ಬೆಂಗಳೂರು: ರಾಜ್ಯದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಕೇವಲ 2 ರಿಂದ 3 ಗಂಟೆಗಳಷ್ಟು ವಿದ್ಯುತ್ ಪೂರೈಕೆ ಮಾಡುತ್ತಿದ್ದು, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ಶಾಸಕ ವಿ.ಸುನಿಲ್‌ಕುಮಾರ್ ದೂರಿದ್ದಾರೆ.
ಅಲ್ಲದೇ, ಲೋಡ್ ಶೆಡ್ಡಿಂಗ್ ಮೂಲಕ ಇಡೀ ರಾಜ್ಯವನ್ನೇ ಕತ್ತಲೆಗೆ ದೂಡಲಾಗಿದೆ, ಜನಸಾಮಾನ್ಯರು ಪರಿತಪಿಸುವಂತಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಕಡಿಮೆ ವಿದ್ಯುತ್ ಪೂರೈಕೆ ಮಾಡುವ ಮೂಲಕ ಸಬ್ಸಿಡಿ ಹಣವನ್ನು ಉಳಿಸಿ, ಅದನ್ನು ಗೃಹ ಜ್ಯೋತಿ ಯೋಜನೆಗೆ ಬಳಸುವ ಹುನ್ನಾರ ನಡೆದಿದೆ. ಈ ಸರ್ಕಾರ ‘ಕತ್ತಲೆ ಕರ್ನಾಟಕ ಭಾಗ್ಯ’ ನೀಡುವುದು ಖಚಿತ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಆಗುತ್ತಿಲ್ಲ. ಇವೆರಡರಲ್ಲೂ ಸರ್ಕಾರ ವಿಫಲವಾಗಿದೆ. ಕತ್ತಲೆಯ ದಿನಗಳು ಶುರುವಾಗಿದ್ದು, ಇದು ಮುಂದೆ ಎಲ್ಲಿ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ ಎಂದರು.
ವಿದ್ಯುತ್ ಕೊರತೆ ಇರುವ ಕಾರಣದಿಂದಲೇ ಆಗಸ್ಟ್‌ನಲ್ಲಿ 593 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಿದೆ. ಪೂರ್ವ ಸಿದ್ಧತೆ ಇಲ್ಲದ ಕಾರಣ ಹೆಚ್ಚು ದರಕ್ಕೆ ವಿದ್ಯುತ್ ಖರೀದಿಸಲು ಮುಂದಾಗಿದೆ. ಪ್ರತಿ ಯೂನಿಟ್‌ಗೆ ₹8 ರಿಂದ ₹10.50 ರಂತೆ ಖರೀದಿಸಬೇಕಾಗಿದೆ. ಸರಿಯಾಗಿ ಸಿದ್ಧತೆ ಮಾಡಿಕೊಂಡಿದ್ದರೆ ₹3ರಿಂದ ₹5 ರ ದರದಲ್ಲಿ ಖರೀದಿಸಬಹುದಾಗಿತ್ತು ಎಂದು ಸುನಿಲ್‌ಕುಮಾರ್ ಹೇಳಿದರು.
ಕೃಷಿ, ಗೃಹ ಬಳಕೆ ಮಾತ್ರವಲ್ಲದೇ, ಕೈಗಾರಿಕೆಗಳಿಗೂ ವಿದ್ಯುತ್ ಕಡಿತದ ಬಿಸಿ ತಟ್ಟಿದೆ. ಇದರಿಂದ ಕೈಗಾರಿಕಾ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಉದ್ಯಮಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳನ್ನು ನಡೆಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.