ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೊಸೈಟಿ ಕಾಯ್ದೆ ತಿದ್ದುಪಡಿ ಸಂವಿಧಾನ ಬಾಹಿರ: ಹೈಕೋರ್ಟ್‌

Published 8 ಆಗಸ್ಟ್ 2024, 15:26 IST
Last Updated 8 ಆಗಸ್ಟ್ 2024, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ಸಹಕಾರ ಸಂಘಗಳಲ್ಲಿ ನೇಮಕಾತಿ ವೃಂದ ರಚನೆ, ನೇಮಕಾತಿ, ನೌಕರರ ವರ್ಗಾವಣೆ ಹಾಗೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಹಕಾರ ಸಂಘಗಳಿಂದ ಮೊಟಕುಗೊಳಿಸಿ; ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಕಲಂ 128ಎ ಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಸಂವಿಧಾನಬಾಹಿರ’ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿದೆ.

ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ-2023ರ ಕಲಂ 128ಎ ಗೆ ತರಲಾಗಿದ್ದ ತಿದ್ದುಪಡಿ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ, ‘ಉಪ್ಪಿನಂಗಡಿ ಸಹಕಾರ ಕೃಷಿ ಸೊಸೈಟಿ ಲಿಮಿಟೆಡ್‌’ನ ಅಧ್ಯಕ್ಷ ಕೆ.ವಿ.ಪ್ರಸಾದ್, ಬಜತೂರಿನ ಎಂ.ಜಗದೀಶ್ ರಾವ್‌, ಜಿ.ಯಶವಂತ ಹಾಗೂ ಬೆಳ್ತಂಗಡಿ ತಾಲ್ಲೂಕಿನ ಇಳಂತಿಲ ಗ್ರಾಮದ ಕೆ.ಗೋಪಾಲ ಕೃಷ್ಣ ಭಟ್‌ ಈ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎ.ಕೇಶವ ಭಟ್ ವಾದ ಮಂಡಿಸಿದ್ದರು.

ಅರ್ಜಿಯಲ್ಲಿ ಏನಿತ್ತು?:

‘ಸಹಕಾರ ಸಂಘಗಳನ್ನು ರಚಿಸಿ, ಅವುಗಳನ್ನು ನಿರ್ವಹಿಸುವುದು ಸಂವಿಧಾನದ 19 (1)(ಸಿ) ವಿಧಿಯ ಪ್ರಕಾರ ನಾಗರಿಕರ ಮೂಲಭೂತ ಹಕ್ಕು. ಆದರೆ, ಸರ್ಕಾರವು ಸಹಕಾರ ಸಂಘಗಳ ಕಾಯ್ದೆಯ ಕಲಂ 128ಎ ಗೆ ತಿದ್ದುಪಡಿ ತರುವ ಮೂಲಕ ಸಂವಿಧಾನದತ್ತವಾದ ಆ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದೆ. ಕಾನೂನು-ಸುವ್ಯವಸ್ಥೆ, ದೇಶದ ಸಮಗ್ರತೆ ಮತ್ತು ಏಕತೆಗೆ ಧಕ್ಕೆಯೊದಗುವ ಅಪಾಯ ಇದ್ದಾಗ, ಸಾರ್ವಜನಿಕ ಸುವ್ಯವಸ್ಥೆ ನಿಯಂತ್ರಣ ಕಳೆದುಕೊಂಡಾಗ ಮಾತ್ರವೇ ಮೂಲಭೂತ ಹಕ್ಕುಗಳ ಮೇಲೆ ಸೀಮಿತ ನಿರ್ಬಂಧಗಳನ್ನು ಹೇರಬಹುದು. ಆದರೆ, ಈ ಪ್ರಕರಣದಲ್ಲಿ ಅಂತಹ ಸನ್ನಿವೇಶ ಉದ್ಭವ ಆಗಿಲ್ಲ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

‘ಸ್ಥಳೀಯರು ತಾವೇ ಸೇರಿಕೊಂಡು ಕಾನೂನು ರೀತ್ಯಾ ರಚಿಸಿಕೊಂಡು ನಿರ್ವಹಣೆ ಮಾಡುತ್ತ ಬಂದಿರುವ ಸಹಕಾರ ಸಂಘಗಳಲ್ಲಿನ ನೌಕರರ ನೇಮಕಾತಿ, ವರ್ಗಾವಣೆ, ಶಿಸ್ತು ಕ್ರಮ ಮತ್ತಿತರ ಆಡಳಿತಾತ್ಮಕ ವಿಚಾರಗಳನ್ನು ಆಯಾ ಸಹಕಾರ ಸಂಘಗಳ ಆಡಳಿತ ಮಂಡಳಿಯೇ ನೋಡಿಕೊಳ್ಳುತ್ತಿದ್ದವು. ಆದರೆ, ಈಗ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಕಲಂ 128ಎ ಗೆ ರಾಜ್ಯ ಸರ್ಕಾರ 2023ರಲ್ಲಿ ತಿದ್ದುಪಡಿ ತರುವ ಮೂಲಕ, ಆ ಎಲ್ಲಾ ಅಧಿಕಾರಿಗಳನ್ನು ಸಹಕಾರ ಸಂಘಗಳಿಂದ ಕಿತ್ತುಕೊಂಡಿದೆ’ ಎಂದು ಅರ್ಜಿದಾರರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT