ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿಪೂರ್ವ: ಈ ವರ್ಷ ಶುಲ್ಕ ಏರಿಕೆ ಇಲ್ಲ

ಪದವಿಪೂರ್ವ ನಿರ್ದೇಶನಾಲಯದ ಪ್ರಸ್ತಾವಕ್ಕೆ ಸಿಗದ ಸಮ್ಮತಿ
Published 4 ಮೇ 2024, 22:15 IST
Last Updated 4 ಮೇ 2024, 23:55 IST
ಅಕ್ಷರ ಗಾತ್ರ

ಬೆಂಗಳೂರು: 2024–25ನೇ ಶೈಕ್ಷಣಿಕ ಸಾಲಿಗೆ ಪದವಿಪೂರ್ವ ಕಾಲೇಜುಗಳ ಪ್ರವೇಶ ಶುಲ್ಕ ಹೆಚ್ಚಳ ಮಾಡದಿರಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.

ಪಿಯು ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳ ಶುಲ್ಕ ಹೆಚ್ಚಳ ಮಾಡಲು ಅನುಮತಿ ಕೋರಿ ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯ ಪ್ರಸಕ್ತ ವರ್ಷದ ಜನವರಿಯಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಪ್ರಸ್ತಾವಕ್ಕೆ ಆರ್ಥಿಕ ಇಲಾಖೆ ಇದುವರೆಗೂ ಸಮ್ಮತಿ ನೀಡದ ಕಾರಣ 2024–25ನೇ ಸಾಲಿಗೂ ಹಿಂದೆ ಇದ್ದಷ್ಟೇ ಶುಲ್ಕ ಮುಂದುವರಿಸಲು ನಿರ್ಧರಿಸಲಾಗಿದೆ. ‌

ಪದವಿಪೂರ್ವ ಶಿಕ್ಷಣದ ನಿಯಮಗಳಂತೆ ಮೂರು ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆ ನಡೆಯುತ್ತದೆ. 2018-19ನೇ ಸಾಲಿನಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಕೋವಿಡ್‌ ನಂತರ ರಾಜ್ಯದ ಬಹುತೇಕ ಜನರ ಆರ್ಥಿಕ ಸ್ಥಿತಿಗತಿಗಳು ಏರುಪೇರಾದ ಕಾರಣ ಶುಲ್ಕ ಪರಿಷ್ಕರಣೆ ಮಾಡಿರಲಿಲ್ಲ. ಹಾಗಾಗಿ, ಐದು ವರ್ಷಗಳ ನಂತರ ಕಾಲೇಜುಗಳ ಪ್ರವೇಶ, ಬೋಧನಾ ಶುಲ್ಕ, ಪ್ರಯೋಗಾಲಯ, ಪ್ರಾಯೋಗಿಕ ಪರೀಕ್ಷೆ, ಹೊಸ ಕೋರ್ಸ್‌ಗಳ ಆರಂಭ, ವಿವಿಧ ಕೋರ್ಸ್‌ಗಳ ಸಂಯೋಜಕತ್ವಕ್ಕೆ ಶುಲ್ಕ ಹೆಚ್ಚಳ ಮಾಡಲು ಪದವಿಪೂರ್ವ ನಿರ್ದೇಶನಾಲಯ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿತ್ತು.  

ಕಾಲೇಜುಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಆದ್ಯತೆ, ಶೌಚಾಲಯಗಳ ನಿರ್ವಹಣೆ, ಸ್ವಚ್ಛತಾ ಕಾರ್ಯದ ವೆಚ್ಚವೂ ಸೇರಿದಂತೆ ಶುಲ್ಕ ಹೆಚ್ಚಳದ ಅಗತ್ಯವಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹೊರೆಯಾಗದಂತೆ ಪರಿಷ್ಕೃತ ಶುಲ್ಕಗಳನ್ನು ನಿಗದಿ ಮಾಡಲಾಗಿದೆ. 2013-14ರಲ್ಲಿ ಶೇ 30ರಷ್ಟು ಹಾಗೂ 2018-19ರಲ್ಲಿ ಶೇ 60ರಷ್ಟು ಶುಲ್ಕ ಹೆಚ್ಚಿಸಲಾಗಿತ್ತು. ಈ ಬಾರಿ ಕನಿಷ್ಠ ಶೇ 20ರಿಂದ 30ರಷ್ಟು ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಪ್ರಸ್ತಾವದಲ್ಲಿ ವಿವರಿಸಲಾಗಿತ್ತು.

‘ಶುಲ್ಕ ಹೆಚ್ಚಳ ಮಾಡದಿರುವುದು ಖಾಸಗಿ ಕಾಲೇಜುಗಳ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಆದರೆ, ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಬಾಲಕಿಯರು ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ₹796 ಹಾಗೂ ಸಾಮಾನ್ಯ ವರ್ಗದವರಿಗೆ ₹1,466 ಇದೆ. 2018ರ ನಂತರ ಶುಲ್ಕ ಹೆಚ್ಚಳ ಮಾಡಿಲ್ಲ. ಈ ಬಾರಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳ ಮಾಡಿದ್ದರೂ ಅನುಕೂಲವಾಗುತ್ತಿತ್ತು’ ಎನ್ನುತ್ತಾರೆ ಸರ್ಕಾರಿ ಕಾಲೇಜು ಪ್ರಾಂಶುಪಾಲರು.

2024–25ನೇ ಸಾಲಿಗೆ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಲಾಗಿದೆ. ಹಿಂದಿನ ಶುಲ್ಕವನ್ನೇ ಮುಂದುವರಿಸಲು ಸೂಚಿಸಲಾಗಿದೆ.
ರಿತೇಶ್‌ಕುಮಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 

ವರ್ಷಕ್ಕೆ ₹5 ಲಕ್ಷ ಶುಲ್ಕ!

ಸರ್ಕಾರ ಕಾಲಕಾಲಕ್ಕೆ ನಿಗದಿ ಮಾಡುವ ಶುಲ್ಕ ಖಾಸಗಿ ಪಿಯು ಕಾಲೇಜುಗಳಿಗೂ ಅನ್ವಯವಾಗುತ್ತದೆ. ಪ್ರಯೋಗಾಲಯ ಶುಲ್ಕ ₹336, ಪ್ರಾಯೋಗಿಕ ಪರೀಕ್ಷೆ ಶುಲ್ಕ ₹330 ಸೇರಿ ಖಾಸಗಿ ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಗೆ ಕ್ರಮವಾಗಿ ₹2,126 ಹಾಗೂ ₹3,132 ಪಡೆಯಬೇಕು. ಅದರಲ್ಲೂ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಬೋಧನಾ ಶುಲ್ಕ ₹1,330ರಲ್ಲಿ ಅರ್ಧದಷ್ಟು ಹಣವನ್ನು ಸರ್ಕಾರಕ್ಕೆ ಜಮೆ ಮಾಡಬೇಕು.

ಪೋಷಕರ ಸಮ್ಮತಿ ಮೇರೆಗೆ ಆಯಾ ಸಂಸ್ಥೆಗಳು ಕಾಲೇಜು ಅಭಿವೃದ್ಧಿ ಶುಲ್ಕವನ್ನು ಪಡೆಯಲು ನಿಯಮಗಳಲ್ಲೇ ಅವಕಾಶ ಕಲ್ಪಿಸಲಾಗಿದೆ. ಆದರೆ, ರಾಜ್ಯದ ಬಹುತೇಕ ವಿಜ್ಞಾನ ಪದವಿ ಪೂರ್ವ ಕಾಲೇಜುಗಳು ವರ್ಷಕ್ಕೆ ₹1 ಲಕ್ಷದಿಂದ ₹5 ಲಕ್ಷದವರೆಗೂ ಪಡೆಯುವೆ. ಆದರೆ, ಈ ಕುರಿತು ಹಲವು ಪೋಷಕರು ದೂರು ನೀಡಿದ್ದರೂ ಇಲಾಖೆ ಯಾವ ಕಾಲೇಜುಗಳ ವಿರುದ್ಧವೂ ಕ್ರಮಕೈಗೊಂಡಿಲ್ಲ. ‘ಕಳೆದ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 91 ಅಂಕಗಳಿಸಿದ್ದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದೆವು. ಸೀಟು ಸಿಕ್ಕಿತು. ವಸತಿ ಸೇರಿ ವಾರ್ಷಿಕ ಶುಲ್ಕ ₹4.75 ಲಕ್ಷ ಎಂದು ಹೇಳಿದರು. ಹಾಗಾಗಿ, ₹1.50 ಲಕ್ಷ ಕೊಟ್ಟು ಬೇರೆ ಕಾಲೇಜಿಗೆ ಸೇರಿಸಿದೆವು. ಈ ಕುರಿತು ಕಾಲೇಜಿನ ವಿರುದ್ಧ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ’ ಎನ್ನುತ್ತಾರೆ ಜೆಪಿ ನಗರದ ಪೋಷಕ ಆರ್‌.ಶಿವರಾಜ್‌. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT