ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆ.ಪಿ.ನಡ್ಡಾ, ಬಿ.ಎಲ್. ಸಂತೋಷ್ ಭೇಟಿಯಾದ ಸುಮಲತಾ: ಮಂಡ್ಯ ಕ್ಷೇತ್ರದ ಬಗ್ಗೆ ಚರ್ಚೆ

Published 8 ಫೆಬ್ರುವರಿ 2024, 13:31 IST
Last Updated 8 ಫೆಬ್ರುವರಿ 2024, 13:31 IST
ಅಕ್ಷರ ಗಾತ್ರ

ನವದೆಹಲಿ: ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಂಡ್ಯ ಲೋಕಸಭಾ ಕ್ಷೇತ್ರದ ಕುರಿತಂತೆ ಮಾತುಕತೆ ನಡೆಸಿದ್ದಾರೆ.

ಈ ಕುರಿತಂತೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್‌. ಸಂತೋಷ್‌ ಅವರನ್ನು ಅನೌಪಚಾರಿಕವಾಗಿ ಇಂದು ಭೇಟಿ ಮಾಡಿ ಮಂಡ್ಯ ಕ್ಷೇತ್ರ ಹಾಗೂ ಲೋಕಸಭಾ ಚುನಾವಣೆ ಕುರಿತಂತೆ ಚರ್ಚಿಸಲಾಯಿತು ಎಂದು ಪೋಸ್ಟ್ ಮಾಡಿದ್ದಾರೆ.

ತಮ್ಮ ಅಮೂಲ್ಯ ಸಮಯವನ್ನು ನೀಡಿ, ನನ್ನ ಮಾತುಗಳನ್ನು ಆಲಿಸಿದ ನಡ್ಡಾ ಜೀ, ಸಂತೋಷ್ ಜೀ ಅವರಿಗೆ ಧನ್ಯವಾದಗಳು. ತಮ್ಮ ಸಹಕಾರದ ಮಾತುಗಳಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಸುಮಲತಾ ತಿಳಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿರುವ ಜೆಡಿಎಸ್‌, ಬಿಜೆಪಿ ಸಖ್ಯದೊಂದಿಗೆ ಚುನಾವಣೆಗೆ ಸಜ್ಜಾಗುತ್ತಿದೆ. ಮಂಡ್ಯ ಕ್ಷೇತ್ರವು ಜೆಡಿಎಸ್‌ಗೆ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕ್ಷೇತ್ರದಿಂದ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ದೆಹಲಿಮಟ್ಟದಲ್ಲಿ ಚರ್ಚೆಗಳು ನಡೆದಿದೆ ಎಂದು ವರದಿಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಸುಮಲತಾ, ಬಿಜೆಪಿ ಅಧ್ಯಕ್ಷರ ಭೇಟಿ ಕುತೂಹಲ ಮೂಡಿಸಿದೆ.

ಮಂಡ್ಯದಿಂದ ಮತ್ತೆ ಸ್ಪರ್ಧೆ: ಸಂಸದೆ ಸುಮಲತಾ

‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದಲೇ ಸ್ಪರ್ಧೆ ಖಚಿತ. ಈ ಕ್ಷೇತ್ರ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ’ ಎಂದು ಸಂಸದೆ ಸುಮಲತಾ ಇತ್ತೀಚೆಗೆ ಹೇಳಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಅವರು, ವಿಧಾನಸಭೆ ಚುನಾವಣೆಯ ಸಂದರ್ಭ ಬಿಜೆಪಿಯತ್ತ ವಾಲಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚನ್ನಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲೂ ಭಾಗಿಯಾಗಿದ್ದರು. ಅವರ ಅನೇಕ ಬೆಂಬಲಿಗರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

‘ಲೋಕಸಭೆ ಚುನಾವಣೆ ಸಂದರ್ಭ ಸುಮಲತಾ ಅವರೂ ಬಿಜೆಪಿ ಸೇರಲಿದ್ದು, ಪಕ್ಷದ ಅಭ್ಯರ್ಥಿಯಾಗಲಿದ್ದಾರೆ’ ಎನ್ನಲಾಗಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂಬ ಚರ್ಚೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT