ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ತೊರೆದ 18 ಮಕ್ಕಳು ಅಸುನೀಗಿದರು!

ಸರ್ವಶಿಕ್ಷಣ ಅಭಿಯಾನದ ಸಮೀಕ್ಷೆಯಿಂದ ಬಹಿರಂಗ
Last Updated 3 ಜುಲೈ 2019, 20:15 IST
ಅಕ್ಷರ ಗಾತ್ರ

ಹಾವೇರಿ: ಶಾಲೆಯಿಂದ ಹೊರಗುಳಿದು ನಂತರ ಕಡ್ಡಾಯ ಶಿಕ್ಷಣ ವ್ಯಾಪ್ತಿಗೆ ಒಳಪಟ್ಟಿದ್ದ ಜಿಲ್ಲೆಯ 584 ಮಕ್ಕಳ ಪೈಕಿ 18 ಮಕ್ಕಳು ನಾನಾ ಕಾರಣಗಳಿಂದ ಅಸುನೀಗಿದ್ದರೆ, ಇನ್ನೂ 505 ಮಕ್ಕಳು ಎಲ್ಲಿದ್ದಾರೆ ಎಂಬ ಸುಳಿವೇ ಇಲ್ಲ!

ಶಿಕ್ಷಣದಿಂದ ದೂರ ಸರಿದ ಮಕ್ಕಳನ್ನು ಪತ್ತೆ ಮಾಡಿ, ಮತ್ತೆ ಶಾಲೆಗೆ ಸೇರಿಸುವ ಸಲುವಾಗಿ ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿ ಒಂದು ತಿಂಗಳ (ಮೇ 29ರಿಂದ ಜೂನ್ 30)ವಿಶೇಷ ಅಭಿಯಾನ ನಡೆಸಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

2018–19ರ ಸಾಲಿನಲ್ಲಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡಿದಾಗ 6ರಿಂದ 14 ವರ್ಷ ವಯೋಮಾನದ 584 ಮಕ್ಕಳು (282 ಗಂಡು, 302 ಹೆಣ್ಣು) ಶಾಲೆಯಿಂದ ಹೊರಗುಳಿದಿರುವ ಸಂಗತಿ ಗೊತ್ತಾಗಿತ್ತು. ಹೀಗಾಗಿ, ಅವರನ್ನು ಹುಡುಕಲು ಅಭಿಯಾನ ಪ್ರಾರಂಭಿಸಲಾಯಿತು. ಈ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಕ್ಲಸ್ಟರ್ ಸಂಪನ್ಮೂಲ ಅಧಿಕಾರಿಗಳು (ಸಿಆರ್‌ಪಿ) ಜಿಲ್ಲೆಯಾದ್ಯಂತ ಕಾರ್ಯಾಚರಣೆ ನಡೆಸಿ ಜುಲೈ 1ರಂದು ಶಿಕ್ಷಣ ಇಲಾಖೆಗೆ ವರದಿ ಕೊಟ್ಟಿದ್ದಾರೆ.

584ರ ಪೈಕಿ 61 ಮಕ್ಕಳನ್ನು (36 ಗಂಡು, 25 ಹೆಣ್ಣು) ವಿವಿಧೆಡೆ ಪತ್ತೆ ಮಾಡಿ ಮುಖ್ಯ ವಾಹಿನಿಗೆ ತರಲಾಗಿದೆ.ಅವರಿಗೆ ಸ್ವಯಂ ಸೇವಾ ಸಂಸ್ಥೆಗಳ (ಎನ್‌ಜಿಒ) ಮೂಲಕ ಆಪ್ತ ಸಮಾಲೋಚನೆ ಮಾಡಿಸುವ ಕೆಲಸವೂ ನಡೆಯುತ್ತಿದೆ. ಸದ್ಯದಲ್ಲೇ ಈ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪ್ರಾರಂಭಿಸಲಿದ್ದಾರೆ. ಆದರೆ,18 ಮಕ್ಕಳು ಅಸುನೀಗಿರುವುದಾಗಿ ಅವರ ಪೋಷಕರೇ ಮರಣ ಪ್ರಮಾಣ ಪತ್ರ ಕೊಟ್ಟಿದ್ದಾರೆ. ರಸ್ತೆ ಅಪಘಾತದಿಂದ, ಗಾರೆ ಕೆಲಸದ ವೇಳೆ ಕಟ್ಟಡದಿಂದ ಬಿದ್ದು, ಹೊಲದಲ್ಲಿ ಕೆಲಸ ಮಾಡುವಾಗಹಾವು ಕಚ್ಚಿ, ಈಜಲು ತೆರಳಿದಾಗ ಕೆರೆಯಲ್ಲಿ ಮುಳುಗಿ, ವಿಪರೀತ ಜ್ವರದಿಂದ ಮಕ್ಕಳು ಮೃತಪಟ್ಟಿರುವುದು ಸಮೀಕ್ಷೆಯಿಂದ ಖಚಿತವಾಗಿದೆ.

‘ಮಕ್ಕಳು, ಕಷ್ಟದ ಸ್ಥಳ– ಸನ್ನಿವೇಶಗಳಲ್ಲಿ ಕೂಲಿ ಮಾಡುತ್ತಿದ್ದಾರೆ. ಅವರನ್ನು ಹುಡುಕಿಕೊಂಡು ಮನೆ ಹತ್ತಿರ ಹೋದರೆ, ಕುಟುಂಬ ಸದಸ್ಯರೇ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಆ 18 ಮಕ್ಕಳು ಶಾಲೆಯಲ್ಲಿದ್ದಿದ್ದರೆ ಸಾಯುತ್ತಿರಲಿಲ್ಲ’ ಎಂದು ಅಭಿಯಾನದ ಜಿಲ್ಲಾ ಯೋಜನಾ ಉಪ ಸಮನ್ವಯಾಧಿಕಾರಿ ಎಸ್.ಎಸ್.ಅಡಿಗ ಬೇಸರ ವ್ಯಕ್ತಪಡಿಸಿದರು.

63ರಲ್ಲಿ ಸಿಕ್ಕಿದ್ದು ಒಂದೇ ಮಗು: ‘ಹಿರೇಕೆರೂರು ತಾಲ್ಲೂಕಿನಲ್ಲಿ 16 ಮಕ್ಕಳುಶಾಲೆಯಿಂದ ಹೊರಗುಳಿದಿದ್ದರು. ಅವರಲ್ಲಿ 15 ಮಕ್ಕಳನ್ನು ಹುಡುಕಿ ಮುಖ್ಯವಾಹಿನಿಗೆ ತರುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೆ, ಹಾನಗಲ್‌ ತಾಲ್ಲೂಕಿನ 63 ಮಕ್ಕಳಲ್ಲಿ ನಮಗೆ ಮಣಿಕಂಠ ಮೈಲಾರಪ್ಪ ಗುಂಡಳ್ಳಿ ಎಂಬಾತ ಮಾತ್ರ ಸಿಕ್ಕಿದ್ದಾನೆ’ ಎಂದು ಅಡಿಗ ಮಾಹಿತಿ ನೀಡಿದರು.

ಸರ್ಕಾರವೇ ಹೊಣೆ: ಹಾವೇರಿಯಂತಹ ಸಣ್ಣ ಜಿಲ್ಲೆ ಯಲ್ಲೇ 18 ಮಕ್ಕಳು ಅಸುನೀಗಿರುವುದು ಆತಂಕ ಪಡುವ
ವಿಚಾರ. ಸಾವಿನ ಹೊಣೆಯನ್ನು ಸರ್ಕಾರವೇ ಹೊರಬೇಕು’ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ಹೇಳಿದರು.

‘ಸರ್ಕಾರವೇ ಹೊಣೆ ಹೊರಬೇಕು’

‘ಬಾಲ ಕಾರ್ಮಿಕ, ಬಾಲ್ಯ ವಿವಾಹಗಳಂತಹ ಮಾರಕ ಸನ್ನಿವೇಶಗಳಿಂದ ಮಕ್ಕಳನ್ನು ಪಾರು ಮಾಡಲೆಂದು 2009ರಲ್ಲಿ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಹಾವೇರಿಯಂತಹ ಸಣ್ಣ ಜಿಲ್ಲೆಯಲ್ಲೇ 18 ಮಕ್ಕಳು ಅಸುನೀಗಿದ್ದಾರೆ ಎಂಬುದು ತುಂಬ ಆತಂಕಪಡುವ ವಿಚಾರ. ಶಾಲೆಯಿಂದ ಹೊರಗುಳಿದ ಕಾರಣಕ್ಕೇ ಅವರು ಮೃತಪಟ್ಟಿದ್ದಾರೆ. ಹೀಗಾಗಿ, ಸಾವಿನ ಹೊಣೆಯನ್ನು ಸರ್ಕಾರವೇ ಹೊರಬೇಕು’ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT