ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ವಿರುದ್ಧ ಇ.ಡಿ ದಾಖಲಿಸಿದ್ದ ಪ್ರಕರಣ ವಜಾ ಮಾಡಿದ ಸುಪ್ರೀಂ ಕೋರ್ಟ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
Published 5 ಮಾರ್ಚ್ 2024, 7:56 IST
Last Updated 5 ಮಾರ್ಚ್ 2024, 7:56 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌) ಅಡಿ ದಾಖಲಿಸಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120–‘ಬಿ’ (ಅಪರಾಧಿಕ ಒಳಸಂಚು) ಅನುಸಾರ ಈ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಇ.ಡಿ ನೀಡಿದ್ದ ಸಮನ್ಸ್ ರದ್ದುಪಡಿಸಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಶಿವಕುಮಾರ್‌ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಕೆ.ವಿ.ವಿಶ್ವನಾಥನ್‌ ಅವರಿದ್ದ ದ್ವಿಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸಿ, ಹೈಕೋರ್ಟ್ ಆದೇಶವನ್ನು ಅನೂರ್ಜಿತಗೊಳಿಸಿದೆ. ಶಿವಕುಮಾರ್‌ ಹಾಗೂ ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿಗಳನ್ನು ಪುರಸ್ಕರಿಸಿದೆ. 

ಸುಪ್ರೀಂ ಕೋರ್ಟ್‌ನ ಆದೇಶವು ಶಿವಕುಮಾರ್ ಅವರಿಗೆ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಸಿಕ್ಕಿದ ದೊಡ್ಡ ಗೆಲುವು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.  

ಶಿವಕುಮಾರ್‌ ಹಾಗೂ ಆಂಜನೇಯ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ಅಭಿಷೇಕ್‌ ಮನು ಸಿಂಘ್ವಿ ಹಾಗೂ ಎಸ್‌. ನಾಗಮುತ್ತು ವಾದ ಮಂಡಿಸಿದರು. ‘ಶಿವಕುಮಾರ್ ಅವರದ್ದು ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಆದರೆ, 120 ಬಿ ಅನುಸಾರ ಇ.ಡಿ. ಪ್ರಕರಣ ದಾಖಲಿಸಿದೆ. ಇದು ಕಾನೂನುಬಾಹಿರ ನಡೆ’ ಎಂದು ಅವರು ವಾದಿಸಿದರು. 

ವಾದಗಳನ್ನು ಆಲಿಸಿದ ನ್ಯಾಯಪೀಠವು, ‘120 ಬಿ ಬಗ್ಗೆ ಪವನ ದಿಬ್ಬೂರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ’ ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ವಜಾಗೊಳಿಸಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT