ತಮ್ಮ ಮನೆಗೆ ಬೆಳಿಗ್ಗೆ 9.30ಕ್ಕೆ ಬಂದ ಸಿದ್ದರಾಮಯ್ಯ ಅವರನ್ನು ಡಿ.ಕೆ. ಶಿವಕುಮಾರ್ ಆತ್ಮೀಯವಾಗಿ ಬರಮಾಡಿಕೊಂಡರು. ಉಪಾಹಾರದ ಮೆನುವಿನಲ್ಲಿ ಇಡ್ಲಿ ಜೊತೆ ನಾಟಿ ಕೋಳಿ ಸಾರು ವ್ಯವಸ್ಥೆ ಮಾಡಲಾಗಿತ್ತು. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಅವರು ಮೈಸೂರು ಶೈಲಿಯ ಉಪಾಹಾರ ಸಿದ್ಧಪಡಿಸಿದ್ದರು. ‘ಶಿವಕುಮಾರ್ ನನ್ನನ್ನು ಉಪಾಹಾರಕ್ಕೆ ಕರೆದಿದ್ದರು. ನಾನು ಮಾಂಸಹಾರಿ ಇವರು ಸಸ್ಯಹಾರಿ. ನಾನು ಅದಕ್ಕೆ ನನ್ನ ಮನೆಯಲ್ಲಿ ವೆಜ್ ಮಾಡಿಸಿದ್ದೆ. ಇಲ್ಲಿ ಸಿಗುವ ಕೋಳಿ ಚೆನ್ನಾಗಿರುವುದಿಲ್ಲ ಎಂಬ ಕಾರಣಕ್ಕೆ ಹಳ್ಳಿಯಿಂದ ಕೋಳಿ ತರಿಸುವಂತೆ ಶಿವಕುಮಾರ್ ಅವರಿಗೆ ನಾನು ಹೇಳಿದ್ದೆ’ ಎಂದು ಸಿದ್ದರಾಮಯ್ಯ ನಕ್ಕರು. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆಯಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮತ್ತು ಶಾಸಕ ಕುಣಿಗಲ್ ರಂಗನಾಥ್ ಕೂಡಾ ಉಪಾಹಾರ ಸೇವಿಸಿದರು. ಮುಖ್ಯಮಂತ್ರಿ ತಮ್ಮ ಮನೆಗೆ ಭೇಟಿ ನೀಡಿದ ವೇಳೆ ಡಿ.ಕೆ. ಸುರೇಶ್ ಅವರು ಮುಖ್ಯಮಂತ್ರಿಯ ಕಾಲು ಮುಟ್ಟಿ ನಮಸ್ಕರಿಸಿದರು. ಶಿವಕುಮಾರ್ ಅವರು ಶಾಲು ಹೊದಿಸಿ ಸನ್ಮಾನ ಮಾಡಿದರು.