈಟಿಗೆ ತಲೆ ನೋವಾಗಿ ಪರಿಣಮಿಸಿದೆ.

‘ಜಾನುವಾರುಗಳ ಚಿಕಿತ್ಸೆಗೆ ಆಸ್ಪತ್ರೆ ಹಾಗೂ ಪುನರ್ವಸತಿ ಕೇಂದ್ರ ಸ್ಥಾಪನಕ್ಕೆ ಯೋಜನೆ ರೂಪಿಸಿದ್ದೇವೆ. ಜಿಲ್ಲಾಡಳಿತದಿಂದ ಈ ಉದ್ದೇಶಕ್ಕೆ ಮಂಜೂರಾದ ಜಾಗದಲ್ಲಿಸದ್ಯಕ್ಕೆ 7 ಅಡಿ ಎತ್ತರದ ಆವರಣ ಗೋಡೆ ರಚಿಸಲಿದ್ದೇವೆ. ಇದಕ್ಕಾಗಿ ₹1.18 ಕೊಟಿ ಅಂದಾಜು ವೆಚ್ಚದ ಯೋಜನೆ ರೂಪಿಸಿದ್ದೇವೆ.ಅಲ್ಲಿ ಕೊಳವೆ ಬಾವಿ ಕೊರೆಯಿಸಲು ಸಿದ್ಧತೆ ನಡೆದಿದೆ. ಈ ಜಾಗದಲ್ಲಿ ಸತ್ತ ಪ್ರಾಣಿಗಳಿಗಾಗಿ ಚಿತಾಗಾರ ನಿರ್ಮಿಸುವ ಉದ್ದೇಶವೂ ಇದೆ. ವಾಣಿಜ್ಯ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ನೆರವು ಪಡೆದು ಆಸ್ಪತ್ರೆ ಮತ್ತು ಪುನರ್ವಸತಿ ಕೇಂದ್ರವನ್ನು ಅಭಿವೃದ್ಧಿಪಡಿಸುವ ಚಿಂತನೆ ಇದೆ’ ಎಂದು ಎಸ್‌ಪಿಸಿಎ ಸದಸ್ಯ ಕಾರ್ಯದರ್ಶಿ ಡಾ. ಅರುಣ್‌ ಕುಮಾರ್‌ ಶೆಟ್ಟಿ ತಿಳಿಸಿದರು.

‘ಎಲ್ಲಾ ನಾಯಿಗೂ ಎಬಿಸಿ ಮಾಡಿಸಿ’
ಬೀದಿ ನಾಯಿಗಳು ನೋವುಣ್ಣುವುದು ತಪ್ಪಬೇಕಾದರೆ ಅವುಗಳ ಸಂಖ್ಯೆಯನ್ನು ಹತೋಟಿಗೆ ತರಬೇಕು. ಇದಕ್ಕೆ ಸ್ಥಳೀಯಾಡಳಿತ ಸಂಸ್ಥೆ ಬೀದಿ ಬದಿಯ ಪ್ರಾಣಿಗಳನ್ನು ಹುಡುಕಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರೆ ಸಾಲದು. ಮನೆಯಲ್ಲಿ ಬೆಕ್ಕು, ನಾಯಿಗಳನ್ನು ಸಾಕುವವರೂ ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ, ಮನೆಯ ಬೆಕ್ಕು ಅಥವಾ ನಾಯಿ ಮರಿಹಾಕಿದಾಗ ಅದನ್ನು ಸಾಕಲಾಗದೇ ಅವರು ಆ ಮೂಕ ಜೀವಿಗಳನ್ನು ಬೀದಿಪಾಲು ಮಾಡುತ್ತಾರೆ

ರಜನಿ ಶೆಟ್ಟಿ, ಬೀದಿನಾಯಿಗಳ ಕಾಳಜಿ ವಹಿಸುವ ಮಹಿಳೆ

‘ಇನ್ನಷ್ಟು ಜಾಗೃತಿ ಅಗತ್ಯ’

ಬೀದಿಪಾಲಾದ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಇನ್ನಷ್ಟು ಜನಜಾಗೃತಿ ನಡೆಸಬೇಕಾದ ಅಗತ್ಯ ಇದೆ. ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಪಶುವೈದ್ಯರ ಕೊರತೆಯೂ ತೀವ್ರವಾಗಿದೆ. ಈ ಸಮಸ್ಯೆಗಳನ್ನು ನೀಗಿಸುವ ಕಾರ್ಯವೂ ಆಗಬೇಕಿದೆ.

ಶಶಿಧರ ಶೆಟ್ಟಿ, ಎಸ್‌ಪಿಸಿಎ ಉಪಾಧ್ಯಕ್ಷ

1,440 ನಾಯಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ

‘ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಿಲ್‌ ಕೇರ್‌ ಟ್ರಸ್ಟ್‌ನವರಿಗೆ ಬೀದಿ ಬದಿಯ ಪ್ರಾಣಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮದ ಜವಾಬ್ದಾರಿ ವಹಿಸಲಾಗಿದೆ. ಅದರ ಜೊತೆಗೆ ಪ್ರಾಣಿ ಸಾಕಲು ಅನುಮತಿ ನೀಡುವ ವ್ಯವಸ್ಥೆಯನ್ನೂ ಜಾರಿಗೊಳಿಸಿದ್ದೇವೆ. ಆದರೆ ಸದ್ಯಕ್ಕೆ ಇದನ್ನು ಕಡ್ಡಾಯ ಮಾಡಿಲ್ಲ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅನಿಮಲ್‌ ಕೇರ್‌ ಟ್ರಸ್ಟ್‌ ವತಿಯಿಂದ 2021–22ನೇ ಸಾಲಿನಲ್ಲಿ 1,440 ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಗಾಯಗೊಂಡ ಹಾಗೂ ಬೀದಿಪಾಲಾದ 1960ಕ್ಕೂ ಹೆಚ್ಚು ಪ್ರಾಣಿಗಳ ಸಂರಕ್ಷಣೆ ಮಾಡಲಾಗಿದೆ’ ಎಂದು ಅನಿಮಲ್‌ ಕೇರ್‌ ಟ್ರಸ್ಟ್‌ನ ಮೋನಾ ಪಟೇಲ್‌ ಮಾಹಿತಿ ನೀಡಿದರು.

‘ನಗರದಲ್ಲಿ ಬೀದಿಪಾಲಾಗುವ ಪ್ರಾಣಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯನ್ನು ನಮ್ಮ ಸಂಸ್ಥೆ 22 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಗ್ರಾಮೀಣ ಪ್ರದೇಶಗಳಿಂದಲೂ ಈ ಬಗ್ಗೆ ಬೇಡಿಕೆ ಬರುತ್ತಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯದ ಕೊರತೆಯಿಂದ ಅದನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಅನುದಾನ ಮೀಸಲಿಡಲು ಸೂಚನೆ’

‘ಬೀದಿನಾಯಿಗಳ ಸಂಖ್ಯೆ ಹೆಚ್ಚು ಇರುವ ಕಡೆ ಪ್ರತಿ ಗ್ರಾಮ ಪಂಚಾಯಿತಿಯೂ ಅವುಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಸಲುವಾಗಿಯೇ ವರ್ಷಕ್ಕೆ ₹60 ಸಾವಿರದಿಂದ ₹70 ಸಾವಿರ ವ್ಯಯಿಸಬೇಕಾಗುತ್ತಿದೆ. ಇದಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿಗಳು ಸ್ವಂತ ಸಂಪನ್ಮೂಲವನ್ನು ಇದಕ್ಕಾಗಿ ಬಳಸಬೇಕಾಗುತ್ತದೆ. ಮುಂದಿನ ಸಾಲಿನಿಂದ ಗ್ರಾಮ ಪಂಚಾಯಿತಿಯ ಬಜೆಟ್‌ ರೂಪಿಸುವಾಗಲೇ ಈ ಕಾರ್ಯಕ್ರಮಕ್ಕೂ ಅನುದಾನ ಕಾಯ್ದಿರಿಸುವಂತೆ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT