ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ರಫ್ತು ಹೆಚ್ಚಳದ ಗುರಿ: ಚಲುವರಾಯಸ್ವಾಮಿ

Published 2 ಜನವರಿ 2024, 22:54 IST
Last Updated 2 ಜನವರಿ 2024, 22:54 IST
ಅಕ್ಷರ ಗಾತ್ರ

ಬೆಂಗಳೂರು: ‘ವರ್ಷದೊಳಗೆ ಸಿರಿಧಾನ್ಯಗಳ ರಫ್ತು ಪ್ರಮಾಣವನ್ನು ಈಗಿರುವುದಕ್ಕಿಂತ ದುಪ್ಪಟ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಜ.5 ರಿಂದ 7ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಕೃಷಿ ಇಲಾಖೆ ಆಯೋಜಿಸಿದ್ದ ‘ಸಿರಿಧಾನ್ಯ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆ ಹಾಗೂ ರಪ್ತುದಾರರ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಿಂದ ಪ್ರತಿ ವರ್ಷ ₹36 ಕೋಟಿ ಮೌಲ್ಯದ (7,764 ಟನ್‌ನಷ್ಟು) ಸಿರಿಧಾನ್ಯ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳು ರಫ್ತಾಗುತ್ತಿವೆ. ಸಿರಿಧಾನ್ಯ ಉತ್ಪಾದನೆ ಮತ್ತು ರಫ್ತು ಪ್ರಮಾಣದಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ತರುವುದು ನಮ್ಮ ಗುರಿಯಾಗಿದೆ’ ಎಂದರು.

‘ರಾಜ್ಯದ ಸಿರಿಧಾನ್ಯಗಳು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳು ಅಮೆರಿಕ, ಆಸ್ಟ್ರೇಲಿಯಾ, ಯುಎಇ, ಕೆನಡಾ, ಕತಾರ್, ಥಾಯ್ಲೆಂಡ್, ಸಿಂಗಪುರಕ್ಕೆ ಪ್ರಮುಖವಾಗಿ ರಫ್ತಾಗುತ್ತಿವೆ. ಸಿರಿಧಾನ್ಯಗಳನ್ನು ರಫ್ತು ಮಾಡಲು ಮುಂದಾಗುವವರಿಗೆ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ (ಕೆಪೆಕ್‌)ದಿಂದ ನೆರವು ನೀಡಲಾಗುವುದು. ರಫ್ತು ಪ್ರಕ್ರಿಯೆಯ ನಿಯಮ–ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳ ಆಯೋಜನೆ ಮೂಲಕ ಸಿರಿಧಾನ್ಯಗಳ ರಫ್ತು ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನ ವಿಭಾಗದ ವಿಶೇಷ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ನಿರ್ದೇಶಕ ಜಿ.ಟಿ.ಪುತ್ರ ಭಾಗವಹಿಸಿದ್ದರು.

ಜ.5 ರಿಂದ 7ರವರೆಗೆ ಸಾವಯವ ಮತ್ತು ಸಿರಿಧಾನ್ಯ ಮೇಳ

ಬೆಂಗಳೂರು: ಸಾವಯವ ಮತ್ತು ಸಿರಿಧಾನ್ಯಗಳ ಉತ್ಪಾದನೆ ಮಾರುಕಟ್ಟೆ ವಿಸ್ತರಿಸುವ ಹಾಗೂ ರಫ್ತು ಪ್ರಮಾಣ ಹೆಚ್ಚಿಸುವ ಉದ್ದೇಶದೊಂದಿಗೆ ಜ. 5 ರಿಂದ 7ರವರೆಗೆ ನಗರದ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಕೃಷಿ ಸಚಿವ ಎನ್‌ ಚಲುವರಾಯ ಸ್ವಾಮಿ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೇಳದಲ್ಲಿ ವಸ್ತು ಪ್ರದರ್ಶನ ಉತ್ಪಾದಕರು – ಮಾರಾಟಗಾರರ ಸಭೆ ರೈತರಿಗೆ ಸಿರಿಧಾನ್ಯ ಕೃಷಿ ಮೌಲ್ಯವರ್ಧನೆ ಮಾರುಕಟ್ಟೆ ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ’ ಎಂದು ವಿವರಿಸಿದರು.‌ ‘ವಸ್ತು ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿರುತ್ತವೆ. ಸಾವಯವ ಮತ್ತು ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಸಂಸ್ಥೆಗಳು ಮಾರುಕಟ್ಟೆದಾರರು ರಫ್ತುದಾರರು ರೈತ ಗುಂಪುಗಳು ಎಫ್‌ಪಿಒ(ರೈತ ಉತ್ಪಾದಕ ಸಂಸ್ಥೆಗಳು) ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಭಾಗವಹಿಸುತ್ತಿವೆ. ನಮ್ಮ ರಾಜ್ಯದ ಜೊತೆಗೆ ಉತ್ತರ ಪ್ರದೇಶ ಪಂಜಾಬ್‌ ಆಂಧ್ರಪ್ರದೇಶ ಮಹಾರಾಷ್ಟ್ರ ಒಡಿಶಾ ತಮಿಳುನಾಡು ಮತ್ತು ಮೇಘಾಲಯದ ರಾಜ್ಯಗಳು ಹಾಗೂ ಯುಎಇ ಜರ್ಮನ್ ದೇಶಗಳ ಸಂಸ್ಥೆಗಳೂ ಭಾಗವಹಿಸುತ್ತಿವೆ‘ ಎಂದು ಮಾಹಿತಿ ನೀಡಿದರು. ‘ಕರ್ನಾಟಕದ ಪೆವಿಲಿಯನ್‌ನಲ್ಲಿ ರಾಜ್ಯದ ನವೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಸಾವಯವ ರೈತ ಗುಂಪುಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಸೇರಿದಂತೆ ಒಟ್ಟು 100 ಮಳಿಗೆಗಳಿರುತ್ತವೆ. ಉತ್ಪಾದಕರು ಮಾರುಕಟ್ಟೆದಾರರ ಸಮಾಲೋಚನಾ ಸಭೆಗಳನ್ನು ಆಯೋಜಿಸಲಾಗಿದೆ‘ ಎಂದರು. ‘ಸಿರಿಧಾನ್ಯ ಕೃಷಿಗಾಗಿ ನೀಡುತ್ತಿದ್ದ ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹಧನವನ್ನು ಮುಂದುವರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮೊತ್ತ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT