ಬೆಂಗಳೂರು: ‘ಎತ್ತಿನಹೊಳೆ ಮಾದರಿ’ಯಲ್ಲಿ ಬೇಡ್ತಿ ನದಿ ತಿರುವು ಯೋಜನೆಯನ್ನು ಹೊಸ ಸ್ವರೂಪದಲ್ಲಿ ಕೈಗೆತ್ತಿಕೊಳ್ಳುವ ಕುರಿತು ಜಲ ಸಂಪನ್ಮೂಲ ಇಲಾಖೆ ಚಿಂತನೆ ನಡೆಸಿದೆ.
ಬೇಡ್ತಿ– ವರದಾ ನದಿಗಳನ್ನು ಜೋಡಣೆ ಮಾಡುವ ಪ್ರಸ್ತಾವವನ್ನು 25 ವರ್ಷಗಳ ಹಿಂದೆ ಸಿದ್ಧಪಡಿಸಲಾಗಿತ್ತು. ಈ ಯೋಜನೆಯಡಿ ಬೇಡ್ತಿ ನದಿಯ ನೀರನ್ನು ವರದಾ ನದಿಗೆ ಹರಿಸಿ ಬಳಿಕ ತುಂಗ ಭದ್ರಾ ಎಡದಂಡೆ ಕಾಲುವೆಗಳಿಗೆ ಹರಿಸುವ ಪ್ರಸ್ತಾವವಿತ್ತು. ಈಗ ಬೇಡ್ತಿ ನದಿಯ ‘ಹೆಚ್ಚುವರಿ’ ನೀರನ್ನು ಏತ ನೀರಾವರಿ ಮೂಲಕ ಗದಗ ಜಿಲ್ಲೆಯ ಹಿರೇವಡ್ಡಟ್ಟಿ ಬಳಿಗೆ ಹರಿಸುವ ಚಿಂತನೆ ನಡೆದಿದೆ.
ಬೇಡ್ತಿ ನದಿ ತಿರುವು ಯೋಜನೆಗೆ 25 ವರ್ಷಗಳಿಂದಲೂ ಉತ್ತರ ಕನ್ನಡ ಜಿಲ್ಲೆಯ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈಗಲೂ ಅಲ್ಲಿನ ಜನರು ಮತ್ತು ಪರಿಸರವಾದಿಗಳು ಪ್ರಸ್ತಾವಿತ ಯೋಜನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (ಎನ್‌ಡಬ್ಲ್ಯುಡಿಎ), ಪಶ್ಚಿಮ ಘಟ್ಟದ ನದಿಗಳಲ್ಲಿ ಹರಿಯುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು 1995ರಲ್ಲಿ ಯೋಜನೆ ರೂಪಿಸಿತ್ತು. ಅದರ ಭಾಗವಾಗಿ, ಬೇಡ್ತಿ ನದಿಯಿಂದ 8.5 ಟಿಎಂಸಿ ಅಡಿ ನೀರನ್ನು ವರದಾ ನದಿಗೆ ಹರಿಸಲು ಪೂರ್ವ ಕಾರ್ಯಸಾಧ್ಯತಾ ವರದಿಯನ್ನೂ ಸಿದ್ಧಪಡಿಸಿತ್ತು.
ಈ ಯೋಜನೆಗೆ ಅನುಮತಿ ಕೋರಿ ಕರ್ನಾಟಕ ನೀರಾವರಿ ನಿಗಮ ಕೇಂದ್ರ ಪರಿಸರ ಇಲಾಖೆಗೆ ಪ್ರಸ್ತಾವವನ್ನೂ ಸಲ್ಲಿಸಿತ್ತು. ಆದರೆ, ಬೇಡ್ತಿ ಮತ್ತು ಅಘನಾಶಿನಿ ಕಣವೆ ಸಂರಕ್ಷಣಾ ಸಮಿತಿಯು ಸೋಂದಾ ಸ್ವರ್ಣವಲ್ಲಿ ಮಠಾಧೀಶರು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ಬೆಂಬಲದೊಂದಿಗೆ ಬೃಹತ್ ಹೋರಾಟ ಸಂಘಟಿಸಿದ್ದರಿಂದ ಯೋಜನೆಯಿಂದ ಹಿಂದಕ್ಕೆ ಸರಿದಿತ್ತು.
‘ಈಗ ಬೇಡ್ತಿ ನದಿಯ ಎರಡು ಕವಲುಗಳಿಂದ 8.5 ಟಿಎಂಸಿ ಅಡಿ ನೀರನ್ನು ಹಿರೇವಡ್ಡಟ್ಟಿಗೆ ಹರಿಸುವ ಕುರಿತು ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ. ಅಲ್ಲಿ 100 ಟಿಎಂಸಿ ಅಡಿಗಳಷ್ಟು ನೀರನ್ನು ಸಂಗ್ರಹಿಸಲು ಅವಕಾಶವಿದೆ’ ಎಂದು ಜಲ ಸಂಪನ್ಮೂಲ ಇಲಾಖೆಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ತುಂಗಭದ್ರಾ ನಾಲೆಗಳ ನೀರು ಹರಿಯದ ರಾಯಚೂರು, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಮೂಲೆಯ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಬೇಡ್ತಿ ನದಿಯಿಂದ 22 ಟಿಎಂಸಿ ಅಡಿಗಳಷ್ಟು ಹೆಚ್ಚುವರಿ ನೀರನ್ನು ಬೇಡ್ತಿ ಮತ್ತು ಅಘನಾಶಿನಿ ನದಿಗಳಿಂದ ಏತ ನೀರಾವರಿ ಮೂಲಕ ಕೊಂಡೊಯ್ಯಲು ಯೋಚಿಸಿದ್ದೇವೆ. ಶಿರಸಿ ಬಳಿಯಿಂದ ನೀರನ್ನು ಎತ್ತಿ 100 ಕಿ.ಮೀ. ದೂರದವರೆಗೆ ಕೊಳವೆಗಳ ಮೂಲಕ ನೀರನ್ನು ಸಾಗಿಸುವ ಕಾಮಗಾರಿಗಳನ್ನು ಪ್ರಸ್ತಾವಿತ ಯೋಜನೆ ಒಳಗೊಂಡಿದೆ’ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಯೋಜನೆಯ ಕುರಿತು ಬಜೆಟ್‌ನಲ್ಲಿ ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ.
ಬಳಿಕ ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು ತೀವ್ರ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ.
‘ಇದು ಶಿರಸಿ ಮತ್ತು ಹಾವೇರಿ ನಡುವಣ ವಿಷಯವಲ್ಲ. ನೀರು ಎಲ್ಲರಿಗೂ ಮುಖ್ಯವೇ. ಪಶ್ಚಿಮ ಘಟ್ಟ ಹಾಗೂ ಅಲ್ಲಿನ ನದಿಗಳಲ್ಲಿನ ನೀರಿನ ಲಭ್ಯತೆಯ ಕುರಿತು ಮೊದಲು ವೈಜ್ಞಾನಿಕವಾದ ಅಧ್ಯಯನ ನಡೆಯಬೇಕು. ಈಗ ರೂಪಿಸುತ್ತಿರುವ ಯೋಜನೆ ಅವೈಜ್ಞಾನಿವಾದುದು ಮತ್ತು ಸುಸ್ಥಿರವಲ್ಲದ್ದು’ ಎಂದು ಶಿರಸಿಯ ಜೀವವಿಜ್ಞಾನಿ ಕೇಶವ ಎಚ್. ಕೊರ್ಸೆ ಹೇಳಿದರು.
‘ಪಶ್ಚಿಮ ಘಟ್ಟದಿಂದ ಸಿಹಿ ನೀರು ಸಮುದ್ರ ತಲುಪಿದರೆ ಮಾತ್ರ ಸಮುದ್ರದಲ್ಲಿ ಜೀವಸಂಕುಲ ಅಭಿವೃದ್ಧಿಯಾಗುತ್ತದೆ. ಈಗಾಗಲೇ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಮುದ್ರ ಪ್ರದೇಶದಲ್ಲಿ ಮೀನಿನ ಕೊರತೆ ಸೃಷ್ಟಿಯಾಗಿದೆ. ಅಂಕೋಲಾ ಸಮುದ್ರ ತೀರವು ಬೇಡ್ತಿಯ ಹರಿವನ್ನು ಅವಲಂಬಿಸಿದೆ. ಈ ನೀರನ್ನು ಬೇರೆ ಕಡೆಗೆ ಹರಿಸಿದರೆ ಏನಾಗಬಹುದು ಎಂಬುದು ಆಲೋಚಿಸಬೇಕಾದ ವಿಚಾರ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.