ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: ಅನುಭವಿ ಎದುರು ರಿಯಲ್‌ ಎಸ್ಟೇಟ್‌ ಉದ್ಯಮಿ

Published 29 ಮೇ 2024, 23:45 IST
Last Updated 29 ಮೇ 2024, 23:45 IST
ಅಕ್ಷರ ಗಾತ್ರ

ಮೈಸೂರು: ವಿಧಾನಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಅನುಭವಿ, ಕಾಂಗ್ರೆಸ್‌ನ ಮರಿತಿಬ್ಬೇಗೌಡ ಮತ್ತು ಜೆಡಿಎಸ್‌–ಬಿಜೆಪಿ ಮೈತ್ರಿಕೂಟದಿಂದ ಕಣಕ್ಕಿಳಿದಿರುವ ರಿಯಲ್‌ ಎಸ್ಟೇಟ್‌ ಉದ್ಯಮಿ ಕೆ.ವಿವೇಕಾನಂದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಜೂನ್ 3ರಂದು ಮತದಾನ ನಡೆಯಲಿದ್ದು, ಮಾಜಿ ಶಾಸಕ, ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌, ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ನಿವೃತ್ತ ಡಿಡಿಪಿಯು ನಾಗಮಲ್ಲೇಶ್ ಸೇರಿದಂತೆ ಒಟ್ಟು 11 ಮಂದಿ ಕಣದಲ್ಲಿದ್ದಾರೆ. ಆದರೆ, ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನಡುವೆಯಷ್ಟೇ ಪೈಪೋಟಿ ಕಂಡುಬಂದಿದೆ. ‘ಹಳೇ ಹುಲಿ’ ಮರಿತಿಬ್ಬೇಗೌಡ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡಲು ಎನ್‌ಡಿಎ ಮೈತ್ರಿಕೂಟ ಪ್ರಬಲ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ.

ಕಾಂಗ್ರೆಸ್‌–ಜೆಡಿಎಸ್‌ ಅಭ್ಯರ್ಥಿಗಳಿ ಗಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ –ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ನಡುವಿನ ಹೋರಾಟವೆಂದೇ ಬಿಂಬಿತವಾಗುತ್ತಿದೆ. ಇಬ್ಬರು ನಾಯಕರೂ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವುದೇ ಇದಕ್ಕೆ ಕಾರಣ.

ಸತತ 5ನೇ ಬಾರಿಗೆ ಸ್ಪರ್ಧೆ: ಮರಿತಿಬ್ಬೇಗೌಡ ಅವರು ಇಲ್ಲಿ ಸತತ ನಾಲ್ಕು ಬಾರಿಗೆ ಗೆದ್ದಿದ್ದಾರೆ. 5ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಮೊದಲಿಗೆ ಅಂದರೆ 2000ದಲ್ಲಿ ಅವರು ಕಾಂಗ್ರೆಸ್‌ನಿಂದ ವಿಜೇತರಾಗಿದ್ದರು. 2006ರಲ್ಲಿ ಕುಮಾರಸ್ವಾಮಿ ಜೊತೆ ಗುರುತಿಸಿಕೊಂಡಿದ್ದ ಅವರಿಗೆ, ಆ ಪಕ್ಷದ ಟಿಕೆಟ್‌ ಸಿಗದಿದ್ದಕ್ಕೆ ಬೇಸರಗೊಂಡು ಪಕ್ಷೇತರಾಗಿ ಸ್ಪರ್ಧಿಸಿ ಗೆದ್ದಿದ್ದರು. ನಂತರ 2012 ಹಾಗೂ 2018ರ ಚುನಾವಣೆ ಯಲ್ಲಿ ಜೆಡಿಎಸ್‌ನಿಂದ ಜಯಿಸಿದ್ದರು. ವಿಧಾನಪರಿಷತ್‌ ಉಪಸಭಾಪತಿಯೂ ಆಗಿದ್ದರು.

ಕ್ರಮೇಣ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಅವರು, ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಕಾಲಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಮಧು ಮಾದೇಗೌಡ ಅವರಿಗೆ ಬೆಂಬಲ ನೀಡಿದ್ದರು. ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಇದೇ ಮಾರ್ಚ್‌ನಲ್ಲಿ ವಿಧಾನಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಳಿಕ ಕಾಂಗ್ರೆಸ್‌ ಸೇರ್ಪಡೆಯಾದರು. ಅವರಿಗೆ ಕೊಟ್ಟಿದ್ದ ಭರವಸೆಯಂತೆ ‘ಕೈ’ ಮುಖಂಡರು ಟಿಕೆಟ್‌ ನೀಡಿದ್ದಾರೆ.

ಕ್ಷೇತ್ರದಲ್ಲಿ ಸತತ 24 ವರ್ಷಗಳಿಂದಲೂ ಏಕವ್ಯಕ್ತಿಯದ್ದೇ (ಮರಿತಿಬ್ಬೇಗೌಡ) ಹಿಡಿತ. ಒಕ್ಕಲಿಗ ಸಮಾಜದ ಪ್ರಭಾವಿ ನಾಯಕರಾಗಿ ಬೆಳೆದಿರುವ ಅವರನ್ನು ಮತದಾರರು ಗೆಲ್ಲಿಸುತ್ತಾ ಬಂದಿದ್ದಾರೆ. ‘ಮರಿತಿಬ್ಬೇಗೌಡ ಕೋಟೆ’ ವಶಪಡಿಸಿ ಕೊಳ್ಳಲು ಜೆಡಿಎಸ್‌ ನಾಯಕ ಕುಮಾರಸ್ವಾಮಿ ಬಿಜೆಪಿ ಬೆಂಬಲ ದೊಂದಿಗೆ ಒಕ್ಕಲಿಗ ಸಮಾಜದವರೇ ಆದ ತಮ್ಮ ಆಪ್ತ ವಿವೇಕಾನಂದ ಅವರನ್ನು ಕಣಕ್ಕಿಳಿಸಿದ್ದಾರೆ. ಇಬ್ಬರೂ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.

