ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತಾಗಿ ಟಿಬಿ ಔಷಧ ಪೂರೈಸಿ: ಕೇಂದ್ರ ಆರೋಗ್ಯ ಸಚಿವರಿಗೆ ದಿನೇಶ್ ಗುಂಡೂರಾವ್ ಮನವಿ

Published 27 ಮಾರ್ಚ್ 2024, 16:06 IST
Last Updated 27 ಮಾರ್ಚ್ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕಕ್ಕೆ ತುರ್ತಾಗಿ ಕ್ಷಯ ಔಷಧ (ಟಿಬಿ) ಅಗತ್ಯವಿದ್ದು, ಅದರ ಸರಬರಾಜಿಗೆ ಕ್ರಮವಹಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಅವರಿಗೆ ಮನವಿ ಮಾಡಿದ್ದಾರೆ. 

ಈ ಬಗ್ಗೆ ಅವರು ಪತ್ರ ಬರೆದಿದ್ದಾರೆ. ‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಕೇಂದ್ರವು ಮುಂದಿನ ಮೂರು ತಿಂಗಳಿಗೆ ಅಗತ್ಯವಾದ ಔಷಧಗಳನ್ನು ಸ್ಥಳೀಯವಾಗಿ ಖರೀದಿಸುವಂತೆ ಸೂಚಿಸಿದೆ. ಆದರೆ, ಸದ್ಯ ಅಗತ್ಯ ಪ್ರಮಾಣದಲ್ಲಿ ಔಷಧಗಳನ್ನು ಖರೀದಿಸಲು ರಾಜ್ಯಕ್ಕೆ ಕಷ್ಟಕರವಾಗಿದೆ’ ಎಂದು ತಿಳಿಸಿದ್ದಾರೆ.

‘2021ರಿಂದಲೂ ಕರ್ನಾಟಕಕ್ಕೆ ಟಿಬಿ ಔಷಧಗಳ ಪೂರೈಕೆಯಲ್ಲಿ ಆಗಾಗ ಸಮಸ್ಯೆ ಆಗುತ್ತಲೇ ಇದೆ. ಇದು ಸಾವಿರಾರು ಕ್ಷಯ ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ, ಇತ್ತೀಚೆಗೆ ಮುಂದಿನ ಮೂರು ತಿಂಗಳಿಗೆ ಔಷಧಗಳನ್ನು ಸ್ಥಳೀಯವಾಗಿ ಖರೀದಿಸುವಂತೆ ರಾಜ್ಯಕ್ಕೆ ಎರಡು ಬಾರಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ನೀತಿ ಸಂಹಿತೆ ಜಾರಿಗೆ ಬಂದ ನಂತರ ಎರಡನೇ ಬಾರಿ ಈ ರೀತಿ ಸೂಚಿಸಲಾಗಿದೆ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

‘ಕರ್ನಾಟಕವು ತಿಂಗಳಿಗೆ 6,800 ರೋಗಿಗಳಂತೆ ವಾರ್ಷಿಕ 80 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ನಿರಂತರ ಚಿಕಿತ್ಸೆ ನೀಡಬೇಕಾಗಿದೆ. ಹಾಗಾಗಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಟಿಬಿ  ಔಷಧಗಳನ್ನು ಖರೀದಿಸಲು ರಾಜ್ಯ ಸರ್ಕಾರವು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದು, ಔಷಧಗಳ ಖರೀದಿಗೆ ಹಣಕಾಸು ಇಲಾಖೆ ಹೆಚ್ಚುವರಿ ಹಣ ನೀಡಲಿದೆ’ ಎಂದು ತಿಳಿಸಿದ್ದಾರೆ.

‘ಈ ಔಷಧಗಳು ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಲಭ್ಯವಿಲ್ಲ. ಅದರ ಉತ್ಪಾದನಾ ಪ್ರಕ್ರಿಯೆಯಲ್ಲಿನ ಸಮಸ್ಯೆಯಿಂದ ಖರೀದಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದಿಲ್ಲ. ಹಾಗಾಗಿ, ಕೇಂದ್ರ ಸರ್ಕಾರವು ತಕ್ಷಣವೇ ಪ್ರತಿಕ್ರಿಯಿಸಬೇಕು. ಟಿಬಿ ರೋಗಿಗಳಿಗೆ ಅಗತ್ಯವಿರುವ ಔಷಧಗಳನ್ನು ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT