ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ್‌ಗೆ ವಿಶೇಷ ಆತಿಥ್ಯ: ಸೆಂಟ್ರಲ್ ಜೈಲು ಅಧೀಕ್ಷಕ ಶೇಷಮೂರ್ತಿ ಅಮಾನತು

Published 26 ಆಗಸ್ಟ್ 2024, 11:02 IST
Last Updated 26 ಆಗಸ್ಟ್ 2024, 11:05 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿರುವ ಪ್ರಕರಣದಲ್ಲಿ ಒಂಬತ್ತು ಮಂದಿ ಜೈಲು ಸಿಬ್ಬಂದಿಯನ್ನು ಅಮಾನತು ಮಾಡಿದ ಬೆನ್ನಲ್ಲೇ ಹಿರಿಯ ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕೈದಿಗಳ ದೈನಂದಿನ ಚಟುವಟಿಕೆ ಮೇಲೆ ನಿಗಾವಹಿಸದಿರುವುದು, ಪ್ರಮುಖ‌ ಪ್ರಕರಣಗಳ ಆರೋಪಿಗಳ ಭೇಟಿ ಮಾಡಿ ಹೋದ ನಂತರ ಸಿ.ಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸದಿರುವುದಕ್ಕೆ ಜೈಲಿನ ಚೀಫ್ ಸೂಪರಿಂಟ್‌ಡೆಂಡ್, ಸೂಪರಿಡೆಂಟ್ ಹಾಗೂ ಮತ್ತಿತರ ಜೈಲು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆಯಾದ ಬಳಿಕ ನಟ ದರ್ಶನನ್ನು ಬಂಧಿಸಿರುವುದು ಹಾಗೂ ಪ್ರಕರಣದ ಸ್ವರೂಪ ಏನೆಂಬುದು ಎಲ್ಲವೂ ಗೊತ್ತಿದೆ. ಆದರೂ ನಿಯಮಗಳನ್ನು ಮೀರಿ ಆರೋಪಿಗಳಿಗೆ ಟೀ, ಸಿಗರೇಟ್ ಮತ್ತಿತರ ಸವಲತ್ತುಗಳ ಪೂರೈಕೆಯಾಗಿದೆ.‌ ದಿನದ 24 ಗಂಟೆಯೂ ವಾರ್ಡರ್‌ಗಳು ಕರ್ತವ್ಯದಲ್ಲಿ ಇರುತ್ತಾರೆ. ಘಟನೆ ಎಲ್ಲರ ಕಣ್ತಪ್ಪಿ ನಡೆಯಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಯಾವ ವಸ್ತುಗಳು ಪತ್ತೆಯಾಗಿಲ್ಲ. ಜೈಲಿನಲ್ಲಿ ಮೊಬೈಲ್ ಬಳಕೆಯಾಗುತ್ತಿದೆ ಎಂಬುದು ಕಂಡು ಬಂದಿದೆ. ಹೈಫ್ರಿಕ್ವೆನ್ಸಿ ಜಾಮರ್, ಅತ್ಯುತ್ತಮ ಗುಣಮಟ್ಟದ ಮೆಟಲ್ ಡಿಟೆಕ್ಟರ್ ಯಂತ್ರ, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇಷ್ಟೆಲ್ಲ ಬಂದೋಬಸ್ತ್,‌ ಪರಿಶೀಲನೆ ನಡುವೆಯೂ ಕಾರಾಗೃಹದೊಳಗೆ ಸಿಗರೇಟ್, ಮೊಬೈಲ್ ತಲುಪಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲ ಬಂಧಿಖಾನೆಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ‌ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಕಾರಾಗೃಹ ಮತ್ತು ಸುಧಾರಣಾ‌ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಸೂಚನೆ ನೀಡಿದರು‌.

‌ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ ಅವರು, ‘ಈಗಾಗಲೇ ಏಳು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಚೀಫ್ ಸೂಪರಿಡೆಂಟ್ ಶೇಷಮೂರ್ತಿ, ಸೂಪರಿಂಟ್‌ಡೆಂಟ್ ಮಲ್ಲಿಕಾರ್ಜುನ್ ಸ್ವಾಮಿ ಬಂಧಿಖಾನೆಯ ಜವಾಬ್ಧಾರಿ ಹೊತ್ತ ಹಿರಿಯ ಅಧಿಕಾರಿಗಳು.‌ ಪರಿಶೀಲನೆ ವೇಳೆ ಈ ಇಬ್ಬರು ಅಧಿಕಾರಿಗಳ ವೈಫಲ್ಯ, ನಿರ್ಲಕ್ಷ್ಯತನ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT