ನವದೆಹಲಿ: ಹೃದಯಾಘಾತಕ್ಕೆ ಒಳಗಾದವರು ಚಿಕಿತ್ಸೆಗಾಗಿ ನೂರಕ್ಕೂ ಅಧಿಕ ಕಿ.ಮೀ. ಕ್ರಮಿಸಬೇಕಾದ ಸ್ಥಿತಿ ದೇಶದಲ್ಲಿದೆ. ಹೃದಯಾಘಾತಕ್ಕೆ ಒಳಗಾದವರಿಗೆ ತಾಲ್ಲೂಕು ಆಸ್ಪತ್ರೆಗಳಲ್ಲೇ ಚಿಕಿತ್ಸೆ ನೀಡುವ ಕರ್ನಾಟಕ ರಾಜ್ಯದ ಮಾದರಿಯನ್ನು ದೇಶದಾದ್ಯಂತ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಸಲಹೆ ನೀಡಿದರು.
ಲೋಕಸಭೆಯಲ್ಲಿ ಆರೋಗ್ಯ ಸಚಿವಾಲಯದ ಅನುದಾನ ಬೇಡಿಕೆ ಕುರಿತ ಚರ್ಚೆಯಲ್ಲಿ ಶುಕ್ರವಾರ ಪಾಲ್ಗೊಂಡು ಮಾತನಾಡಿದ ಅವರು, ‘ಹೃದಯಾಘಾತಕ್ಕೆ ಒಳಗಾದ ರೋಗಿಗಳಿಗೆ ರಾಜ್ಯದ 45 ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ಈಗ 90 ಆಸ್ಪತ್ರೆಗಳಿಗೆ ವಿಸ್ತರಿಸಲಾಗುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಒಂದು ಇಂಜೆಕ್ಷನ್ ನೀಡಿದರೆ ಸಾಕು. ಮತ್ತೆ ಹೆಚ್ಚುವರಿ ಚಿಕಿತ್ಸೆ ನೀಡಲು 3ರಿಂದ 6 ಗಂಟೆ ಕಾಲಾವಕಾಶ ಸಿಗುತ್ತದೆ. ಆ ಸಮಯದಲ್ಲಿ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಸ್ಟೆಂಟ್ ಅಳವಡಿಸಬಹುದು’ ಎಂದರು.
‘ಈ ಮೊದಲು ಹೃದಯಾಘಾತಕ್ಕೆ ಒಳಗಾದ ಪೋಷಕರನ್ನು ಮಕ್ಕಳು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಈಗ 25–40 ವರ್ಷದ ಮಕ್ಕಳನ್ನು ಪೋಷಕರೇ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಈ ವಯಸ್ಸಿನವರಲ್ಲಿ ಹೃದಯಾಘಾತ ಆಗುವುದು ಗಣನೀಯವಾಗಿ ಹೆಚ್ಚಳ ಆಗಿದೆ. ಜತೆಗೆ, ಇದು ಈಗ ಶ್ರೀಮಂತರ ಕಾಯಿಲೆ ಆಗಿ ಉಳಿದಿಲ್ಲ. ಬಡವರು, ಕೂಲಿ ಕಾರ್ಮಿಕರು ಹಾಗೂ ಗ್ರಾಮೀಣ ಪ್ರದೇಶದ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ’ ಎಂದರು.
ದೇಶದಲ್ಲಿ 380 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಪ್ರತಿ ಆಸ್ಪತ್ರೆಯಲ್ಲಿ 150 ವಿದ್ಯಾರ್ಥಿಗಳ ದಾಖಲಾತಿಗೆ ಮಾತ್ರ ಅವಕಾಶ ನೀಡಬೇಕು. ಇಲ್ಲದಿದ್ದರೆ ರೋಗಿಗಳಿಗಿಂತ ವೈದ್ಯ ವಿದ್ಯಾರ್ಥಿಗಳೇ ಹೆಚ್ಚಾಗುತ್ತಾರೆ. ಸಮಗ್ರ ತರಬೇತಿ ಪಡೆಯದ ವೈದ್ಯ ವಿದ್ಯಾರ್ಥಿಗಳು ತೊಂದರೆದಾಯಕರು’ ಎಂದು ಎಚ್ಚರಿಸಿದರು.
ಅನೇಕ ಜಿಲ್ಲಾ ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ 200 ಇದೆ. ಇಲ್ಲಿ ಪಿಜಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಬೇಕು. ಇದಕ್ಕೆ ವೆಚ್ಚವೂ ಕಡಿಮೆ. ಜತೆಗೆ, ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಯುವತಿಯರಲ್ಲಿ ಗರ್ಭಕಂಠ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು 9ರಿಂದ 18ರ ನಡುವಿನ ವಯಸ್ಸಿನಲ್ಲೇ ಲಸಿಕೆ ನೀಡಬೇಕು. ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಲಸಿಕೆ ನೀಡುವ ವ್ಯವಸ್ಥೆ ಆಗಬೇಕು. ಆಗ ಈ ಕಾಯಿಲೆಯಿಂದ ಬಳಲುವವರ ಸಂಖ್ಯೆ ಶೇ 90ರಷ್ಟು ಕಡಿಮೆ ಆಗಲಿದೆ ಎಂದರು.
ದೇಶದಲ್ಲಿ ಶೇ 13ರಷ್ಟು ಸಾವು ರಸ್ತೆ ಅಪಘಾತಗಳಿಂದ ಆಗುತ್ತಿದೆ. ರಸ್ತೆ ಅಪಘಾತಗಳಲ್ಲಿ ಶೇ 90ರಷ್ಟು ರೋಗಿಗಳಿಗೆ ಬಹು ಗಾಯಗಳಾಗುತ್ತವೆ. ಅವರಿಗೆ ತುರ್ತು ಚಿಕಿತ್ಸೆ ನೀಡಲು ಪಾಲಿ ಟ್ರಾಮಾ ಕೇಂದ್ರಗಳ ಅಗತ್ಯ ಇದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 125 ಕಿ.ಮೀ.ಗೊಂದರಂತೆ ಇಂತಹ ಕೇಂದ್ರಗಳನ್ನು ಆರಂಭಿಸಬೇಕು ಎಂದು ಅವರು ಸಲಹೆ ನೀಡಿದರು.
‘ದೇಶದಲ್ಲಿ ಏಮ್ಸ್ ಇಲ್ಲದಿರುವ ರಾಜ್ಯಗಳು ಎರಡೇ. ಕರ್ನಾಟಕದಲ್ಲಿ ಏಮ್ಸ್ ಸ್ಥಾಪಿಸಬೇಕು ಎಂಬ ಬೇಡಿಕೆ ಬಹುಕಾಲದಿಂದ ಇದೆ. ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಈಡೇರಿಸಬೇಕು’ ಎಂದು ಅವರು ಆಗ್ರಹಿಸಿದರು.
ರಾಷ್ಟ್ರೀಯ ಆರೋಗ್ಯ ಮಿಷನ್‌ನಲ್ಲಿ ಗುತ್ತಿಗೆ ನರ್ಸ್‌ಗಳ ವೇತನ ₹13 ಸಾವಿರ ಹಾಗೂ ವೈದ್ಯರ ವೇತನ ₹50 ಸಾವಿರ ಇದೆ. ಇದು ಏನೇನೂ ಸಾಲದು. ಅವರ ವೇತನವನ್ನು ಹೆಚ್ಚಿಸಬೇಕು’ ಎಂದು ಅವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.