ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ, ಕ್ಯಾಬ್‌ ಬಳಕೆದಾರರಿಗೆ ಸಾರಿಗೆ ಇಲಾಖೆ ಆ್ಯಪ್‌: ಸಚಿವ ರಾಮಲಿಂಗಾರೆಡ್ಡಿ

Published 5 ಆಗಸ್ಟ್ 2023, 0:24 IST
Last Updated 5 ಆಗಸ್ಟ್ 2023, 0:24 IST
ಅಕ್ಷರ ಗಾತ್ರ

ಬೆಂಗಳೂರು: ಆಟೊ, ಕ್ಯಾಬ್‌ಗಳ ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ವತಿಯಿಂದಲೇ ಹೊಸ ಆ್ಯಪ್‌ ರೂಪಿಸಲು ಸಿದ್ಧತೆ ನಡೆದಿದೆ.

ಈ ಬಗ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ಲಾಭ ಮತ್ತು ನಷ್ಟ ಇಲ್ಲದ ಪರಿಕಲ್ಪನೆಯಲ್ಲಿ ಈ ಆ್ಯಪ್‌ ಅನ್ನು ಪರಿಚಯಿಸಲಾಗುತ್ತಿದೆ. ಬೆಂಗಳೂರಿನಲ್ಲಿ  ಕೆಲವೇ ತಿಂಗಳಲ್ಲಿ  ಹೊಸ ಆ್ಯಪ್‌ನ ಪ್ರಾಥಮಿಕ ಪ್ರಯೋಗಕ್ಕೆ ಚಾಲನೆ ದೊರೆಯಲಿದೆ. ನಂತರ, ಇತರ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು’ ಎಂದು ತಿಳಿಸಿದರು.

‘ಹೊಸ ಆ್ಯಪ್‌ನಲ್ಲಿ ದರ ನಿಗದಿಪಡಿಸುವ ಬಗ್ಗೆ ಇನ್ನೂ ಯೋಚಿಸಿಲ್ಲ. ಆ್ಯಪ್ ಆಧಾರಿತ ಸಾರಿಗೆ ಸೇವೆ ನೀಡುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಆಟೊ ಮತ್ತು ಕ್ಯಾಬ್ ಚಾಲಕರಿಗೆ ಕಡಿಮೆ ಹಣ ನೀಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮಕೈಗೊಂಡಿದೆ’ ಎಂದು ವಿವರಿಸಿದರು.

‘ಸಾರಿಗೆ ಇಲಾಖೆಯ ಆ್ಯಪ್ ಆಧಾರಿತ ಸೇವೆಗೆ ನೋಂದಣಿ ಮಾಡಿಕೊಳ್ಳಬೇಕು. ಓಲಾ, ಉಬರ್‌ಗಿಂತಲೂ ಚಾಲಕರು ಹೆಚ್ಚಿನ ಲಾಭಗಳಿಸಬಹುದು. ಇಲ್ಲಿ ಯಾವುದೇ ಕಿರುಕುಳ ಇರುವುದಿಲ್ಲ. ಸಾರ್ವಜನಿಕರು ಮತ್ತು ಚಾಲಕರ ಹಿತದೃಷ್ಟಿ ಕೇಂದ್ರೀಕರಿಸಿದ ಆ್ಯಪ್ ಇದಾಗಿದೆ’ ಎಂದು ವಿವರಿಸಿದರು.

ಸ್ಮಾರ್ಟ್ ಕಾರ್ಡ್ ಜಿಲ್ಲಾವಾರು ಗುತ್ತಿಗೆ:

‘ಶಕ್ತಿ’ ಯೋಜನೆ ಅಡಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲು ಜಿಲ್ಲಾವಾರು ಟೆಂಡರ್ ಕರೆದು ಹಂಚಿಕೆ ಮಾಡುವ ಕಾರ್ಯ ಶೀಘ್ರದಲ್ಲೇ ನಡೆಯಲಿದೆ.‌ ಈ ಯೋಜನೆ ಅಡಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರತಿ ದಿನ ಸರಾಸರಿ 59.55 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ’ ಎಂದು ಹೇಳಿದರು.

ಸಕಾಲಕ್ಕೆ ಸಾರಿಗೆ ಸಿಬ್ಬಂದಿಗಳಿಗೆ ಸಂಬಳ ಪಾವತಿ 

'ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳ ಸಿಬ್ಬಂದಿಗೆ ಸಕಾಲಕ್ಕೆ ವೇತನ ಪಾವತಿಸಲಾಗುತ್ತಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಈ ‌ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು ‘ಶಾಸಕ ಬಸವರಾಜ ಬೊಮ್ಮಾಯಿ ಸುಳ್ಳು  ಹೇಳುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 1ನೇ ತಾರೀಕಿಗೆ ಬಿಎಂಟಿಸಿ ಸಿಬ್ಬಂದಿಗಳಿಗೆ ಪ್ರತಿ ತಿಂಗಳು 7ನೇ ತಾರೀಕಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮಗದ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 17ನೇ ತಾರೀಕಿಗೆ ವೇತನ ಪಾವತಿಸಲಾಗುತ್ತಿದೆ’ ಎಂದು ಅಂಕಿ-ಅಂಶ ಸಮೇತ ಮಾಹಿತಿ ನೀಡಿದರು.

ಬಿಜೆಪಿ ಮುಖಂಡರಿಗೆ ’ವರ್ಣ ಅಂಧತ್ವ’

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಆರಗ ಜ್ಞಾನೇಂದ್ರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ರಾಮಲಿಂಗಾರೆಡ್ಡಿ ‘ನಾಗಪುರ ಪಾಠಶಾಲೆಯಲ್ಲಿ ವಿಷವಲ್ಲದೆ ಮತ್ತೇನು ಉತ್ಪಾದನೆಯಾಗಲು ಸಾಧ್ಯ’ ಎಂದು ವಾಗ್ದಾಳಿ ನಡೆಸಿದರು. ‘ಕೇಶವ ಕೃಪಾದಲ್ಲಿ ಇದನ್ನೇ ಬೋಧಿಸಲಾಗುತ್ತಿದೆಯೇ? ಆರ್‌ಎಸ್‌ಎಸ್ ಪಾಠಶಾಲೆಯಲ್ಲಿ ಇದನ್ನೇ ಕಲಿಸಲಾಗುತ್ತಿದೆಯೇ? ಬಿಜೆಪಿ ಮುಖಂಡರಿಗೆ ವರ್ಣ ಅಂಧತ್ವ’ ರೋಗವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ’ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಬೇಕು ಮತ್ತು ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು. ‘ಜತೆಗೆ ನಾನು ಸೇರಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಕೆಲವು ಜಿಲ್ಲಾಧ್ಯಕ್ಷರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಂತವರನ್ನು ಕೈಬಿಟ್ಟು  ಹೊಸದಾಗಿ ಕೆಪಿಸಿಸಿ ಪುನರ್‌ ರಚಿಸುವಂತೆ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಜಿಲ್ಲಾ ತಾಲ್ಲೂಕು ಘಟಕಗಳ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆಯಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT