ಬೆಂಗಳೂರು: ‘ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇರುವುದನ್ನು ಲೆಕ್ಕಿಸದೇ, ಕಾವೇರಿ ಜಲ ನ್ಯಾಯಮಂಡಳಿ ಆದೇಶವನ್ನೂ ಉಲ್ಲಂಘಿಸಿ ತಮಿಳುನಾಡು ತನ್ನ ರಾಜ್ಯದ ಕುರುವೈ ಬೆಳೆಗೆ ದುಪ್ಪಟ್ಟು ನೀರು ಹರಿಸಿದೆ. ಆದರೆ, ನಮ್ಮ ಅಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸದೇ ಇರುವುದರಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಿದೆ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.
‘ಈಗ ನಮ್ಮ ನಾಲ್ಕು ಅಣೆಕಟ್ಟೆಗಳಲ್ಲಿ ಇರುವ ನೀರಿನ ಮಟ್ಟ ಬೆಂಗಳೂರು ನಗರ, ಕಾವೇರಿ ಜಲಾನಯನ ಪ್ರದೇಶದ ನಗರ ಮತ್ತು ಗ್ರಾಮಗಳ ಕುಡಿಯುವ ನೀರಿಗೆ ಕೊರತೆಯಾಗುತ್ತದೆ. ಅದೇ ರೀತಿ ಕಾವೇರಿ ಜಲಾನಯನ ಪ್ರದೇಶದ ಹಿಂಗಾರು ಬೆಳೆಗಳಿಗೆ ನೀರಿನ ಕೊರತೆ ಆಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಲು ಮುಂದಾದರೆ ಕರ್ನಾಟಕದ ಜನತೆ ಮತ್ತು ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದ್ದಾರೆ.
‘ಕರ್ನಾಟಕದಿಂದ ನೀರು ಬಿಡಿಸಲು ತಮಿಳುನಾಡು ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಬಹುದು ಎಂಬ ಮಾಹಿತಿ ಮಾಧ್ಯಮದಲ್ಲಿ ಬಂದಿದೆ. ಈ ವಿಚಾರದಲ್ಲಿ ಸರ್ಕಾರ ವಾಸ್ತವಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು’ ಎಂದು ಬೊಮ್ಮಾಯಿ ಸಲಹೆ ನೀಡಿದ್ದಾರೆ.
‘ಜೂನ್ 1 ರಂದು ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಒಟ್ಟು 24.352 ಟಿಎಂಸಿ ಅಡಿ ನೀರಿತ್ತು. ಅದೇ ವೇಳೆ ಮೆಟ್ಟೂರು ಜಲಾಶಯದಲ್ಲಿ 69.77 ಟಿಎಂಸಿ, ಭವಾನಿ ಸಾಗರದಲ್ಲಿ 16.653 ಟಿಎಂಸಿ ಅಡಿ ಇತ್ತು. ಬಿಳಿಗುಂಡ್ಲು ಮಾಪನ ಕೇಂದ್ರದಿಂದ ಆಗಸ್ಟ್ 6 ಕ್ಕೆ ರಾಜ್ಯದಿಂದ 14.054 ಟಿಎಂಸಿ ಅಡಿ ನೀರು ಹರಿದು ಹೋಗಿದೆ. ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಗೆ ಈ ವರ್ಷ 83.831 ಟಿಎಂಸಿ ಅಡಿ ನೀರು ಹರಿದಿದೆ’ ಎಂದರು.
‘ತಮಿಳುನಾಡು ಒಂದು ವರ್ಷದಲ್ಲಿ 1.80 ಲಕ್ಷ ಎಕರೆ ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆಯಬೇಕು ಮತ್ತು ಇದಕ್ಕೆ 32 ಟಿಎಂಸಿ ನೀರು ಮಾತ್ರ ಬಳಸಬೇಕು ಎಂಬ ನಿರ್ಬಂಧವಿದೆ. ಆದರೆ, ತಮಿಳುನಾಡು ಆಗಸ್ಟ್ 7 ಕ್ಕೆ 60.97 ಟಿಎಂಸಿ ಅಡಿ ನೀರನ್ನು ಕುರುವೈ ಬೆಳೆಗೆ ಬಳಕೆ ಮಾಡಿದೆ. ನಿಗದಿಯಾದ ಪ್ರದೇಶಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆಗೆ ನೀರು ಬಳಸಿದೆ. ಇದು ಕಾವೇರಿ ಜಲ ನ್ಯಾಯಮಂಡಳಿಯ ಆದೇಶಕ್ಕಿಂತ ದುಪ್ಪಟ್ಟು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ತಮಿಳುನಾಡಿಗೆ ನೈಋತ್ಯ ಮತ್ತು ಈಶಾನ್ಯ ಮಳೆ ಆಗುತ್ತಿರುವುದರಿಂದ ನಮಗೆ ನೀರು ಬಿಡಲು ಸಾಧ್ಯವಿಲ್ಲ. ಈ ವಾಸ್ತವಾಂಶದ ಮೇಲೆ ರಾಜ್ಯ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಮತ್ತು ಕಾವೇರಿ ಜಲಾನಯನ ಪ್ರದೇಶದ ನೀರಿನ ಹಿತಾಸಕ್ತಿಯನ್ನು ಕಾಪಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.