ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ: ಕುಟುಂಬದ ಆಡುಂಬೊಲ ಯುವಶಕ್ತಿಗಿಲ್ಲ ಬಲ

Last Updated 31 ಮಾರ್ಚ್ 2023, 19:00 IST
ಅಕ್ಷರ ಗಾತ್ರ

ಬೆಂಗಳೂರು: ಅಡ್ಡದಾರಿಯಲ್ಲಿ ಗಳಿಸಿದ ಅಪಾರ ದುಡ್ಡು, ಬೆನ್ನಿಗೆ ನಿಲ್ಲುವ ಜಾತಿಕಾರಣ, ಅಪ್ಪನ ಬೆಳೆಸಿದ ವಂಶ ರಾಜಕಾರಣದ ಆಲದಮರದ ಕಡು ನೆರಳು ರಾಜಕೀಯವನ್ನು ವ್ಯಾಪಿಸಿದೆ. ಈ ಪ್ರಭಾವಳಿಗಳಲ್ಲದೇ ರಾಜಕೀಯ ಏಣಿ ಏರಿ ವಿಧಾನಸೌಧದ ಮೆಟ್ಟಿಲು ಹತ್ತುವುದೇ ಕಷ್ಟಕರವಾಗಿರುವ ಈ ದಿನಗಳಲ್ಲಿ ರಾಜಕೀಯ ವಂಶವಾಹಿ ಇಲ್ಲದ ಬಿಸಿರಕ್ತದ ಹೊಸ ತಲೆಮಾರು ಚುನಾವಣೆಯಲ್ಲಿ ಸ್ಪರ್ಧಿಸುವುದೇ ದುಸ್ಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ.

‘ಹೊಸ ನೆತ್ತರು ಉಕ್ಕಿ ಆರಿಹೋಗುವ ಮುನ್ನ. . ಕಟ್ಟುವೆವು ನಾವು ಹೊಸ ನಾಡೊಂದು ರಸದ ಬೀಡೊಂದನು’ ಎಂಬ ಕವಿ ಮಾತು ಬದಿಗೆ ಸರಿದಿದ್ದು, ರಾಜಕೀಯವಾಗಿ ಬೆಳೆದ ನಿಂತ ಕುಟುಂಬದವರಿಗಷ್ಟೇ ಚುನಾವಣೆ ಆಡುಂಬೊಲವಾಗಿದೆ. ಕುಟುಂಬ ರಾಜಕಾರಣ ಎಲ್ಲೆ ಮೀರಿ, ಯುವರಕ್ತ ಹರಿದು ಬರುವುದೇ ವಿರಳ ಎಂಬ ಸ್ಥಿತಿ ಬಂದೊದಗಿದೆ.

ಕೆಲವರಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಲು ಆಸಕ್ತಿ ಇದೆ. ಜಾತಿ, ಹಣ, ಕುಟುಂಬ ರಾಜಕಾರಣ ಹಾಗೂ ಮಾರ್ಗ ಯಾವುದಾದರೂ ಇರಲಿ ಗೆಲುವೇ ಮುಖ್ಯ, ಅಧಿಕಾರದ ಗದ್ದುಗೆ ಏರಲೇಬೇಕು ಎನ್ನುವ ರಾಜಕೀಯ ಪಕ್ಷಗಳ ಧೋರಣೆಗಳು ಅಡ್ಡಿಯಾಗಿವೆ. ಹಲವು ಯವಕ, ಯುವತಿಯರು ಹತ್ತುಹಲವು ವರ್ಷಗಳು ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದರೂ, ಸಣ್ಣಪುಟ್ಟ ಸ್ಥಾನಮಾನಗಳಲ್ಲೇ ತೃಪ್ತಿಪಟ್ಟುಕೊಂಡಿದ್ದಾರೆ. ಇಂತಹ ವ್ಯವಸ್ಥೆಯಿಂದ ಭ್ರಮನಿರಸನಗೊಂಡಿರುವ ಯುವಜನರು ರಾಜಕೀಯ ಕ್ಷೇತ್ರದಿಂದಲೇ ವಿಮುಖರಾಗುತ್ತಿದ್ದಾರೆ.

‘ರಾಷ್ಟ್ರೀಯ ಪಕ್ಷವೊಂದರ ಕೊಂಡಿಯಾಗಿರುವ ವಿದ್ಯಾರ್ಥಿ ಸಂಘಟನೆಯಲ್ಲಿ ಎರಡು ದಶಕ ಕೆಲಸ ಮಾಡಿರುವೆ. ನೂರಾರು ಹೋರಾಟದ ಮೂಲಕ ನಾಯಕನಾಗಿ ಬೆಳೆದೆ. ವಿದ್ಯಾರ್ಥಿಗಳ ಮತಬ್ಯಾಂಕ್‌ ಅನ್ನು ಮಾತೃಪಕ್ಷಕ್ಕೆ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೋರಾಟ, ಸಂಘಟನೆ, ಸಂಘರ್ಷದ ಫಲವಾಗಿ ಹತ್ತುಹಲವು ಪ್ರಕರಣಗಳು ದಾಖಲಾದರೂ ಎದೆಗುಂದದೆ ನ್ಯಾಯಾಲಯಗಳಿಗೆ ಅಲೆದೆ. ಅದೊಂದು ದಿನ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡಬೇಕು ಎನ್ನುವ ವಿಚಾರ ಮುಂದಿಟ್ಟೆ. ಟಿಕೆಟ್‌ ಕೊಡಲು ನಿರಾಕರಿಸಿದರು. ಪಕ್ಷ ಅಧಿಕಾರಕ್ಕೆ ಬಂದರೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದರು. ಇಂದಿಗೂ ನೀಡುತ್ತಲೇ ಇದ್ದಾರೆ’ ಎನ್ನುತ್ತಾರೆ
ರಾಷ್ಟ್ರೀಯ ಪಕ್ಷವೊಂದರ ವಿದ್ಯಾರ್ಥಿ ಸಂಘಟನೆಯಲ್ಲಿ ಉನ್ನತ ಸ್ಥಾನಕ್ಕೇರಿದ ವಿದ್ಯಾರ್ಥಿ ನಾಯಕ.

‘ನೀನು ಬಯಸುತ್ತಿರುವ ಕ್ಷೇತ್ರದಲ್ಲಿ ನಿನ್ನ ಜಾತಿಯ ಜನರ ಸಂಖ್ಯೆ ಅತ್ಯಂತ ಕಡಿಮೆ. ಅಲ್ಲದೇ, ಎದುರಾಳಿ ಪಕ್ಷದ ಹಾಲಿ ಶಾಸಕರ ಹಣ ಬಲ ಎದುರಿಸುವ ಸಾಮರ್ಥ್ಯವೂ ನಿನಗಿಲ್ಲ. ನಮ್ಮ ಪಕ್ಷದಿಂದ ಹಿಂದೆ ಗೆಲುವು ಕಂಡಿದ್ದ ಮಾಜಿ ಸಚಿವರ ಪುತ್ರನಿಗೆ ಟಿಕೆಟ್‌ ನೀಡಬೇಕು ಎನ್ನುವುದು ಹೈಕಮಾಂಡ್‌ ನಿರ್ಧಾರ’ ಎನ್ನುವುದು ನಮ್ಮ ಪಕ್ಷದ ನಾಯಕರು ಹೇಳಿದ ಮಾತು ಎಂದು ಟಿಕೆಟ್‌ ನಿರಾಕರಣೆಯ ಕಾರಣಗಳನ್ನು ಅವರು ಬಿಚ್ಚಿಟ್ಟರು.

ಅದೊಂದು ಕಾಲವಿತ್ತು. ಚಳವಳಿಗಳಲ್ಲಿ ಗುರುತಿಸಿಕೊಂಡವರು, ವಿದ್ಯಾರ್ಥಿ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಸಮಾಜ ಸೇವೆಗೆ ಜೀವನ ಮುಡಿಪಾಗಿಟ್ಟವರು ರಾಜಕೀಯದಲ್ಲೂ ಬಹುಬೇಗ ನಾಯಕರಾಗಿ ಬೆಳೆಯುತ್ತಿದ್ದರು. ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಶಾಂತವೇರಿ ಗೋಪಾಲಗೌಡರು ತಮ್ಮ 29ನೇ ವಯಸ್ಸಿಗೆ ವಿಧಾನಸಭೆ ಪ್ರವೇಶಿಸಿದ್ದರು. ಬಡತನದಲ್ಲೇ ಹುಟ್ಟಿ ಬೆಳೆದಿದ್ದ ಅವರಿಗೆ ಜನರೇ ಚುನಾವಣಾ ಪ್ರಚಾರದ ವೆಚ್ಚಕ್ಕೆ ಹಣ ನೀಡುತ್ತಿದ್ದರು. ರಾಜಕೀಯ ಹಿನ್ನೆಲೆ ಇಲ್ಲದ ಎಸ್‌.ಬಂಗಾರಪ್ಪ, ಬಿ.ಎಸ್‌.ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ, ಎಚ್‌.ಡಿ.ದೇವೇಗೌಡ, ಪಿ.ಜಿ.ಆರ್.ಸಿಂಧ್ಯ ಸೇರಿದಿಂತೆ ನೂರಾರು ಯುವಕರು ಅಂದು ‘ಗಾಡ್‌ ಫಾದರ್‌’ಗಳ ನೆರವಿಲ್ಲದೆ ತತ್ವ, ಸಿದ್ಧಾಂತ, ಹೋರಾಟ, ಸಂಘಟನೆಗಳ ಆಧಾರದಲ್ಲೇ ಅಂದು ವಿಧಾನಸಭೆ ಪ್ರವೇಶಿಸಿದ್ದರು.

ಕಾಂಗ್ರೆಸ್, ಬಿಜೆಪಿ, ಜನತಾ ಪರಿವಾರ ಸೇರಿದಂತೆ ಹಲವು ಪಕ್ಷಗಳ ಬಹುತೇಕ ಮುಖಂಡರು ಅಂತಹ ಅವಕಾಶಗಳ ಫಲವಾಗಿಯೇ ರಾಜಕಾರಣದ ಅಧಿಕಾರದ ಗದ್ದುಗೆ ಏರಿದ್ದಾರೆ. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ತಮ್ಮ ಸಾಮರ್ಥ್ಯದಿಂದ ಮೇಲೆ ಬಂದವರು ತಮ್ಮ ಮಕ್ಕಳು, ಕುಟುಂಬದ ಸದಸ್ಯರನ್ನೇ ಭವಿಷ್ಯದ ರಾಜಕಾರಣಗಳನ್ನಾಗಿ ರೂಪಿಸುತ್ತಿದ್ದಾರೆ. 75 ವರ್ಷಗಳಾದವರು ಅಧಿಕಾರ ರಾಜಕಾರಣದಿಂದ ಹಿಂದೆ ಸರಿದು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಬೇಕು ಎಂಬ ಪಕ್ಷವೊಂದರ ನಿಲುವಿನ ಬಳಿಕ ಬಹುತೇಕ ರಾಜಕಾರಣಿಗಳು ತಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿಸಲು ಪೈಪೋಟಿಗೆ ಇಳಿದಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳು ಪಕ್ಷದ ತತ್ವ, ಸಿದ್ಧಾಂತ, ವ್ಯಕ್ತಿಯ ಚಾರಿತ್ರ್ಯ, ಉತ್ತಮ ಗುಣಗಳಿಗಿಂತ ಅವರ ಜಾತಿ, ಹಣ ಬಲ ಆಧಾರದಲ್ಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿವೆ.

‘ಕಾಂಗ್ರೆಸ್‌ ಸೇರಿದಂತೆ ಅಂದು ಅಸ್ತಿತ್ವದಲ್ಲಿದ್ದ ಎಲ್ಲ ಪಕ್ಷಗಳಿಗೂ ನಿರ್ದಿಷ್ಟ ಮತ ಬ್ಯಾಂಕ್‌ ಇತ್ತು. ಪಕ್ಷದ ವರಿಷ್ಠರು ಸೂಚಿಸಿದ ವ್ಯಕ್ತಿ ಆ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ತಮ್ಮ ವೈಯಕ್ತಿಕ ವರ್ಚಸ್ಸು, ಪಕ್ಷದ ಬಲದ ಮೇಲೆ ಗೆದ್ದು ಬರುತ್ತಿದ್ದರು. ಇಂದು ಪಕ್ಷಗಳ ಮತ ಬ್ಯಾಂಕ್‌ ಕ್ಷೀಣಿಸಿದೆ. ಪಕ್ಷಕ್ಕಿಂತ ಜಾತಿವಾರು ಪ್ರಾಬಲ್ಯ, ಹಣಬಲ ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಅವರನ್ನು ಎದುರಿಸಲು ಉಳಿದ ಪಕ್ಷಗಳು ಅಂತಹ ಸಾಮರ್ಥ್ಯದ ಅಭ್ಯರ್ಥಿಗಳನ್ನೇ ಹುಡುಕುತ್ತವೆ. ಒಟ್ಟಿನಲ್ಲಿ ಅಧಿಕಾರದ ಗದ್ದುಗೆ ತಮ್ಮ ಪಕ್ಷಕ್ಕೆ ಸಿಗಬೇಕು ಎನ್ನುವುದೇ ಎಲ್ಲ ಪಕ್ಷಗಳ ಧೋರಣೆ. ಹಾಗಾಗಿ, ಯುವ ಸಮೂಹ ರಾಜಕೀಯ ಅವಕಾಶಗಳಿಂದ ವಂಚಿತವಾಗುತ್ತಿದೆ’ ಎನ್ನುತ್ತಾರೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್‌. ರಮೇಶ್‌.

ಪಕ್ಷದ ಬೆಳವಣಿಗೆಗೆ ಪೂರಕವಾಗಿ ದುಡಿದ ಯುವ ನಾಯಕರನ್ನು ನಿಗಮ, ಮಂಡಳಿ, ಪ್ರಾಧಿಕಾರ, ಸೆನೆಟ್‌, ಸಿಂಡಿಕೇಟ್‌ಗಳಿಗೆ ಸದಸ್ಯರನ್ನಾಗಿ ನೇಮಿಸುವ ಮೂಲಕ ಪಕ್ಷಗಳು ಸಂತೃಪ್ತಿ ಪಡಿಸುತ್ತಿವೆ. ಅಷ್ಟಕ್ಕೆ ಯುವ ಸಮೂಹವೂ ತೃಪ್ತಿ ಕಾಣುತ್ತಿದೆ ಎನ್ನುತ್ತಾರೆ ಕೆಪಿಎಸ್‌ಸಿ ಮಾಜಿ ಸದಸ್ಯರೊಬ್ಬರು.

‘ನಾನು ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವೀಧರ. ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿದಿದ್ದೇನೆ. ರಾಜಕೀಯ ಪ್ರವೇಶಿಸಿ, ಜನಪ್ರತಿನಿಧಿಯಾಗುವ ಬಯಕೆ ಇತ್ತು. ವಾಸ್ತವದ ಬೆಳವಣಿಗೆಗಳನ್ನು ನೋಡಿದರೆ ರಾಜಕೀಯದ ಸಹವಾಸವೇ ಬೇಡ ಎನಿಸುತ್ತದೆ. ಹಣ ಖರ್ಚು ಮಾಡದೇ ಯಾವ ಚುನಾವಣೆಯೂ ಅಸಾಧ್ಯ ಎನ್ನುವುದು ಮನವರಿಕೆಯಾಗಿದೆ. ಯುವಕರಾದರೂ ಎಲ್ಲೋ ಒಬ್ಬೊಬ್ಬರು ಕಾಣಬಹುದು, ಆದರೆ, ಯುವತಿಯರಂತೂ ನೇಪಥ್ಯಕ್ಕೆ ಸರಿಯುತ್ತಿದ್ದಾರೆ’ ಎನ್ನುತ್ತಾರೆ ಧಾರವಾಡದ ತೇಜಸ್‌ಕುಮಾರ್.

ಶಾಸನಸಭೆ ಪ್ರವೇಶಿಸಿದ ಸಾಮಾನ್ಯರು

ಕಳೆದ ಒಂದು ದಶಕದಲ್ಲಿ ರಾಜ್ಯ ರಾಜಕಾರಣದಲ್ಲಿ ಹಣಬಲ ಇಲ್ಲದ ಕೆಲ ಯುವಕರು ಶಾಸನಸಭೆ ಪ್ರವೇಶಿಸಿದ್ದಾರೆ. ಪೊಲೀಸ್‌ ಅಧಿಕಾರಿಯಾಗಿದ್ದ ಮೂಲತಃ ಶಿವಮೊಗ್ಗ ಜಿಲ್ಲೆಯ ಪಿ.ರಾಜೀವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕುಡಚಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಪತ್ರಕರ್ತರಾಗಿದ್ದ ಪ್ರತಾಪಸಿಂಹ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ. ಎಬಿವಿಪಿಯಲ್ಲಿ ಗುರುತಿಸಿಕೊಂಡಿದ್ದ ತೇಜಸ್ವಿಸೂರ್ಯ ಬೆಂಗಳೂರು ದಕ್ಷಿಣದ ಸಂಸದರಾದರು. ಎಂಜಿನಿಯರ್ ಆಗಿದ್ದ ಜನಾರ್ದನ ಸ್ವಾಮಿ ಹಿಂದೆ ಚಿತ್ರದುರ್ಗ ಸಂಸದರಾಗಿದ್ದರು. ರಿಜ್ವಾನ್‌ ಅರ್ಷದ್‌ ಶಿವಾಜಿನಗರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳಲ್ಲಿ ಸ್ವಲ್ಪಮಟ್ಟಿಗೆ ಕುಟುಂಬ ರಾಜಕಾರಣ ಹೊರತಾದ ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT