ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಹಾಗೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ, ಜೆಡಿಎಸ್ ನಡೆಸಿರುವ ಷಡ್ಯಂತ್ರ ಖಂಡಿಸಿ ಆಗಸ್ಟ್ 29 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ರಾಜ್ಯ ಸಂಚಾಲಕ ಡಿ.ಜಿ.ಸಾಗರ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬಾಹಿರವಾಗಿ ನಡೆದುಕೊಂಡಿರುವ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿ ಅವರಿಗೆ ಅಂದು ಮನವಿ ಮಾಡಲಾಗುವುದು ಎಂದರು.
ಬಿಜೆಪಿ, ಜೆಡಿಎಸ್ ಮುಖಂಡರು ಸುಳ್ಳು ಆರೋಪಗಳ ಮೂಲಕ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡುವ ಹುನ್ನಾರ ನಡೆಸಿರುವುದು ಖಂಡನೀಯ ಎಂದರು.
ಮುಡಾ ಪ್ರಕರಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನರು ಗೊಂದಲಕ್ಕೆ ಒಳಗಾಗುವಂತೆ ಮಾಡಿದ್ದಾರೆ. ಮುಡಾದಲ್ಲಿ ಸಿದ್ದರಾಮಯ್ಯ ಹಸ್ತಕ್ಷೇಪ ಇಲ್ಲದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದರು.
ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಚಾರ ಮಾಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಖಂಡನೀಯ. ರಾಜ್ಯಪಾಲರು ಸಂವಿಧಾನಿಕ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸದೇ ಬಿಜೆಪಿ, ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದರು.
ಸರ್ಕಾರಕ್ಕೆ ಗಂಡಾಂತರ ತರಲು ರಾಜ್ಯಪಾಲರು ಮುಂದಾಗಿರುವುದು ವಿಷಾದನೀಯ. ರಾಜ್ಯಪಾಲರು ರಾಜಕಾರಣಿಯಾಗಿದ್ದಾರೆ. ಸಂವಿಧಾನದ ಪ್ರಕಾರ ಆಡಳಿತ ನಡೆಸದ ರಾಜ್ಯಪಾಲರನ್ನು ತಕ್ಷಣವೇ ರಾಷ್ಟ್ರಪತಿ ಅವರು ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಎಂಬವರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವಿರುದ್ದ ಅರ್ಜಿ ಸಲ್ಲಿಸಿದ ತಕ್ಷಣ ತನಿಖೆಗೆ ಏಕಾಏಕಿ, ತರಾತುರಿಯಲ್ಲಿ ಅವಕಾಶ ನೀಡಿದ್ದಾರೆ. ಆದರೆ, ಮಾಜಿ ಸಚಿವರಾದ ನಿರಾಣಿ, ಜೊಲ್ಲೆ, ಕುಮಾರಸ್ವಾಮಿ ವಿರುದ್ಧದ ಪ್ರಕರಣಗಳಲ್ಲಿ ತನಿಖೆ ನಡೆದು ಕ್ರಮಕ್ಕೆ ಅನುಮತಿ ಕೋರಿದರೂ ರಾಜ್ಯಪಾಲರು ಅವಕಾಶ ನೀಡದೇ ಬಾಕಿ ಉಳಿಸಿಕೊಂಡಿದ್ದಾರೆ.
ಮುಡಾದಲ್ಲಿ ಹಗರಣ ನಡೆದಿರುವ ಕುರಿತು ತನಿಖೆಗೆ ಈಗಾಗಲೇ ಸಮಿತಿ ರಚನೆಯಾಗಿದೆ. ಇಷ್ಟಾದರೂ ರಾಜ್ಯಪಾಲರು ಪ್ರಾಶಿಕ್ಯೂಷನ್‌ಗೆ ಅವಕಾಶ ನೀಡಿರುವುದು ಖಂಡನೀಯ ಎಂದರು.
ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಹಾಗೂ ಎಲ್ಲ ಸಮಾಜದ ಪರ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರ ನಡೆದಿರುವುದು ಖಂಡನೀಯ ಎಂದರು.
ಗ್ಯಾರಂಟಿ ಯೋಜನೆಗಳ ಮೂಲಕ ಬಡ, ಮಧ್ಯಮ ವರ್ಗಗಳ ಸದೃಢತೆಗೆ ಶ್ರಮಿಸುತ್ತಿರುವ, ಎಸ್‌ಸಿಪಿ, ಟಿಎಸ್‌ಪಿ ಕಾನೂನು ಜಾರಿಗೆ ತಂದಿರುವ ಮೂಲಕ ಹಾಗೂ ಎಸ್‌ಸಿ, ಎಸ್‌ಟಿ, ಹಿಂದುಳಿದವರಿಗೆ ಸರ್ಕಾರದ ವಿವಿಧ ಕಾಮಗಾರಿಗಳ ಗುತ್ತಿಗೆಯಲ್ಲಿ ದೇಶದಲ್ಲಿ ಮೀಸಲಾತಿ ಜಾರಿಗೆ ತಂದಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ದಲಿತ ವಿರೋಧಿ ಎನ್ನುವುದು ಖಂಡನೀಯ.
ಕೆಲವರ ಚಿತಾವಣೆಯಿಂದ ಸಿದ್ದರಾಮಯ್ಯ ವಿರುದ್ಧ ಆಕ್ಷೇಪ, ದೂರುಗಳು ಬಂದಿವೆ. ಆದರೆ, ಅವರು ಸಮರ್ಥ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಡಿಎಸ್‌ಎಸ್ ಪ್ರಮುಖರಾದ ಸಿದ್ದು ರಾಯಣ್ಣವರ, ರಮೇಶ ಧರಣಾಕರ, ಎಸ್.ಬಿ.ಸುಳ್ಳದ, ವೈ.ಸಿ.ಮಯೂರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.