ಸೇಡು ತೀರಿಸಿಕೊಳ್ಳಲು ತಂತ್ರ: ಮೂರು ಚುನಾವಣೆಗಳಿಂದೀಚೆಗೆ ಇಲ್ಲಿ ಕಾಂಗ್ರೆಸ್‌ ಗೆಲುವು ಕಂಡಿಲ್ಲ. ಇದೀಗ, ಮರಿತಿಬ್ಬೇಗೌಡ ಮೂಲಕ ಪಕ್ಷದ ಸೋಲಿನ ಸರಪಳಿ ಕಳಚಿಕೊಳ್ಳಲು ಬಯಸಿದೆ. ತಮ್ಮಲ್ಲಿದ್ದ ನಾಯಕನನ್ನು ಸೆಳೆದುಕೊಂಡ ಕಾಂಗ್ರೆಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ನಾಯಕರು ತಂತ್ರ ರೂಪಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರ ನೆರವು ಪಡೆದಿದ್ದಾರೆ. ಆದರೆ, ಮೂರ್ನಾಲ್ಕು ಬಾರಿ ‘ಸಮನ್ವಯ ಸಭೆ’ ನಡೆಸಿದರೂ ಕಾರ್ಯಕರ್ತರಿಂದ ನಿರೀಕ್ಷಿತ ಪ್ರತಿಕ್ರಿಯೆ ಕಂಡು ಬಾರದಿರುವುದು ಉಭಯ ಪಕ್ಷಗಳ ನಾಯಕರ ತಲೆನೋವಿಗೆ ಕಾರಣವಾಗಿದೆ!

ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ನೇರ ಪೈಪೋಟಿ ಕಂಡುಬಂದಿದೆ. ‘ಪ್ರಥಮ ಪ್ರಾಶಸ್ತ್ಯ’ದ ಮತಗಳಲ್ಲಿ ಭಾರಿ ಅಂತರ ಪಡೆದವರು ಗೆಲುವಿನ ದಡವನ್ನು ಸಲೀಸಾಗಿ ತಲುಪಬಹುದು.

ಕಣದಲ್ಲಿನ ವಿಶೇಷ

* ಮಾಜಿ ಶಾಸಕರು, ಕೃಷಿಕರು, ಸಾಮಾಜಿಕ ಕಾರ್ಯಕರ್ತರು, ನಿವೃತ್ತ ಡಿಡಿಪಿಯು ಸ್ಪರ್ಧೆ

* ಶಿಕ್ಷಕರ ಕ್ಷೇತ್ರವಾದರೂ ಶಿಕ್ಷಕರಾರೂ ಸ್ಪರ್ಧಿಸಿಲ್ಲ

* ಹಾಸನದ ಯಾರೊಬ್ಬರೂ ಕಣದಲ್ಲಿಲ್ಲ

* ಮಹಿಳೆಯರ್‍ಯಾರೂ ಸ್ಪರ್ಧಿಸಿಲ್ಲ

* ಸ್ಪರ್ಧೆಗಷ್ಟೆ ಸೀಮಿತವಾಗಿರುವ ವಾಟಾಳ್‌ ನಾಗರಾಜ್‌ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ

* 29 ವಿಧಾನಸಭಾ ಕ್ಷೇತ್ರಗಳು, 26 ತಾಲ್ಲೂಕುಗಳ ವ್ಯಾಪ್ತಿ ಹೊಂದಿದೆ

* ಇಲ್ಲಿ ಬಿಜೆಪಿ ಒಮ್ಮೆಯೂ ಗೆದ್ದಿಲ್ಲ

24 ವರ್ಷಗಳಲ್ಲಿ 20 ವರ್ಷಗಳವರೆಗೆ ವಿರೋಧ ಪಕ್ಷದಲ್ಲೇ ಇದ್ದೆ. ಆದರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಈ ಬಾರಿ ನಮ್ಮದೇ ಸರ್ಕಾರ ಇರುವುದು ಕೈಹಿಡಿಯಲಿದೆ.
ಮರಿತಿಬ್ಬೇಗೌಡ, ಕಾಂಗ್ರೆಸ್‌ ಅಭ್ಯರ್ಥಿ
ಶಿಕ್ಷಕರ ಸೇವೆಗಾಗಿ ರಾಜಕಾರಣಕ್ಕೆ ಬಂದಿರುವೆ. ಗೆದ್ದರೆ ಸರ್ಕಾರದಿಂದ ದೊರೆಯುವ ಗೌರವಧನದಿಂದ ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗುವೆ.
ಕೆ.ವಿವೇಕಾನಂದ, ಜೆಡಿಎಸ್‌ ಅಭ್ಯರ್ಥಿ
ಕೆ.ವಿವೇಕಾನಂದ

ಕೆ.ವಿವೇಕಾನಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT