ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪ ಎರಡು ದಿನ ಮೊಟಕು: ಇದೇ 26ಕ್ಕೆ ಅಧಿವೇಶನ ಮುಕ್ತಾಯ

ಬೆಳಿಗ್ಗೆ 10ರಿಂದ ರಾತ್ರಿ 7ರವರೆಗೆ ಕಲಾಪ
Last Updated 21 ಸೆಪ್ಟೆಂಬರ್ 2020, 21:02 IST
ಅಕ್ಷರ ಗಾತ್ರ

ಬೆಂಗಳೂರು: ಎಂಟು ದಿನಗಳಿಗೆ ನಿಗದಿ ಯಾಗಿದ್ದ ವಿಧಾನಮಂಡಲ ಅಧಿವೇಶನವನ್ನು ಎರಡು ದಿನ ಮೊಟಕುಗೊಳಿಸಲು ನಿರ್ಧರಿಸಲಾಗಿದ್ದು, ಇದೇ 26ಕ್ಕೆ ಕಲಾಪ ಮುಕ್ತಾಯವಾಗಲಿದೆ.

ಸೆ.30 ರವರೆಗೆ ನಡೆಯಬೇಕಿದ್ದ ಅಧಿವೇಶನವನ್ನು ಮೂರು ದಿನ ಗಳಿಗೆ ಮೊಟಕುಗೊಳಿಸಲು ಸರ್ಕಾರ ಉದ್ದೇಶಿ ಸಿತ್ತು. ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ, ಶನಿವಾರವೂ (ಶನಿವಾರ ಕಲಾಪ ನಡೆಸುವುದು ವಿರಳ) ಕಲಾಪ ನಡೆಸಲು ಒಪ್ಪಿಕೊಂಡಿದೆ.

ಕಲಾಪವನ್ನು ಮೂರು ದಿನಗಳಿಗೆ ಸೀಮಿತಗೊಳಿಸುವ ಕುರಿತು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆಗೂ ಮಾತುಕತೆ ನಡೆಸಿದ್ದರು. ಆದರೆ, ಅವರು ಒಪ್ಪಿರಲಿಲ್ಲ.

ಸೋಮವಾರ ಬೆಳಿಗ್ಗೆ ಕಲಾಪ ಸಲಹಾ ಸಮಿತಿ ಸಭೆ ಸೇರಿದಾಗ ಯಡಿಯೂರಪ್ಪ ಅವರು, ‘ಕೋವಿಡ್‌ ಹರಡುತ್ತಿದ್ದು, ಹಲವು ಶಾಸಕರು ಕೋವಿಡ್‌ ಪೀಡಿತರಾಗುತ್ತಿದ್ದಾರೆ. ಮೂರು ದಿನಗಳಿಗೆ ಮುಗಿಸೋಣ’ ಎಂದು ಪ್ರಸ್ತಾವ ಮುಂದಿಟ್ಟರು. ಆದರೆ, ವಿರೋಧ‌ ಪಕ್ಷಗಳು ಇದನ್ನು ಒಪ್ಪಿಕೊಳ್ಳಲಿಲ್ಲ. ಮಸೂದೆಗಳನ್ನು ಮಂಡಿಸುವುದಾದರೆ ಮೂರು ದಿನಗಳಿಗೆ ಮುಗಿಸುವುದು ಬೇಡ. ವಿಸ್ತೃತವಾಗಿ ಚರ್ಚೆ ನಡೆಸಲೇಬೇಕು. ಮಸೂದೆ ಮಂಡಿಸದಿದ್ದರೆ ಮೂರು ದಿನ ಗಳಿಗೆ ಮುಗಿಸಿ ಎಂದು ಸಿದ್ದರಾಮಯ್ಯ ಪ್ರತಿ‍ಪಾದಿಸಿದರು.

ಎಲ್ಲ ಮಸೂದೆಗಳು ಮತ್ತು ಇತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವುದಾದರೆ ಮಾತ್ರ ಭಾನುವಾರಕ್ಕೆ ಮುಗಿಸೋಣ ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು. ಶನಿವಾರದವರೆಗೆ ನಡೆಸಲು ಸರ್ಕಾರ ಒಪ್ಪಿತು. ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 7 ರವರೆಗೆ ಕಲಾಪ ನಡೆಸಲು ನಿರ್ಧರಿಸಲಾಯಿತು.

‘ಸಂಸತ್‌ ಕಲಾಪ ಮೊಟಕು ಮಾಡಿ ದಂತೆ ಇಲ್ಲೂ ಮೂರು ದಿನಗಳಲ್ಲಿ ಅಧಿವೇಶನ ಮುಗಿಸೋಣ ಎಂದು ಸರ್ಕಾರ ಹೇಳಿತು. ಅದನ್ನು ಒಪ್ಪಲಿಲ್ಲ. 40 ಮಸೂದೆಗಳು ಮಂಡನೆ ಆಗಲಿದ್ದು, ಅವುಗಳ ಬಗ್ಗೆ ವಿಸ್ತೃತ ಚರ್ಚೆ ಆಗಬೇಕೆಂದು ಹೇಳಿದ್ದೇವೆ’ ಎಂದುಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.

ಸಭೆಯಲ್ಲಿ ಸಂಸದೀಯ ವ್ಯವಹಾರ ಗಳ ಸಚಿವ ಜೆ.ಸಿ.ಮಾಧುಸ್ವಾಮಿ, ರಮೇಶ್‌ ಕುಮಾರ್‌, ಆರ್‌.ವಿ. ದೇಶಪಾಂಡೆ, ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT