ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ | ಮಾವಿನ ತೋಪು ತೆರವು ಕಾರ್ಯಾಚರಣೆಗೆ ಹೈಕೋರ್ಟ್ ತಡೆ

Published 29 ಆಗಸ್ಟ್ 2023, 16:20 IST
Last Updated 29 ಆಗಸ್ಟ್ 2023, 16:20 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀನಿವಾಸಪುರ ತಾಲ್ಲೂಕು ನೆಲವಂಕಿ ಹೋಬಳಿಯ ಉಪ್ಪಾರಪಲ್ಲಿ ಹಾಗೂ ಮಲಪಲ್ಲಿಯಲ್ಲಿನ ಸಾಗುವಳಿ ಚೀಟಿ ಹೊಂದಿದ ರೈತರ ಮಾವಿನ ತೋಪುಗಳನ್ನು ಅರಣ್ಯ ಒತ್ತುವರಿ ಆರೋಪದಡಿ ತೆರವುಗೊಳಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. 

ತೆರವು ಕಾರ್ಯಾಚರಣೆ ಪ್ರಶ್ನಿಸಿ ಉಪ್ಪಾರಪಲ್ಲಿಯ ಗುಲ್ಜಾರ್‌ ಪಾಷ ಮತ್ತು ನಜರ್‌ ಹುಸೇನ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‌ ವಾದ ಮಂಡಿಸಿ, ‘ಅರ್ಜಿದಾರರು 1995–96ರಿಂದಲೂ ಮಲ್ಲಪಲ್ಲಿಯಲ್ಲಿಯ ಸರ್ವೆ ನಂಬರ್ 34ರ ಜಮೀನಿಗೆ ಕಾನೂನು ರೀತ್ಯಾ ಪಹಣಿ ಹಾಗೂ ಮಾಲೀಕತ್ವದ ಕಂದಾಯ ದಾಖಲೆಗಳನ್ನು ಹೊಂದಿ ಉಳುಮೆ ಮಾಡುತ್ತಾ ಬಂದಿದ್ದಾರೆ. ಮಾವಿನ ತೋಪು ಅಭಿವೃದ್ಧಿಪಡಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ, ಕೋಲಾರ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಅರ್ಜಿದಾರರ ಜಮೀನು ಅರಣ್ಯ ಪ್ರದೇಶಕ್ಕೆ ಒಳಪಟ್ಟಿದೆ ಎಂದು ಆರೋಪಿಸಿ ಕಾನೂನುಬಾಹಿರವಾಗಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ‘ ಎಂದು ಆಕ್ಷೇಪಿಸಿದರು.

‘ಅರಣ್ಯ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ರಾಜಕೀಯ ದುಷ್ಪ್ರೇರಣೆಯಿಂದ ಅರ್ಜಿದಾರರ ಜಮೀನು ತೆರವಿಗೆ ಮುಂದಾಗಿದ್ದಾರೆ. ಶ್ರೀನಿವಾಸಪುರ ವಿಶ್ವಪ್ರಸಿದ್ಧಿ  ಮಾವಿನ ತೋಪಿಗೆ ಹೆಸರಾಗಿದ್ದು ಅರ್ಜಿದಾರರ ಜಮೀನಿನ ಸ್ವಾಧೀನಾನುಭವದ ಕಾನೂನು ಬದ್ಧತೆಯನ್ನು ನಿರ್ಲಕ್ಷಿಸಿ ನೆಲಸಮಕ್ಕೆ ಮುಂದಾಗಿದ್ದಾರೆ. ಇದು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ತಡೆ ನೀಡಿ ತೋಪಿನ ರಕ್ಷಣೆಗೆ ನಿರ್ದೇಶಿಸಬೇಕು‘ ಎಂದು ಕೋರಿದರು. 

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಕಿರಣ್‌ ವಿ.ರೋಣ ಅವರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸಲ್ಲಿಸುವಂತೆ ಸೂಚಿಸಿತು. ಅಂತೆಯೇ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೋಲಾರ ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ, ಶ್ರೀನಿವಾಸಪುರ ತಾಲ್ಲೂಕು ತಹಶೀಲ್ದಾರ್‌ ಸೇರಿದಂತೆ ಒಟ್ಟು ಏಳು ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT