ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಾಗೃಹ ಕೈದಿಗಳಿಗೆ ‘ಟೆಲಿ ಮೆಡಿಸಿನ್’: ಆರೋಗ್ಯ ಇಲಾಖೆ ಸಿದ್ಧತೆ

ಇ–ಸಂಜೀವಿನಿ ಯೋಜನೆಯಡಿ ವೈದ್ಯಕೀಯ ಸೇವೆಗೆ ಆರೋಗ್ಯ ಇಲಾಖೆ ಸಿದ್ಧತೆ
Published 23 ಜೂನ್ 2024, 20:21 IST
Last Updated 23 ಜೂನ್ 2024, 20:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ ಕೈದಿಗಳು ಎದುರಿಸುವ ಮಾನಸಿಕ ಸಮಸ್ಯೆ, ಹೃದ್ರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ‘ಟೆಲಿ ಮೆಡಿಸಿನ್’ ವ್ಯವಸ್ಥೆಯಡಿ ಪರಿಹಾರ ಕಲ್ಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಈ ವ್ಯವಸ್ಥೆಯಡಿ ಕಾಲಕಾಲಕ್ಕೆ ತಜ್ಞ ವೈದ್ಯರ ಸಲಹೆ ಸೂಚನೆಗಳು ಕೈದಿಗಳಿಗೂ ದೊರೆಯಲಿವೆ. 

ಟೆಲಿ ಮೆಡಿಸಿನ್ ಸೇವೆ ಪ್ರಾರಂಭಕ್ಕೆ ಸಂಬಂಧಿಸಿದಂತೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ಆರೋಗ್ಯ ಇಲಾಖೆಗೆ ಈ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಹೀಗಾಗಿ, ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಇ-ಸಂಜೀವಿನಿ ಯೋಜನೆಯಡಿ ಕಾರಾಗೃಹಗಳಲ್ಲಿ ಈ ಸೇವೆ ಒದಗಿಸಲು ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಕಾರಾಗೃಹಗಳಲ್ಲಿ ಸುರಕ್ಷತೆಯನ್ನು ಖಾತರಿಪಡಿಸಿಕೊಂಡು, ಇಂಟರ್ನೆಟ್‌ ವ್ಯವಸ್ಥೆ ಕಲ್ಪಿಸಿದ ಬಳಿಕ ಈ ಸೇವೆಯನ್ನು ಪ್ರಾರಂಭಿಸಲು ಇಲಾಖೆ ಮುಂದಾಗಿದೆ. 

ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಪ್ರಾಯೋಗಿಕವಾಗಿ ಈ ಸೇವೆ ಪರಿಚಯಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಸೇವೆ ಒದಗಿಸಲಾಗುತ್ತಿದೆ. ಮೊದಲ ಹಂತದಲ್ಲಿ ಜಿಲ್ಲಾ ಕಾರಾಗೃಹಗಳಲ್ಲಿ ಈ ಸೇವೆ ಪ್ರಾರಂಭವಾಗಲಿದ್ದು, ಅಲ್ಲಿ ಸಿಗುವ ಸ್ಪಂದನ ಆಧರಿಸಿ ತಾಲ್ಲೂಕು ಕಾರಾಗೃಹಗಳಿಗೆ ವ್ಯವಸ್ಥೆ ವಿಸ್ತರಿಸಲು ಇಲಾಖೆ ಯೋಜನೆ ರೂಪಿಸಿದೆ. ಈ ವ್ಯವಸ್ಥೆಯಿಂದ ಕೈದಿಗಳಿಗೆ ತಜ್ಞ ವೈದ್ಯರ ಸೇವೆ ಎಲ್ಲ ಸಮಯದಲ್ಲಿ ದೊರೆಯಲಿದೆ. 

ಸೇವೆ ಸುಲಭ: ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಟೆಲಿ ಮೆಡಿಸಿನ್ ವ್ಯವಸ್ಥೆ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ಕಾರಾಗೃಹದಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿದ ಬಳಿಕ, ಇ ಸಂಜೀವಿನಿ ಒಪಿಡಿ ಪೋರ್ಟಲ್‌ ಮೂಲಕ ವೈದ್ಯರನ್ನು ಸಂಪರ್ಕಿಸಲು ಗುರುತಿನ ಸಂಖ್ಯೆಯನ್ನು ಒದಗಿಸಲಾಗುತ್ತದೆ. ಇದರ ನೆರವಿನಿಂದ ಲಾಗ್‌ ಇನ್‌ ಆದಲ್ಲಿ ರೋಗಿಗಳ ಮಾಹಿತಿ ನಮೂದಿಸಿ, ದೂರವಾಣಿ ಕರೆ ಅಥವಾ ವಿಡಿಯೊ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಲಾಗುತ್ತದೆ. ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 25 ಸಾವಿರ ಮಂದಿ ಈ ವ್ಯವಸ್ಥೆಯಡಿ ಸಮಾಲೋಚನೆಗೆ ಒಳಗಾಗುತ್ತಿದ್ದಾರೆ. 

‘ಈ ವ್ಯವಸ್ಥೆಯಡಿ ವೈದ್ಯಕೀಯ ಸೇವೆ ಸುಲಭವಾಗಿ ದೊರೆಯುತ್ತದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದೆ. ರೋಗಿಗಳು ನೋಂದಣಿ ಮಾಡಿಕೊಂಡ ಬಳಿಕ ಟೋಕನ್ ಲಭ್ಯವಾಗುತ್ತದೆ. ಬಳಿಕ ಆಡಿಯೊ ಅಥವಾ ವಿಡಿಯೊ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ, ಸಮಾಲೋಚನೆ ನಡೆಸಬಹುದಾಗಿದೆ. ಎಸ್‌ಎಂಎಸ್ ಅಥವಾ ಇ ಮೇಲ್ ಮೂಲಕ ಔಷಧ ಚೀಟಿಯನ್ನು ಒದಗಿಸಲಾಗುತ್ತದೆ’ ಎಂದು ಹೆಸರು ಬಹಿರಂಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. 

ಕಾರಾಗೃಹಗಳಲ್ಲಿ ಜಾಮರ್ ಅಳವಡಿಸಿರುವುದರಿಂದ ಇಂಟರ್ನೆಟ್‌ ಲಭ್ಯವಾಗುತ್ತಿಲ್ಲ. ಈ ಸಮಸ್ಯೆ ನಿವಾರಣೆಯಾದ ಬಳಿಕ ಕೈದಿಗಳಿಗೆ ಟೆಲಿ ಮೆಡಿಸಿನ್ ಸೇವೆ ಕಲ್ಪಿಸಲಾಗುತ್ತದೆ. ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

।ಡಿ. ರಂದೀಪ್ ಆರೋಗ್ಯ ಇಲಾಖೆ ಆಯುಕ್ತ

38 ಆಸ್ಪತ್ರೆಗಳಿಂದ ಸೇವೆ

ಈ ವ್ಯವಸ್ಥೆಯು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ನಡೆಯಲಿದ್ದು ಜಯದೇವ ಹೃದ್ರೋಗ ಆಸ್ಪತ್ರೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿಮ್ಹಾನ್ಸ್ ಸೇರಿ ರಾಜ್ಯದ 38 ಪ್ರಮುಖ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳು ಕಾರ್ಯಾಚರಣೆ ಕೇಂದ್ರಗಳಾಗಿ (ಹಬ್) ಕಾರ್ಯನಿರ್ವಹಿಸುತ್ತಿವೆ. ಈ ಆಸ್ಪತ್ರೆಗಳ ವೈದ್ಯರ ನೆರವಿನಿಂದಲೇ ಕೈದಿಗಳಿಗೂ ಟೆಲಿ ಮೆಡಿಸಿನ್ ಸೇವೆ ನೀಡಲಾಗುತ್ತದೆ.  ‘ನಾಲ್ಕು ವರ್ಷಗಳಿಂದ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಟೆಲಿ ಮೆಡಿಸಿನ್ ಸೇವೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಟೆಲಿ ಮೆಡಿಸಿನ್ ಸೇವೆ ದೊರೆಯುತ್ತಿದೆ’ ಎಂದು ಇಲಾಖೆಯ ಅಧಿಕಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT