ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಗುತ್ತಿಗೆ ಆಧಾರದ ಮೇಲೆ ಇ.ಒ ನೇಮಕ!

ಹೂವಿನಹಡಗಲಿ: ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಜೆಸ್ಕಾಂ ಎಇಇ
Last Updated 29 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಪಂಚಾಯಿತಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಾಹಕ ಅಧಿಕಾರಿಯನ್ನು (ಇ.ಒ) ನೇಮಿಸಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಆದೇಶ ಹೊರಡಿಸಿದೆ.

ತಾಲ್ಲೂಕೊಂದರ ಪ್ರಮುಖ ಹುದ್ದೆಗೆ ಒಪ್ಪಂದದ ಮೇಲೆ ಅಧಿಕಾರಿಯನ್ನು ನೇಮಕ ಮಾಡಿದ್ದು ಇದೇ ಮೊದಲು ಎನ್ನಲಾಗಿದ್ದು, ಸರ್ಕಾರದ ಈ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ಜಿಲ್ಲೆಯ ಹಗರಿಬೊಮ್ಮನಹಳ್ಳಿ ಜೆಸ್ಕಾಂ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎಸ್‌. ಪ್ರಕಾಶ್‌ ಅವರನ್ನು ಹಡಗಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿ ಆ. 25ರಂದು ಸರ್ಕಾರ ಆದೇಶ ಹೊರಡಿಸಿದೆ. ಪ್ರಕಾಶ್‌ ಅವರು ಇನ್ನಷ್ಟೇ ಅಧಿಕಾರ ಸ್ವೀಕರಿಸಬೇಕು. ಸರ್ಕಾರದ ಆದೇಶ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಆ ದರ್ಜೆಯ ಅಧಿಕಾರಿಯನ್ನೇ ನೇಮಿಸಬೇಕು. ಅದೇ ದರ್ಜೆಯ ಅಧಿಕಾರಿ ಬರುವವರೆಗೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಅಥವಾ ಅದೇ ತಾಲ್ಲೂಕಿನ ಪ್ರಮುಖ ಇಲಾಖೆಯೊಂದರ ಹಿರಿಯ ಅಧಿಕಾರಿಯನ್ನು ನಿಯೋಜಿಸಬಹುದು. ಆದರೆ, ಸರ್ಕಾರವೇ ನಿಯಮಕ್ಕೆ ವಿರುದ್ಧವಾಗಿ ನೇಮಕ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕಿನಲ್ಲಿ 29 ಇಲಾಖೆಗಳ ಆಡಳಿತ ನೋಡಿಕೊಳ್ಳುವುದು, ಪಿ.ಡಿ.ಒ, ಬಿಲ್‌ ಕಲೆಕ್ಟರ್‌ಗಳ ವೇತನ ಬಿಡುಗಡೆ, ಬಿಲ್‌ಗಳ ವಿಲೇವಾರಿಗೆ ಸಹಿ ಮಾಡುವ ಅಧಿಕಾರ ಹೊಂದಿರುತ್ತಾರೆ. ಗ್ರಾಮ ಪಂಚಾಯಿತಿ
ಗಳ ಮೇಲ್ವಿಚಾರಣೆಯ ಅಧಿಕಾರವೂ ಇರುತ್ತದೆ. ಇಂಥ ಮಹತ್ವದ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನೇಮಕ ಮಾಡಿದ್ದು ಎಷ್ಟು ಸರಿ? ಕೂಡಲೇ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು ಎಂಬ ಹಕ್ಕೊತ್ತಾಯ ಕೇಳಿ ಬಂದಿದೆ.

ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿಮೆ ಸಂಖ್ಯೆ (ಕೆ.ಜಿ.ಐ.ಡಿ.) ಇರುತ್ತದೆ. ಆ ವಿಮೆ ಸಂಖ್ಯೆ ಆಧರಿಸಿ ಹಣಕಾಸಿನ ವಹಿವಾಟು, ಖಜಾನೆ ಇಲಾಖೆಯಲ್ಲಿ ಡಿಜಿಟಲ್‌ ಸಹಿ, ಬಿಲ್‌ ಪಾಸ್‌ ಮಾಡುವ ಅಧಿಕಾರ ಹೊಂದಿರುತ್ತಾರೆ. ಆದರೆ, ಡಮ್ಮಿ ಕೆ.ಜಿ.ಐ.ಡಿ. ಸಂಖ್ಯೆ ಸೃಷ್ಟಿಸಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ, ಮರು ಆದೇಶ ಹೊರಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಒಂದು ವೇಳೆ ಹಣಕಾಸಿನ ಅವ್ಯವಹಾರ ನಡೆದರೆ ಯಾರು ಹೊಣೆ? ಸರ್ಕಾರದ ಪ್ರಮುಖ ಇಲಾಖೆಯ ಪ್ರಮುಖ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿದರೆ ಇದು ಇತರೆ ಇಲಾಖೆಗಳಿಗೂ ವಿಸ್ತರಿಸುವ ಆತಂಕ ಪಂಚಾಯತ್‌ ರಾಜ್‌ ಇಲಾಖೆಯ ನೌಕರರನ್ನು ಕಾಡುತ್ತಿದೆ.

ಈ ಸಂಬಂಧ ಪಂಚಾಯತ್‌ ರಾಜ್‌ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಾಲಪ್ಪ ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT