ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಂದು ತಲಕಾವೇರಿಗೆ ಆಭರಣ ಮೆರವಣಿಗೆ

ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಯು. ಮೋಟಯ್ಯ ಹೇಳಿಕೆ
Last Updated 30 ಸೆಪ್ಟೆಂಬರ್ 2020, 13:27 IST
ಅಕ್ಷರ ಗಾತ್ರ

ಮಡಿಕೇರಿ: ಭಾಗಮಂಡಲ-ತಲಕಾವೇರಿ ಧಾರ್ಮಿಕ ಕ್ಷೇತ್ರಗಳಲ್ಲಿನ ಜಾತ್ರಾ ದೈವಿಕ ಸಂಪ್ರದಾಯಗಳು ಕೋಡಿ ಮತ್ತು ಬಳ್ಳಡ್ಕ ಕುಟುಂಬಗಳ ತಕ್ಕರ ಆಜ್ಞೆಯಂತೆ ನಡೆಯುತ್ತಿವೆ. ಇದಕ್ಕೆ ಬೇರೆ ಜನರ ಹಸ್ತಕ್ಷೇಪ ಇರುವುದಿಲ್ಲ ಎಂದು ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಯು. ಮೋಟಯ್ಯ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಭಾಗಮಂಡಲ ದೇವಾಲಯದಲ್ಲಿ ಸೆ.26ರಂದು ಬಳ್ಳಡ್ಕ ತಕ್ಕರು ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ತುಲಾ ಸಂಕ್ರಮಣ ಜಾತ್ರೆಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಅ.4ರಂದು ಗೊನೆ ಕಡಿಯುವ ಮೂಲಕ ಅಧಿಕೃತ ಉತ್ಸವದ ಕಟ್ಟಾಜ್ಞೆ ಆರಂಭವಾಗುತ್ತದೆ. ಅಂದು ಬಳ್ಳಡ್ಕ ತಕ್ಕರು ಭಗಂಡೇಶ್ವರ ದೇವಸ್ಥಾನದ ನಡೆಯಲ್ಲಿ ನಿಂತು ಭಾಗಮಂಡಲದ ಸುತ್ತಲಿನ ಭಾಗಮಂಡಲ, ತಾವೂರು, ತಣ್ಣಮಾನಿ, ಕೋರಂಗಾಲ ಮತ್ತು ಚೇರಂಗಾಲದ 5 ಗ್ರಾಮಸ್ಥರು, ಜನರು ಪ್ರಾಣಿ ಹಿಂಸೆ ಮಾಡುವಂತಿಲ್ಲ. ಮದುವೆ ಸಮಾರಂಭಗಳನ್ನು ನಡೆಸುವಂತಿಲ್ಲ. ಗಾಮಸ್ಥರೆಲ್ಲ ಈ ಸಂಪ್ರದಾಯಗಳನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಅ.15ರಂದು ಭಗಂಡೇಶ್ವರ ದೇವಸ್ಥಾನದಿಂದ ಬಳ್ಳಡ್ಕ ತಕ್ಕರು ತಲಕಾವೇರಿ ದೇವರ ಆಭರಣಗಳನ್ನು ಕೋಡಿ ತಕ್ಕರಿಗೆ ವಹಿಸುವುದರೊಂದಿಗೆ ಅಂದಿನಿಂದ ಬಳ್ಳಡ್ಕ ತಕ್ಕರು ಭಗಂಡೇಶ್ವರ ದೇವಸ್ಥಾನದಲ್ಲಿ ಮತ್ತು ಕೋಡಿ ತಕ್ಕರು ತಲಕಾವೇರಿ ದೇವಸ್ಥಾನದಲ್ಲಿ ಕಿರು ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ವಾಸ್ತವ್ಯ ಮಾಡುತ್ತಾರೆ. ತೀರ್ಥೋದ್ಭವದ ಒಂದು ಗಂಟೆಗೆ ಮೊದಲು ಬಳ್ಳಡ್ಕ ತಕ್ಕರು ಭಗಂಡೇಶ್ವರ ದೇವಾಲಯದಿಂದ ಆಭರಣ, ತೀರ್ಥ ಬಿಂದಿಗೆ ಕಟ್ಟಿಗೆಯವರೊಂದಿಗೆ ಹೋಗಿ ಕಾವೇರಿ ಮಾತೆಗೆ ಆಭರಣವನ್ನು ಕೊಟ್ಟಾಗ ಕೋಡಿ ತಕ್ಕರು ಮಾತೆ ಕಾವೇರಿಗೆ ಆಭರಣ ತೊಡಿಸುತ್ತಾರೆ. ತೀರ್ಥ ಬರುವ ಮೊದಲು ಕೋಡಿ ತಕ್ಕರು ತಮ್ಮ ಮನೆಯಿಂದ ಆಗ ಕರೆದ ಹಸುವಿನ ಹಾಲನ್ನು ತಂದು ಕುಂಡಿಗೆಗೆ ಹಾಕುತ್ತಾರೆ. ಕೊಬ್ಬರಿ ಕಾಯಿಯಲ್ಲಿ ಹಸುವಿನ ತುಪ್ಪದಲ್ಲಿ ಕುಂಡಿಕೆಯ ಬಳಿ ದೀಪ ಹಚ್ಚುತ್ತಾರೆ ಎಂದರು.

ಸಂಪ್ರದಾಯಗಳು ಶತಮಾನಗಳಿಂದ ನಡೆದು ಬರುತ್ತಿದ್ದು ಕಳೆದ 26ರಂದು ಪತ್ತಾಯಕ್ಕೆ ಅಕ್ಕಿ ಹಾಕಿದ ಸಂದರ್ಭದಲ್ಲಿ ಅರಿವಿನ ಕೊರತೆಯಿಂದ ಕೆಲವರಿಂದ ಗೊಂದಲವಾಗಿದೆ. ಇದಕ್ಕೆ ಮುಂದೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಲಕಾವೇರಿ ಕ್ಷೇತ್ರದ ಬಗ್ಗೆ ನಾವು ನಮ್ಮ ಕಾರ್ಯ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸಂಪ್ರದಾಯದ ಅನುಸರಣೆಯನ್ನು‌ ನಾವು ಮಾಡುತ್ತಿದ್ದೇವೆ ಎಂದರು.

ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಸಿ. ಅಪ್ಪಾಜಿ, ಪ್ರಮುಖರಾದ ಕೋಡಿ ಕೇಶವ, ಬಳ್ಳಡ್ಕ ಮುದ್ದಪ್ಪ, ಬಳ್ಳಡ್ಕ ಮೋಹನ್ ಕುಮಾರ್, ಕೋಡಿ ನಿರ್ಮಲಾನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT