ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ವಿದ್ಯುತ್‌ ಕಡಿತ ಇಲ್ಲ, ಕಲ್ಲಿದ್ದಲು ದಾಸ್ತಾನು ಇದೆ: ಬೊಮ್ಮಾಯಿ

Last Updated 12 ಅಕ್ಟೋಬರ್ 2021, 21:00 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕಲ್ಲಿದ್ದಲು ದಾಸ್ತಾನು ಇದೆ. ಆದ್ದರಿಂದ, ಯಾವುದೇ ರೀತಿಯ ವಿದ್ಯುತ್‌ ಕಡಿತ ಇಲ್ಲ. ಮುಂದಿನ ದಿನಗಳಲ್ಲಿಯೂ ವಿದ್ಯುತ್‌ ಕಡಿತ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ, ಬೇಡಿಕೆ ಮತ್ತು ಕಲ್ಲಿದ್ದಲು ಪರಿಸ್ಥಿತಿಯ ಬಗ್ಗೆ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಮಂಗಳವಾರ ರಾತ್ರಿ ನಡೆಸಿದ ತುರ್ತು ಅವಲೋಕನ ಸಭೆಯ ಬಳಿಕ ಮಾತನಾಡಿದ ಅವರು, ‘ಸದ್ಯ ರಾಜ್ಯದಲ್ಲಿ 98,863 ಟನ್ ಕಲ್ಲಿದ್ದಲು ದಾಸ್ತಾನಿದೆ’ ಎಂದರು.

‘ದೆಹಲಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವರನ್ನು ನಾನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ದೆಹಲಿಯಿಂದ ರಾಜ್ಯಕ್ಕೆ ಎರಡು ರೇಕ್‌ ಕಲ್ಲಿದ್ದಲು ಹೆಚ್ಚು ಬಂದಿದೆ. ಈಗ ಪ್ರತಿ ದಿನ 10 ರೇಕ್‌ ಬರುತ್ತಿದೆ. ಹೆಚ್ಚುವರಿಯಾಗಿ ಇನ್ನೂ ಮೂರು ರೇಕ್‌ ಕಲ್ಲಿದ್ದಲು ಅವಶ್ಯಕತೆ ಇದೆ’ ಎಂದರು.

‘ಸಿಂಗರೇಣಿಯಿಂದ ಇನ್ನೂ ಎರಡು ರೇಕ್‌ ಕಲ್ಲಿದ್ದಲು ಕೊಡುತ್ತೇವೆ ಎಂದಿದ್ದಾರೆ. ಅವರಿಗೆ ಸ್ವಲ್ಪ ಹಣ ಪಾವತಿಸಬೇಕಾಗಿದೆ. ಗುರುವಾರ ಆ ಹಣ ಪಾವತಿಸಲಾಗುವುದು. ಬಳಿಕ ತೆಲಂಗಾಣ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ಕೇಂದ್ರ ಕಲ್ಲಿದ್ದಲು ಸಚಿವರ ಜೊತೆಗೂ ಮಾತನಾಡಿ ಇನ್ನೂ ಎರಡು ಹೆಚ್ಚವರಿ ರೇಕ್‌ ಪಡೆಯಲು ವ್ಯವಸ್ಥೆ ಮಾಡುತ್ತೇವೆ’ ಎಂದರು.

ಕುಸಿದ ವಿದ್ಯುತ್‌ ಉತ್ಪಾದನೆ: ಕಲ್ಲಿದ್ದಲು ಅಭಾವ ತಲೆದೋರಿರುವುದರಿಂದ ರಾಜ್ಯದ ಪ್ರಮುಖ ಶಾಖೋತ್ಪನ್ನ ಕೇಂದ್ರಗಳಲ್ಲಿ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಶಾಖೋತ್ಪನ್ನ ಕೇಂದ್ರಗಳಾದ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌), ಬಳ್ಳಾರಿ ಶಾಖೋತ್ಪನ್ನ ಕೇಂದ್ರ (ಬಿಟಿಪಿಎಸ್‌) ಮತ್ತು ಯರಮರಸ್‌ ಶಾಖೋತ್ಪನ್ನವಿದ್ಯುತ್‌ ಸ್ಥಾವರದಿಂದ (ವೈಟಿಪಿಎಸ್‌) ಒಟ್ಟು 5,020 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆಯಾಬೇಕಾಗಿತ್ತು. ಆದರೆ, ಮಂಗಳವಾರ 1,300 ಮೆಗಾ ವಾಟ್‌ಗಿಂತಲೂ ಕಡಿಮೆ ಉತ್ಪಾದನೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೌರಶಕ್ತಿ ಮೂಲಕ ವಿದ್ಯುತ್‌ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗುತ್ತಿದೆ. 7,300 ಮೆಗಾ ವಾಟ್‌ ಸ್ಥಾಪಿತ ಸಾಮರ್ಥ್ಯದ ಮೂಲಕ 3,500 ಮೆಗಾ ವಾಟ್‌ ಉತ್ಪಾದನೆಯಾಗಿದೆ. ರಾಜ್ಯದಲ್ಲಿ ಮಳೆ ಮತ್ತು ಮೋಡದಿಂದ ಕೂಡಿದ ವಾತಾವರಣ ಇರುವುದರಿಂದ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

ಜಲ ವಿದ್ಯುತ್‌ ಉತ್ಪಾದನೆಯಲ್ಲೂ ಕುಸಿತವಾಗಿದೆ. ಮಂಗಳವಾರ 4,701 ಮೆಗಾ ವಾಟ್ ಉತ್ಪಾದನೆಯಾಗಬೇಕಾಗಿತ್ತು. ಆದರೆ, 1,300 ಮೆಗಾವಾಟ್‌ ಉತ್ಪಾದನೆಯಾಗಿದೆ ಎಂದಿದ್ದಾರೆ.

ಶರಾವತಿ: ಗರಿಷ್ಠ ವಿದ್ಯುತ್ ಉತ್ಪಾದನೆ

ಶಿವಮೊಗ್ಗ: ಶರಾವತಿ ಕಣಿವೆ ಜಲ ವಿದ್ಯುದಾಗರಗಳಲ್ಲಿ 1,400 ಮೆಗಾವಾಟ್‌ವರೆಗೂ ವಿದ್ಯುತ್ ಉತ್ಪಾದಿಸಲಾಗುತ್ತಿದೆ. 44.35 ಕೋಟಿ ಘನ ಮೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಜಲಾಶಯ ನೀರು ಬಳಸಿಕೊಂಡು ಮಹಾತ್ಮ ಗಾಂಧಿ, ಶರಾವತಿ, ಲಿಂಗನಮಕ್ಕಿ ಹಾಗೂ ಗೇರುಸೊಪ್ಪ ಘಟಕಗಳು ಗರಿಷ್ಠ 1,469.8 ಮೆಗಾವಾಟ್‌ ವಿದ್ಯುತ್ ಉತ್ಪಾದಿಸುವಸಾಮರ್ಥ್ಯ ಹೊಂದಿವೆ.

ಈಗ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಾಸವಾಗಿರುವ ಪರಿಣಾಮ ವಿದ್ಯುದಾಗರಗಳು ಮತ್ತೆ ದಿನದ 24 ಗಂಟೆಗಳೂ ಗರಿಷ್ಠ ಉತ್ಪಾದನೆಯಲ್ಲಿ ತೊಡಗಿವೆ.ಶರಾವತಿ ಜಲ ವಿದ್ಯುದಾಗರ 1,035 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ವಿದ್ಯುದಾಗರದ 10 ಘಟಕಗಳಿಂದ ಪ್ರಸ್ತುತ 950ಮೆಗಾವಾಟ್‌ವರೆಗೂ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. 220 ಕೆ.ವಿ. ಸಾಮರ್ಥ್ಯದ 9 ಮಾರ್ಗಗಳ ಮೂಲಕ ವಿದ್ಯುತ್‌ ಹರಿಸಲಾಗುತ್ತಿದೆ. ಮಾಣಿ, ವರಾಹಿ ಸೇರಿ ಜಿಲ್ಲೆಯಲ್ಲಿ ಒಟ್ಟು 1,800 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.

ಕಾಮಗಾರಿಯಿಂದ ವಿದ್ಯುತ್ ವ್ಯತ್ಯಯ

ಬೆಂಗಳೂರು: ‘ಬೆಸ್ಕಾಂ ವ್ಯಾಪ್ತಿಯಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ. ಕೆಲವು ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಬೆಂಗಳೂರು ನಗರ ಹಾಗೂ ವಿವಿಧೆಡೆ ಅನಿಯಮಿತವಾಗಿ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಲೋಡ್‌ ಶೆಡ್ಡಿಂಗ್ ಮಾಡುತ್ತಿಲ್ಲ’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಲವು ಕಡೆಗಳಲ್ಲಿ ಕೇಬಲ್‌ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ದಿನ 4,500 ರಿಂದ 6,000 ಮೆಗಾ ವಾಟ್‌ ವಿದ್ಯುತ್‌ ಬೇಡಿಕೆ ಇದೆ. ಮಳೆಯಾಗುತ್ತಿರುವುದರಿಂದ ವಿದ್ಯುತ್‌ ಬೇಡಿಕೆ ಸದ್ಯ ಕಡಿಮೆಯಾಗಿದೆ. ಜತೆಗೆ, ಜಲ ಮತ್ತು ಪವನ ವಿದ್ಯುತ್‌ ಉತ್ಪಾದನೆಯು ಹೆಚ್ಚಾಗಿರುವುದರಿಂದ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT