ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲಮಿತಿಯಲ್ಲಿ ನಡೆಯದ ಕೌನ್ಸೆಲಿಂಗ್: ಎಂಡಿಎಸ್ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು

ಫಾಲೋ ಮಾಡಿ
Comments

ಬೆಂಗಳೂರು: ಸೀಟು ಹಂಚಿಕೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಕಾಲಮಿತಿಯಲ್ಲಿ ಪೂರ್ಣಗೊಳಿಸದ ಕಾರಣ ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ದಂತ ವೈದ್ಯಕೀಯ (ಎಂಡಿಎಸ್‌) ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.

ಕೋರ್ಸ್‌ ಪ್ರವೇಶದ ಕೊನೆ ದಿನವನ್ನು ವಿಸ್ತರಿಸಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಅಲ್ಲದೆ, ಎಂಡಿಎಸ್‌ ಕೋರ್ಸ್‌ಗೆ ಈಗಾಗಲೇ ಪ್ರವೇಶ ಪಡೆದವರ ದಾಖಲಾತಿಯನ್ನು ಪೂರ್ವಾನ್ವಯಗೊಳಿಸಲು ಕೂಡಾ ನಿರಾಕರಿಸಿದೆ.

ಎಂಡಿಎಸ್‌ ಪ್ರವೇಶಕ್ಕೆ ವಿಳಂಬವಾಗಿ ಕೌನ್ಸೆಲಿಂಗ್ ಆರಂಭವಾಗಿದ್ದು, ಇದಕ್ಕೆ ಹೆಚ್ಚಿನ ಸಮಯ ತಗುಲಿದೆ. ತಪ್ಪಿನ ಅರಿವಾಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ, ಪ್ರವೇಶದ ಅಂತಿಮ ದಿನವನ್ನು ವಿಸ್ತರಿಸುವ ಮೂಲಕ ಕೊನೆಯ ದಿನದ ಬಳಿಕ ಮಾಡಿಕೊಂಡ ದಾಖಲಾತಿಗೆ ಮಂಜೂರಾತಿ ನೀಡಬೇಕು ಎಂದು ಮನವಿ ಸಲ್ಲಿಸಿತ್ತು.

ನ.26ರಂದು ರಾಜ್ಯ ಸರ್ಕಾರ ಮಾಡಿದ್ದ ಈ ಮನವಿಯನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರ, 2021–22ನೇ ಸಾಲಿಗೆ ಎಂಡಿಎಸ್‌ ಪ್ರವೇಶ ದಿನವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಡಿ. 21ರಂದು ಸ್ಪಷ್ಟಪಡಿಸಿದೆ. ಕೇಂದ್ರದ ಈ ನಿಲುವಿನಿಂದ ಕೋರ್ಸ್‌ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಎಂಡಿಎಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ದಾಖಲಾತಿಗಳನ್ನು ದಂತ ವೈದ್ಯಕೀಯ ಕಾಲೇಜುಗಳು ನ. 20ರ ಒಳಗೆ ಭಾರತೀಯ ದಂತ ವೈದ್ಯಕೀಯ ಪರಿಷತ್‌ನ (ಡಿಸಿಐ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಆ ನಂತರ ಅಪ್‌ಲೋಡ್‌ ಮಾಡುವ ದಾಖಲೆಗಳನ್ನು ಪರಿಗಣಿಸುವುದಿಲ್ಲ‘ ಎಂದು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧರಿಸಿರುವ ಬಗ್ಗೆ ಡಿಸಿಐ ಪ್ರಕಟಣೆ ಹೊರಡಿಸಿತ್ತು. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಕೇಂದ್ರ ಮಾಹಿತಿ ನೀಡಿದೆ.

ಎಂಡಿಎಸ್‌ ವಿದ್ಯಾರ್ಥಿಗಳಿಗೆ ಆಗಿರುವ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಧಿಕಾರಿಯೊಬ್ಬರು, ‘ವೈದ್ಯಕೀಯ ಶಿಕ್ಷಣ ಇಲಾಖೆ ಸೂಚನೆಯಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸುವುದಷ್ಟೆ ನಮ್ಮ ಕೆಲಸ‘ ಎಂದರು.

‘ರಾಜ್ಯ ಸರ್ಕಾರದ ಮಟ್ಟದಲ್ಲಿ ದಂತ ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರದ ಮಧ್ಯೆ ಒಮ್ಮತ ಮೂಡಿ ಒಪ್ಪಂದ ಮಾಡಿಕೊಳ್ಳಲು ವಿಳಂಬ ಆಗಿದ್ದರಿಂದ ಎಂಡಿಎಸ್‌ ಕೌನ್ಸೆಲಿಂಗ್‌ ಪ್ರಕ್ರಿಯೆ ವಿಳಂಬವಾಗಿದೆ‘ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಡಿಸಿಐ ಹೊರಡಿಸಿರುವ ಅಧಿಸೂಚನೆಯಂತೆ, 2021–22ನೇ ಶೈಕ್ಷಣಿಕ ಸಾಲಿಗೆ ಎಂಡಿಎಸ್‌ ಪ್ರವೇಶ ನೋಂದಣಿಗೆ ನ.20 ಕೊನೆಯ ದಿನ. ‘ನೀಟ್‌– ಎಂಡಿಎಸ್‌ 2021’ ಪ್ರವೇಶ ಪರೀಕ್ಷೆ 2020ರ ಡಿ. 16ರಂದು ನಡೆದಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಕೌನ್ಸೆಲಿಂಗ್‌ ಪ್ರಕ್ರಿಯೆ 2021ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಂಡಿದೆ. ತಕ್ಷಣವೇ ಸರ್ಕಾರ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ ವಿಳಂಬವಾಗಿ, ಅಂದರೆ ಡಿ.5ರಂದು ಈ ಪ್ರಕ್ರಿಯೆ ನಡೆಸಿದೆ.

‘ನಮ್ಮದಲ್ಲದ ತಪ್ಪಿಗೆ ಬಲಿಪಶು ಆಗಿದ್ದೇವೆ. ನಮ್ಮ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟ ಆಡಿದೆ. ಪ್ರವೇಶಕ್ಕೆ ಡಿಸಿಐ ಅನುಮೋದನೆ ನೀಡದಿದ್ದರೆ ಶೈಕ್ಷಣಿಕ ವರ್ಷ ನಷ್ಟವಾಗಲಿದೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.ಪ್ರತಿಕ್ರಿಯೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT